1983
ಕೊನೆಗೂ ಆ ಕಾರನ್ನು ಚೇಸ್ ಮಾಡಿ ಹಿಡಿದೆ. ಸಿಟ್ಟಿನಿಂದ ಕುದಿಯುತ್ತಿದ್ದ ನಾನು ಕಾರಿನ ಮುಂದಿನ ಬಾಗಿಲು ಓಪನ್ ಮಾಡಿ ಚಾಲಕನ ಕತ್ತಿನ ಪಟ್ಟಿ ಹಿಡಿದು ಹೊರಗೆಳೆದೆ. ಇನ್ನೇನು ಕಪಾಳಕ್ಕೆ ಬಿಗಿಯಬೇಕು ಎನ್ನುವಷ್ಟರಲ್ಲಿ ‘ಸರ್ ಸರ್… ನಾನು ಬಂಗಾರಪ್ಪನವರ ಮಗ ಸರ್,’ ಎಂದವರು ಕೂಗಿಕೊಂಡರು! ಅದೇ ಹೊತ್ತಿಗೆ ಅಂದಿನ ಪೊಲೀಸ್ ಕಮಿಷನರ್ ಪಿ.ಜಿ. ಹರ್ಲಂಕರ್ ಅವರು ವೈರ್‌ಲೆಸ್ ಮೂಲಕ ಆ ಕಾರಿನ ಬಗ್ಗೆ ಮಾಹಿತಿ ಕೇಳಿದರು. ಆ ಕಾರು ಚಲಾಯಿಸುತ್ತಿದ್ದಾತನ ಕುರಿತು ಅವರು ಕಿಡಿಕಿಡಿಯಾಗಿದ್ದರು. ನಾನು ಅದು ಯಾರ ಕಾರೆಂಬುದನ್ನು ಅವರಿಗೆ ಹೇಳಿದೆ. ಅದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ‘ಬಂಗಾರಪ್ಪನವರ ಮಗ ಆಗಿರಲಿ, ಯಾರದೇ ಮಗ ಆಗಿರಲಿ ನಿಯಮ ಎಲ್ಲರಿಗೂ ಒಂದೇ, ಕಾರಣಕ್ಕೂ ಬಿಡಬೇಡಿ. ಸ್ಥಳದಲ್ಲೇ ದಂಡ ವಸೂಲು ಮಾಡಿಕೊಂಡು ಬನ್ನಿ.’ ಎಂದು ಆದೇಶ ನೀಡಿದರು.
ಅವರೇ ಮಾತು ಮುಂದುವರಿಸಿ ‘ಕಾರನ್ನು ಅತೀ ವೇಗವಾಗಿ ಚಲಾಯಿಸಿದ್ದು, ಅಜಾಗರೂಕತೆಯಿಂದ ಕಾರು ಓಡಿಸಿದ್ದು, ಸಿಗ್ನಲ್ ಜಂಪ್ ಮಾಡಿದ್ದು, ಟ್ರಾಫಿಕ್ ಪೊಲೀಶರ ಸೂಚನೆ ಧಿಕ್ಕರಿಸಿ ಹೋಗಿದ್ದು… ಹೀಗೆ ನಾಲ್ಕು ಪ್ರಕರಣಗಳನ್ನು ದಾಖಲಿಸಿ ಫೈನ್ ಹಾಕಿ,’ ಎಂದರು! ನಾನು ಇವಿಷ್ಟೂ ಉಲ್ಲಂಘನೆಯ ವಿವರ ದಾಖಲಿಸಿ ನೋಟಿಸ್ ನೀಡಿದೆ. ದಂಡದ ಮೊತ್ತ ಒಟ್ಟು ಒಂದು ಸಾವಿರ ರೂ. ಆಯಿತು.
