ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನವೋದಯ ಕನ್ನಡ ಕಾವ್ಯ ಸಂದರ್ಭದಲ್ಲಿ ಅನುಭಾವದ ನೆಲೆಗಳನ್ನು ತಮ್ಮ ಕಾವ್ಯಗಳಲ್ಲಿ ಮೂಡಿಸಿದವರು ಮತ್ತು ತಮ್ಮ ಬದುಕನ್ನು ಅನುಭಾವದ ನೆಲೆಗೆ ಶೃತಿಗೊಳಿಸಿಕೊಂಡ ಇಬ್ಬರು ಕವಿಗಳೆಂದರೆ ಬೇಂದ್ರೆ ಮತ್ತು ಮಧುರಚೆನ್ನರು ಎಂದು ಹಿರಿಯ ವಿದ್ವಾಂಸರು ಹಾಗೂ ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ನಿಕಟಪೂರ್ವ ಅಧ್ಯಕ್ಷರಾದ ಡಾ.ಶ್ಯಾಮಸುಂದರ ಬಿದರಕುಂದಿ ತಿಳಿಸಿದರು.
ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು, ಗಾಂಧಿ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಅನ್ನಪೂರ್ಣ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕವಿ, ಲೇಖಕ, ಸಂಶೋಧಕ ಡಾ. ಸತ್ಯಮಂಗಲ ಮಹಾದೇವ ಅವರು ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವದ ಸ್ವರೂಪ-ತೌಲನಿಕ ಅಧ್ಯಯನ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನೆಯ ಸಾರರೂಪದ ಕೃತಿ ’ಕಂಗಳ ಬೆಳಗು’ ಕೃತಿಯ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.
ಭವ-ಭಾವ-ಅನುಭ-ಅನುಭಾವ ಇದು ಬೇಂದ್ರೆಯವರ ಅನುಭಾವವು ಬೆಳಗು ಪದ್ಯದ ಮೂಲಕ ಅನಾವರಣಗೊಳ್ಳುವ ಆತ್ಮಾನಂದದ ಸ್ಥಿತಿಯ ಅನುಭಾವ. ಸ್ವಾನುಭಾವವನ್ನು ಸ್ವಭಾವೋಕ್ತಿ ಮಾಡಿ ಬರೆಯುವ, ನಿಜ ಬದುಕಿನಲ್ಲಿ ಕಂಡುಕೊಂಡ ವಿಶ್ವಚಾಲಕ ಶಕ್ತಿಯ ಸತ್ವಯುತ ಚಿಂತನೆಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಜಗತ್ತಿನ ಎಲ್ಲಾ ಅನುಭಾವಿಗಳ ವಿಚಾರಗಳೊಂದಿಗೆ ತನ್ನ ಆಲೋಚನೆಗಳನ್ನು ಹೋಲಿಸಿ ನೋಡಿ ಕೊನೆಗೆ ಶ್ರೀ ಅರವಿಂದರ ವಿಚಾರಗಳ ಜೊತೆ ಹೋಲಿಸಿ ತನ್ನ ಅನುಭಾವದ ತನ್ಮಯತೆಗೆ ತೆರೆದುಕೊಳ್ಳುವ ಮಧುರಚೆನ್ನರ ಅನುಭಾವದ ನೆಲೆ ಆತ್ಮಶೋಧ. ಇಬ್ಬರೂ ಕವಿಗಳು ಶ್ರೀ ಅರವಿಂದ್ರನ್ನು ಗುರುಗಳೆಂದು ಭಾವಿಸಿದ್ದರು. ತಮ್ಮ ವಿಚಾರಗಳ ಚಿಂತನೆಯಲ್ಲಿ ಭಿನ್ನತೆಯಿದ್ದರೂ ಗುರಿ ಒಂದೇ ಅನುಭಾವದ ಶೋಧವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವದ ಸ್ವರೂಪವನ್ನು – ತೌಲನಿಕವಾಗಿ ಅಧ್ಯಯನ ನಡೆಸಿದ ಸಂಶೋಧನಾ ಕೃತಿಯಾಗಿ ಅಪೂರ್ವವಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ತಿಳಿಸಿದರು. . ಪ್ರಸಿದ್ಧ ಅಂಕಣಕಾರರು, ವಿಮರ್ಶಕರೂ ಆದ ಡಾ.ಟಿ.ಎನ್.ವಾಸುದೇವ ಮೂರ್ತಿ ಅವರು ಕೃತಿ ಪರಿಚಯ ಮಾಡಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಗಾಂಧೀ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್. ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಎಸ್.ಸತೀಶ್ ಹಾಗೂ ಕೃತಿಯ ಲೇಖಕ ಸತ್ಯಮಂಗಲ ಮಹಾದೇವ, ಅನ್ನಪೂರ್ಣ ಪ್ರಕಾಶನದ ಬಿ.ಕೆ. ಸುರೇಶ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post