ಚಿತ್ರದುರ್ಗ: ಜಿಲ್ಲೆಯ ಐತಿಹಾಸಿಕ ಶ್ರೀ ಕ್ಷೇತ್ರ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಮಾರ್ಚ್ 5 ರಿಂದ 16 ರವರೆಗೆ ನಡೆಯಲಿದ್ದು, ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುಲು ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೂತ್ ಪ್ರಿಯಾ ಸೂಚನೆ ನೀಡಿದರು.
ಜಿಲ್ಲಾಡಳಿತದ ವತಿಯಿಂದ ಅಯೋಜಿಸಿದ್ದ ಶ್ರೀ ಕ್ಷೇತ್ರ ನಾಯಕನಹಟ್ಟಿ ಗುರುತಿಪ್ಪೇರುದ್ರ ಸ್ವಾಮಿ ಜಾತ್ರೆಯ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ಬಾರಿಯು ಜಿಲ್ಲಾಡಳಿತದಿಂದ ಜಾತ್ರೆಗೆ ಸಂಬಂಧ ಪಟ್ಟಂತೆ ಕೆಲವು ಸಮಿತಿಗಳನ್ನು ರಚಿಸಿದ್ದು, ಅಧಿಕಾರಿಗಳು ಜಾತ್ರೆ ಸಿದ್ದತಾ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕಾರ್ಯಕ್ರಮ ಯಶಸ್ವಿಯಾಗುವತ್ತ ಗಮನ ಹರಿಸಬೇಕು. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರಿನ ಕೊರತೆ ಕಾಡಬಾರದು. ಜನನಿಬಿಡಿ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್’ಗಳ ವ್ಯವಸ್ಥೆ ಮಾಡಬೇಕು. ನೀರಿನ ಟ್ಯಾಂಕರ್’ಗಳ ಮೇಲೆ ದೂರವಾಣಿ ಸಂಖ್ಯೆ ಹಾಗೂ ಕುಡಿಯುವ ನೀರು ಸರಬರಾಜು ಸೌಲಭ್ಯಕ್ಕಾಗಿ ಸಹಾಯವಾಣಿ ಸಂಖ್ಯೆಯನ್ನು ನಮೂದಿಸಬೇಕು. ಗುಣಮಟ್ಟ ಹಾಗೂ ಶುದ್ಧ ಕುಡಿಯುವ ನೀರು ಕಾಲಕಾಲಕ್ಕೆ ಭಕ್ತರಿಗೆ ಅಗತ್ಯವಾಗಿ ಸರಬರಾಜು ಮಾಡಬೇಕು. ಜಾತ್ರೆ ಸುತ್ತಮುತ್ತಲಿನ ಪ್ರದೇಶ ಮತ್ತಿತರ ಸೌಲಭ್ಯವನ್ನು ಪಟ್ಟಣ ಪಂಚಾಯ್ತಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ಡಿ. ಭೂತಪ್ಪ ಅವರಿಗೆ ಸೂಚಿಸಿದರು.
ಜಾತ್ರೆ ನಡೆಯುವ ಪ್ರಮುಖ ಬೀದಿಗಳಲ್ಲಿ ರಸ್ತೆ ದುರಸ್ತಿ ಕಾರ್ಯ ಶೀಘ್ರವಾಗಿ ಮುಗಿಸಬೇಕು. ದೇವಸ್ಥಾನದ ಪ್ರಸಾದ ನೀಡುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಆಹಾರವನ್ನು ಪರೀಕ್ಷಿಸದೇ ಭಕ್ತಾದಿಗಳಿಗೆ ವಿತರಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಾತ್ರೆ ಸಂದರ್ಭದಲ್ಲಿ ಹಾಕಲಾಗುವ ಅಂಗಡಿ ಹೋಟೆಲ್ ಮಳಿಗೆಗಳ ಜಾಗಕ್ಕೆ ಅನುಗುಣವಾಗಿ ಕರ ವಸೂಲಿ ಕಾರ್ಯವಾಗಬೇಕು ಅಥವಾ ಈ ಕಾರ್ಯವನ್ನು ಟೆಂಡರ್’ದಾರರಿಗೆ ವಹಿಸಿದ್ದರೆ ಇದರ ಸಂಪೂರ್ಣ ಹೊಣೆಗಾರರು ಟೆಂಡರ್’ದಾರರೇ ಆಗಿರುತ್ತಾರೆ ಎಂದರು.