ಬಂಗಾರಪ್ಪ ತಮ್ಮ ಮನೆಯ ಹೊರಗೆ ಏನೋ ಗಲಾಟೆ ನಡೆಯುತ್ತಿದೆಯಲ್ಲ ಎಂದುಕೊಂಡು ಹೊರಗೆ ಬಂದರು. ನನ್ನ ಬಳಿ ಬಂದು ಏನೆಂದು ವಿಚಾರಿಸಿದರು. ವಿಷಯ ತಿಳಿಯುತ್ತಿದ್ದಂತೆ ಮಗನ ಕಡೆ ತಿರುಗಿ ‘ನಾನು ಎಷ್ಟು ಸಲ ಹೇಳಿದ್ದೇನೆ ಓವರ್ ಸ್ಪೀಡ್ ಡ್ರೈವಿಂಗ್ ಮಾಡಬೇಡಾ ಅಂತ. ನನಗೆ ಗೊತ್ತಿಲ್ಲ, ನೀನೇ ಈಗ ದಂಡ ಕಟ್ಟು,’ ಎಂದು ಗದರಿದರು. ಸ್ವಲ್ಪ ಹೊತ್ತಿನ ಬಳಿಕ ಬಂಗಾರಪ್ಪನವರ ಪತ್ನಿ ಅಲ್ಲಿಗೆ ಬಂದರು, ಆಗ ಬಂಗಾರಪ್ಪನವರು ಅವರನ್ನುದ್ದೇಶಿಸಿ ‘ನೋಡೆ ನಿನ್ನ ಮಾಡಿರುವ ಘನಂದಾರಿ ಕೆಲಸ. ನಾನು ಎಷ್ಟು ಬಾರಿ ಹೇಳಿದರೂ ನಿನ್ನ ಮಗ ಕೇಳಿಸಿಕೊಳ್ಳುತ್ತಿಲ್ಲ. ನನಗೆ ಗೊತ್ತಿಲ್ಲ. ಈಗ ಅಮ್ಮ ಮತ್ತು ಮಗ ಸೇರಿ ಫೈನ್ ಕಟ್ಟಿ,’ ಎಂದು ಹೇಳಿ ಮನೆಯೊಳಗೆ ಹೋದರು!
ಸ್ವಲ್ಪ ಹೊತ್ತಿನ ಬಳಿಕ ಹಿಂತಿರುಗಿ ಬಂದು ‘ಏನಪ್ಪ… ಇದೊಂದು ಬಾರಿ ವಾರ್ನಿಂಗ್ ಕೊಟ್ಟು ಬಿಡಲಾಗುವುದಿಲ್ಲವೇ,’ ಎಂದು ವಿನಮ್ರತೆಯಿಂದ ಕೋರಿದರು. ‘ಸಾಧ್ಯ ಇಲ್ಲ ಸರ್, ಸ್ಪಾಟ್ ಫೈನ್ ಕಟ್ಟಲೇಬೇಕು,’ ಎಂದು ನಾನು ಗೌರವದಿಂದಲೇ ಹೇಳಿದೆ. ಆಗ ಬಂಗಾರಪ್ಪನವರು ಯಾವ ಊರಿನವರು,’ ಎಂದು ಕೇಳಿದರು. ‘ನಾನು ಕೊಡಗಿನವನು,’ ಎಂದೆ. ‘ಆಯ್ತು ಬಿಡಪ್ಪ,’ ಎಂದು ಹೊರಟು ಹೋದರು. ಅವರ ಪತ್ನಿ ಮನೆಯೊಳಗಿನಿಂದ ನೂರು ರೂ.ನ ಹತ್ತು ನೋಟುಗಳನ್ನು ಎಣಿಸುತ್ತ ಬಂದು ಮೌನವಾಗಿ ನನ್ನ ಕೈಗಿಟ್ಟರು. ನಾನು ರಶೀದಿ ಹರಿದು ಅವರ ಮಗನಿಗೆ ಕೊಟ್ಟೆ. ಅವರು ತಲೆ ತಗ್ಗಿಸಿಕೊಂಡು ಅಮ್ಮನನ್ನು ಹಿಂಬಾಲಿಸುತ್ತ ಮನೆಯೊಳಗೆ ಹೋದರು. ಅವರು ಕುಮಾರ್ ಬಂಗಾರಪ್ಪ!
