ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ದಾಳಿಂಬೆ ಬೆಳೆದು ಕೈ ಸುಟ್ಟುಕೊಂಡಿದ್ದ ಚಳ್ಳಕೆರೆ ತಾಲೂಕಿನ ಪಗಡಲಬಂಡೆಯ ರೈತ ಡ್ರಾಗನ್ ಫ್ರೊಟ್ ಬೆಳೆದು ಲಾಭದ ದಾರಿಗೆ ಮರಳಿದ್ದಾರೆ.
ಪಗಡಲಬಂಡೆ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ರೈತ ಕೆ.ಆರ್. ಭಾನುಪ್ರಕಾಶ್ ತಮ್ಮ 3.5 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆಯನ್ನು ಬೆಳೆದಿದ್ದರು. ಆದರೆ ಕಾರಣಾಂತರಗಳಿಂದ ದಾಳಿಂಬೆ ಬೆಳೆ ಕೈಕೊಟ್ಟಿತು. ಇದರಿಂದ ನೊಂದು ಸುಮ್ಮನೆ ಕೈಕಟ್ಟಿ ಕೂರಲಿಲ್ಲ. ಅದೇ 3.5 ಎಕರೆಯ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಎಕರೆಗೆ 5-8 ಲಕ್ಷ ರೂಪಾಯಿ ಆದಾಯ ಗಳಿಸುವ ಮೂಲಕ ಕೃಷಿ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಹೌದು… ರೈತ ಆರ್. ಕೆ. ಭಾನುಪ್ರಕಾಶ್ ಗುಜರಾತಿನಿಂದ ಒಂದು ಸಸಿಗೆ 53ರೂ. ನೀಡಿ ಸಾಲಿನಿಂದ ಸಾಲಿಗೆ 11.15 ಕಂಬದಿಂದ ಕಂಬಕ್ಕೆ 7 ಅಂತರದಲ್ಲಿ ಒಂದು ಕಲ್ಲು ಕಂಬ ನೆಟ್ಟು ಅದರ ಸುತ್ತ 4 ಗಿಡಗಳನ್ನು ನೆಟ್ಟಿದ್ದಾರೆ. 2020ರಲ್ಲಿ ನಾಟಿ ಮಾಡಿದ ಗಿಡಗಳು ಸುಮಾರು 1500 ಕಲ್ಲು ಕಂಬದ ಸುತ್ತ ಸುಮಾರು 6000 ಗಿಡಗಳಿವೆ. ಒಂದು ಎಕರೆಗೆ ಐದು ಲಕ್ಷ ರೂ. ವೆಚ್ಚವಾಗಿದೆ ಸರಾಸರಿ 3000 ಕೆಜಿ ಸಿಕ್ಕಿದೆ. ವ?ದಲ್ಲಿ ಎರಡು ಬೆಳೆಗಳು ಸಿಗುತ್ತವೆ ಎನ್ನುತ್ತಾರೆ ಇವರು.
ರಾಸಾಯನಿಕ ಗೊಬ್ಬರ ಬಳಸದೆ ಜೀವಾಮೃತ ಸಾವಯವ ಗೊಬ್ಬರ ಬಳಸಿ ಬೆಳೆಯಲಾಗುತ್ತಿದೆ. ಕೈಸುಟ್ಟುಕೊಂಡು ಆತ್ಮಹತ್ಯೆಯ ದಾರಿ ಹಿಡಿಯುವ ಬದಲು ತೋಟಗಾರಿಕೆ ಸಹಕಾರದಿಂದ ಹಣ್ಣಿನ ಬೆಳೆಗಳನ್ನು ಬೆಳೆದು ಆರ್ಥಿಕ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ಭಾನುಪ್ತಕಾಶ್ ರೈತರಿಗೆ ಸಲಹೆ ನೀಡಿದ್ದಾರೆ.

ಚಳ್ಳಕೆರೆ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ಮಾತನಾಡಿ, ತಾಲೂಕಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಈಗಾಗಲೇ ತಾಲೂಕಿನಲ್ಲಿ 25 ಎಕರೆಯಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಉತ್ತಮ ಲಾಭದ ಜೊತೆಗೆ ಒಳ್ಳೆಯ ಇಳುವರಿ ಹಾಗೂ ವಾತವರಣಕ್ಕೆ ಹೊಂದಿಕೊಳ್ಳುತ್ತದೆ. ಜೊತೆಗೆ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಉದ್ಯೋಗಖಾತ್ರಿಯಡಿ 1.5 ಲಕ್ಷ ರೂ. ಸೌಲಭ್ಯ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಡ್ರಾಗನ್ ಫ್ರೂಟ್ ಡಯಾಬಿಟಿಸ್, ಡೆಂಗ್ಯೂ, ರಕ್ತದೊತ್ತಡ ಚರ್ಮರೋಗ ಭಾದೆಗೆ ಬಳಕೆ ಮಾಡಲಾಗುತ್ತದೆ ಹಾಗೂ ಡ್ರ್ಯಾಗನ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ರಾಜ್ಯದಲ್ಲಿ ಮಾರುಕಟ್ಟೆ ಕೊರತೆ ಕಾರಣವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಮುಂಬೈ, ಗುಜರಾತ್‌ಗೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















