ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಒತ್ತಾಯಿಸಿ ಅಪಹರಿಸಿರುವ ಆರೋಪದ ಮೇಲೆ ಸ್ಥಳೀಯ ಪೊಲೀಸರು ತಾಲೂಕಿನ ಪ್ರಶುರಾಮಪುರ ಗ್ರಾಮದ ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ
ಪರಶುರಾಮಪುರ ಗ್ರಾಮದ 17 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ಇದೇ ಗ್ರಾಮದ ಇವರ ಸಂಬಂಧಿಯಾದ ಬಾರ್‌ಬೆಂಡಿಂಗ್ ಕೆಲಸ ನಿರ್ವಹಿಸುತ್ತಿದ್ದ ಪವನ್ (21) ಎಂಬಾತ, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ನಿನ್ನನ್ನೇ ಮದುವೆಯಾಗುತ್ತೇನೆ. ನೀನು ನನ್ನನ್ನು ಪ್ರೀತಿಸಬೇಕು ಎಂದು ಒತ್ತಾಯಿಸಿ ಆಕೆಯನ್ನು ಅಪಹರಿಸಿ ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಪಿಜಿ ಹಾಸ್ಟಲ್‌ನಲ್ಲಿರಿಸಿದ್ದ ಎನ್ನಲಾಗಿದೆ.
ಬಾಲಕಿಯ ತಾಯಿ ಈ ಬಗ್ಗೆ ಪರಶುರಾಮಪುರ ಠಾಣೆಯಲ್ಲಿ ತನ್ನ ಮಗಳು ಅಪಹರಣವಾದ ಬಗ್ಗೆ ದೂರು ನೀಡಿದ ಹಿನ್ನೆಲೆ ಕಲಂ 363 ಐಪಿಸಿ ಮತ್ತು 12 ಮತ್ತು 18 ಫೋಕ್ಸೋ ಕಾಯ್ದೆಯಡಿ (ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕಾಯ್ದೆ) ಪ್ರಕರಣ ದಾಖಲಿಸಿಕೊಂಡು ಪಿಎಸ್‌ಐ ಕೆ.ಎನ್. ಚಂದ್ರಶೇಖರ ಹಾಗೂ ಠಾಣಾ ಸಿಬ್ಬಂದಿಯನ್ನೊಳಗೊಂಡ ತಂಡ ತನಿಖೆ ಕೈಗೊಂಡು ಆಂಧ್ರಪ್ರದೇಶದ ಅನಂತಪುರದಲ್ಲಿನ ಪಿಜಿ ಹಾಸ್ಟಲ್‌ನಲ್ಲಿಟ್ಟಿದ್ದ ಬಾಲಕಿಯನ್ನು ವಾಪಾಸ್ ಕರೆತರಲಾಗಿದೆ ಎಂದು ತಿಳಿದುಬಂದಿದೆ.
ಬಾಲಕಿಯು ಅಪ್ರಾಪ್ತೆಯಾಗಿದ್ದ ಕಾರಣ ಆರೋಪಿಯನ್ನು ದಸ್ತಗಿರಿ ಮಾಡಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪಿಸಲಾಗಿದೆ ಎಂದು ಠಾಣಾ ಪಿಎಸ್‌ಐ ಕೆ.ಎನ್. ಚಂದ್ರಶೇಖರ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ. ರಾಧಿಕಾ ಅವರು ಸದರಿ ಪ್ರಕರಣದಲ್ಲಿ ಬಾಲಕಿ ಮತ್ತು ಆರೋಪಿಯನ್ನು ಪತ್ತೆ ಮಾಡಿದ ಠಾಣಾ ಪಿಎಸ್‌ಐ ಕೆ.ಎನ್. ಚಂದ್ರಶೇಖರ ಮತ್ತು ಠಾಣಾ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















