ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಉಚಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, 15 ಕ್ಷೇತ್ರಗಳಲ್ಲಿ 11 ಕಡೆ ಬಿಜೆಪಿ ಜಯಗಳಿಸುವ ಮೂಲಕ ಆಡಳಿತಾರೂಢ ಸರ್ಕಾರ ಸುರಕ್ಷಿತವಾಗಿದೆ.
ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 10 ಕ್ಷೇತ್ರಗಳಲ್ಲಿ ಈಗಾಗಲೇ ಜಯ ಸಾಧಿಸಿದ್ದು, ಬಹುತೇಕ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಖಚಿತವಾಗಿದೆ. ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಭಾರೀ ಮುಖಭಂಗಕ್ಕೊಳಗಾಗಿದೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಉಪಚುನಾವಣೆಯಲ್ಲಿ 9 ಸ್ಥಾನಗಳನ್ನು ಕಳೆದುಕೊಂಡು, ಅನರ್ಹ ಶಾಸಕರು ಗೆಲುವಿನ ನಗು ಬೀರಿದ್ದಾರೆ. ಅಲ್ಲದೇ ಕಳೆದ ಬಾರಿ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಎಸ್ ಕೂಡಾ ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡು ಮುಖಭಂಗಕ್ಕೊಳಗಾಗಿದೆ.
ಹಿರೇಕೂರಿನಲ್ಲಿ ಬಿ.ಸಿ. ಪಾಟೀಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಬನ್ನಿಕೋಡ್ ವಿರುದ್ಧ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ರಾಣೆಬೆನ್ನೂರಿನಲ್ಲಿ ಅರುಣ್ ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಹಾಗೂ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಹಲಗೇರಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ವಿರುದ್ಧ ಗೆಲುವು ಸಾಧಿಸಿದ್ದರೆ, ಮಹಾಲಕ್ಷ್ಮೀ ಲೇಔಟ್’ನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಎಂ. ಶಿವರಾಜು ಹಾಗೂ ಜೆಡಿಎಸ್ ಅಭ್ಯರ್ಥಿ ಕಾಂತರಾಜು ವಿರುದ್ಧ ವಿಜಯಮಾಲೆ ಧರಿಸಿದ್ದಾರೆ.
ವಿಜಯನಗರದಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿ.ವೈ. ಘೋರ್ಪಡೆ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಎಂ. ನಬಿ ವಿರುದ್ಧ ಗೆಲುವಿನ ನಗೆ ಬೀರಿದ್ದು, ಕೆ.ಆರ್. ಪುರದಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು ಅವರು, ಕಾಂಗ್ರೆಸ್ ಅಭ್ಯರ್ಥಿ ಎಂ. ನಾರಾಯಣ ಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧರಿಸಿದ್ದಾರೆ.
ಇನ್ನು, ಕೆ.ಆರ್. ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರು ಜೆಡಿಎಸ್ ಅಭ್ಯರ್ಥಿ ದೇವರಾಜ್ ಬಿಎಲ್ ವಿರುದ್ಧ ವಿಜಯಮಾಲೆ ಧರಿಸಿದ್ದು, ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಯವರು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹಾಗೂ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಅವರು ಕಾಂಗ್ರೆಸ್ ಅಭ್ಯರ್ಥಿ ಭರಮಗೌಡ ಕಾಗೆ ವಿರುದ್ಧ ಗೆಲುವು ಸಾಧಿಸಿದ್ದರೆ, ಇನ್ನು ಅಥಣಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಯವರು ಕಾಂಗ್ರೆಸ್ ಅಭ್ಯರ್ಥಿ ಜಿ.ಬಿ. ಮಂಗ್ಸೂಳಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post