ಬಂಗಾರಪ್ಪ ಅವರು ಆಗ ಕಾಂಗ್ರೆಸ್ ತೊರೆದು ಕ್ರಾಂತಿ ರಂಗ ಪಕ್ಷ ಕಟ್ಟಿದ್ದರು. ಕಾಂಗ್ರೆಸ್ ವಿರೋಧಿ ಅಲೆ ಎದ್ದಿತ್ತು. ಜನತಾ ಪಕ್ಷ ಮತ್ತು ಕ್ರಾಂತಿರಂಗ ಮೈತ್ರಿಕೂಟ ಅಧಿಕಾರಕ್ಕೇರುವ ಕ್ಷಣಗಣನೆ ಆರಂಭವಾಗಿತ್ತು. ಬಂಗಾರಪ್ಪ ಅವರು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಅವರು ಆ ಹೊತ್ತಿಗಾಗಲೇ ರಾಜ್ಯದ ಪ್ರಭಾವಿ ನಾಯಕರೆನಿಸಿದ್ದರು. ಹಲವಾರು ಐಎಎಸ್, ಐಪಿಎಸ್ ಅಧಿಕಾರಿಗಳು ಅವರಿಗೆ ಪರಮಾಪ್ತರಾಗಿದ್ದರು. ಅವರು ನೇರವಾಗಿ ಅಲ್ಲ, ಅವರ ಸಹಾಯಕರಿಂದ ಕಮಿಷನರ್‌ಗೆ ಫೋನ್ ಮಾಡಿಸಿದ್ದರೂ ದಂಡದಿಂದ ವಿನಾಯಿತಿ ಸಿಗುತ್ತಿತ್ತೇನೋ, ಹೀಗಿರುವಾಗ, ನಾನು ಅವರ ಮಗನನ್ನು ಮನೆ ಬಾಗಿಲವರೆಗೆ ಅಟ್ಟಾಡಿಸಿಕೊಂಡು ಹೋಗಿ ಹಾಕಿದರೂ ಬಂಗಾರಪ್ಪ ಸಿಡುಕಲಿಲ್ಲ. ತಮ್ಮ ಪ್ರಭಾವ ಬೀರಲು ಯತ್ನಿಸಲಿಲ್ಲ. ಅವರ ಈ ನಡೆ ನನಗೆ ಅಚ್ಚರಿಯುಂಟು ಮಾಡಿತು. ಫೈನ್ ಹಾಕಿ ಹಿಂತಿರುಗಿದ ಸಂಗತಿಯನ್ನು ನಾನು ಕಮಿಷನರ್‌ಗೆ ಹೇಳಿದೆ. ಅವರು ‘ಶಹಬ್ಬಾಸ್’ ಎಂದು ನನ್ನ ಬೆನ್ನು ತಟ್ಟಿದರು.