ವಿದ್ಯುತ್ ಸರಬರಾಜು ವ್ಯವಸ್ಥೆ ಸಮರ್ಪಕಗೊಳಿಸುವ ಜೊತೆಯಲ್ಲಿ, ದೇವಸ್ಥಾನ ಸಮಿತಿ ಹಾಗೂ ಪಟ್ಟಣ ಪಂಚಾಯ್ತಿ ವತಿಯಿಂದ ಗ್ರಾಮದಲ್ಲಿ ಬೀದಿ ದೀಪಗಳ ನಿರ್ವಹಣೆಯಾಗಬೇಕು. ದೇವಸ್ಥಾನ ಸಮಿತಿಯಿಂದ ಹೈಮಾಸ್ಟ್ ದೀಪದ ವ್ಯವಸ್ಥೆ, ವಾಹನ ನಿಲುಗಡೆ ಸ್ಥಳಗಳಲ್ಲಿಯೂ ದೀಪದ ವ್ಯವಸ್ಥೆ ಮಾಡಬೇಕು. ಹೋಟೆಲ್ ಮತ್ತು ಅಂಗಡಿಗಳಲ್ಲಿ ಮಾರಾಟ ಆಹಾರ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿರಬೇಕು ಎಂದರು.
ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಿದ್ದಲ್ಲಿ ಟೆಂಡರ್’ದಾರರೆ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ಹಸಿ ಹಾಗೂ ಒಣ ಕಸ ಸಂಗ್ರಹಣಾ ಬುಟ್ಟಿಯನ್ನು ಟೆಂಡರ್’ದಾರರು ಪ್ರತಿ ಅಂಗಡಿ ಮಳಿಗೆಗಳಿಗೆ ವಿತರಿಸಬೇಕು. ತಪ್ಪಿದಲ್ಲಿ ಟೆಂಡರ್’ದಾರರನ್ನೇ ಹೊಣೆ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಮಳಿಗೆಯ ಮಾಲೀಕರು ಅಥವಾ ಟೆಂಡರ್’ದಾರರು ವಿದ್ಯುತ್ ಸಂಪರ್ಕ ಪಡೆಯಲು ತಾತ್ಕಾಲಿಕವಾಗಿ ಅನುಮತಿ ಪಡಯಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಬೆಸ್ಕಾಂ ಇಲಾಖೆ ಅಧಿಕಾರಿಗೆ ತಿಳಿಸಿದರು.
ಪ್ರಾಣಿಬಲಿ ನಿಷೇಧ
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಆವರಣ ಸೇರಿದಂತೆ ಸುತ್ತಲು 1 ಕಿಮೀ ದೂರದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗುವುದು. ಪ್ರಾಣಿಬಲಿ ನಿಷೇಧ ಪ್ರಚಾರಕ್ಕಾಗಿ ಅಗತ್ಯವಾಗಿ ಬೇಕಾದ ಕರ ಪತ್ರ, ಬ್ಯಾನರ್’ಗಳನ್ನು ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಉಪವಿಭಾಗಾಧಿಕಾರಿ ವಿ. ಪ್ರಸನ್ನ ಮಾತನಾಡಿ, ಆರೋಗ್ಯ ಮತ್ತು ನೈರ್ಮಲ್ಯೀಕರಣ ದಿನಕ್ಕೆ ಮೂರು ಬಾರಿ ಸ್ವಚ್ಚತಾ ಕಾರ್ಯ ನಡೆಯಬೇಕು. ನೀರಿನ ಟ್ಯಾಂಕರ್’ಗಳ ಬಳಿ ಕಡ್ಡಾಯವಾಗಿ ಕಸದ ಸಂಗ್ರಹಣಾ ಬುಟ್ಟಿಯ ವ್ಯವಸ್ಥೆ ಮಾಡಬೇಕು ಹಾಗೂ ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚು ಕಸದ ಬುಟ್ಟಿಯ ವ್ಯವಸ್ಥೆ ಆಗಬೇಕು ಎಂದರು.
ಚಳ್ಳಕೆರೆ ಡಿವೈಎಸ್’ಪಿ ರೋಷನ್ ಜಮೀರ್ ಮಾತನಾಡಿ, ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 1500ಕ್ಕಿಂತ ಹೆಚ್ಚು ರಕ್ಷಣಾ ಸಿಬ್ಬಂದಿ, 100 ಜನ ಮಫ್ತಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಕಳ್ಳತನ ಮತ್ತು ಜಾತ್ರೆಯಲ್ಲಿ ತಪ್ಪಿಸಿಕೊಂಡ ಮಕ್ಕಳ ಬಗ್ಗೆ ತುರ್ತು ಕ್ರಮಕೈಗೊಳ್ಳಲಾಗುವುದು. ಪ್ರಮುಖ ಸ್ಥಳಗಳಲ್ಲಿ ಕೌಂಟರ್ ವ್ಯವಸ್ಥೆ ಮಾಡಲಾಗುವುದು. ಜಾತ್ರೆಗೆ ವಿವಿಧ ಮಾರ್ಗಗಳಿಂದ ಬರುವ ರಸ್ತೆಗಳಲ್ಲಿ 7 ಕಡೆ ಚೆಕ್’ಪೋಸ್ಟ್’ಗಳನ್ನು ನಿರ್ಮಿಸಿ ಪ್ರಾಣಿಬಲಿ ನಿಷೇಧಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಅಧ್ಯಕ್ಷ ರವಿಶಂಕರ್, ಚಳ್ಳಕೆರೆ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನಯ್ಯ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post