ಇಷ್ಟಕ್ಕೂ ಆಗಿದ್ದೇನೆಂದರೆ ಆಗ ನಾನು ಹಲಸೂರು ಸಬ್ ಡಿವಿಷನ್‌ನಲ್ಲಿ ಟ್ರಾಫಿಕ್ ಎಸ್‌ಐ ಆಗಿದ್ದೆ. ಸಂಚಾರ ನಿಯಮಗಳ ವಿಚಾರದಲ್ಲಿ ನಾನು ಬಹಳ ಕಟ್ಟುನಿಟ್ಟಾಗಿದ್ದೆ. ರೂಲ್ಸ್ ಬ್ರೇಕ್ ಮಾಡಿದವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾದರೂ ಮುಲಾಜಿಲ್ಲದೆ ಹಾಕುತ್ತಿದ್ದೆ. ನನ್ನ ಸೂಚನೆ ಧಿಕ್ಕರಿಸಿ ಯಾರಾದರೂ ಪರಾರಿಯಾದರೆ, ಅಂಥವರನ್ನು ನನ್ನ ಬುಲೆಟ್ ಬೈಕ್‌ನಲ್ಲಿ ಹತ್ತಾರು ಕಿ.ಮೀ. ದೂರದವರೆಗೆ ಚೇಸ್ ಮಾಡಿಕೊಂಡು ಹೋಗಿ ಹಿಡಿದು ತದಕುತ್ತಿದ್ದೆ. ನನಗೆ ಆ ದಿನಗಳಲ್ಲಿ ಹಾಗೆ ಚೇಸ್ ಮಾಡಿಕೊಂಡು ಹೋಗುವುದೆಂದರೆ ಭಾರೀ ಥ್ರಿಲ್ ಕೊಡುವ ಸಂಗತಿಯಾಗಿತ್ತು. ಅಂದಿನ ಕಮಿಷನರ್ ಹರ್ಲಂಕರ್ ಅವರ ಖಾಸಗಿ ಮನೆ ಇಂದಿರಾನಗರದಲ್ಲಿತ್ತು. ಅವರು ಆ ದಿನ ಬೆಳಗ್ಗೆ 9.30ಕ್ಕೆ ಇಂದಿರಾನಗರದಿಂದ ಕಮಿಷನರ್ ಆಫೀಸಿಗೆ ಬರುವಾಗ ನಾನು ಹಳೆಯ ವಿಮಾನ ನಿಲ್ದಾಣ ಕಾನ್‌ಸ್ಟೇಬಲ್ ಗೋಪಾಲ್ ಎಂಬುವರ ಜತೆ ಗಸ್ತಿನಲ್ಲಿದ್ದೆ.
ಕಮಿಷನರ್ ಕಾರು ಎಂ.ಜಿ.ರಸ್ತೆಯ ಟ್ರಿನಿಟಿ ಚರ್ಚ್ ಜಂಕ್ಷನ್‌ನಲ್ಲಿ ದಾಟುವಾಗ, ಸ್ಪರದ್ರೂಪಿ ಯುವಕನೊಬ್ಬ ಹೊಚ್ಚ ಹೊಸ ಮಾರುತಿ-800 ಕಾರನ್ನು ಮಿತಿ ಮೀರಿದ ವೇಗದಲ್ಲಿ ಚಲಾಯಿಸುತ್ತ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ. ಆ ಕಾರು ಕಮಿಷನರ್ ಕಾರಿಗೆ ಡಿಕ್ಕಿ ಹೊಡೆಯುವುದು ಕೂದಲೆಳೆಯ ಅಂತರದಲ್ಲಿ ತಪ್ಪಿತು! ಟ್ರಾಫಿಕ್ ಪೊಲೀಸರು ಕೈ ಅಡ್ಡ ಹಾಕಿದರೂ ಚಮಕಾಯಿಸಿಕೊಂಡು ಪರಾರಿಯಾದ. ಈ ಘಟನೆಯಿಂದ ಗಾಬರಿಗೊಂಡ ಕಮಿಷನರ್ ಕೋಪಗೊಂಡರು. ಆ ಕಾರಿನ ನಂ. ನೋಟ್ ಮಾಡಿಕೊಂಡು, ತಕ್ಷಣ ಆತನನ್ನು ಹಿಡಿದು ದಂಡ ಹಾಕುವಂತೆ ವೈರ್‌ಲೆಸ್‌ನಲ್ಲಿ ಆದೇಶ ನೀಡಿದರು.
(ಮುಂದೇನಾಯ್ತು? ನಾಳೆ ಓದಿ)
Discussion about this post