ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಗ್ರಾಮ ಒನ್ ಕೇಂದ್ರಗಳಲ್ಲಿ ಸ್ವೀಕೃತವಾಗುವಂತಹ ಅರ್ಜಿಗಳನ್ನು ಪಡೆಯುವಾಗಲೇ ಕೂಲಂಕುಷವಾಗಿ ಪರಿಶೀಲಿಸಿದಲ್ಲಿ ಅರ್ಜಿಗಳನ್ನು ವಜಾ ಮಾಡುವ ಸಂಭವವೇ ಉದ್ಭವಿಸುವುದಿಲ್ಲ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದ್ದಾರೆ.
ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಗ್ರಾಮ ಒನ್ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್‌ಗಳ ಕಾರ್ಯ ವಿಮರ್ಶಣೆ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಒನ್ ಕೇಂದ್ರಕ್ಕೆ ಬಂದ ಯಾವುದೇ ಅರ್ಜಿಗಳನ್ನು ವಜಾ ಮಾಡದೆ, ಅರ್ಜಿಗಳನ್ನು ಪರಿಶೀಲನೆ ಹಂತದಲ್ಲಿ ಸರಿಪಡಿಸಿಕೊಂಡು ಸಾರ್ವಜನಿಕರಿಗೆ ಸರ್ಕಾರದ 150 ಸೇವೆಗಳನ್ನು ಪ್ರಾಮಾಣಿಕವಾಗಿ ಒದಗಿಸಿದಲ್ಲಿ ನೀವುಗಳು ಈ ಸಮಾಜದ ಋಣ ತೀರಿಸಿದಂತಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಸಮಾಜದ ದುರ್ಬಲ ವರ್ಗದವರು ತಾಲೂಕು ಕಚೇರಿ, ನಾಡ ಕಚೇರಿಗಳನ್ನು ಅಲೆದಾಡುವುದನ್ನು ತಪ್ಪಿಸಿ ಗ್ರಾಮದ ಕೇಂz ಸ್ಥಾನದಲ್ಲಿ ಅವರುಗಳ ಜೀವನಕ್ಕೆ ಅವಶ್ಯವಾಗಿರುವ ಕೆಲಸ ಕಾರ್ಯಗಳನ್ನು ಅದೇ ಗ್ರಾಮದಲ್ಲಿ ಪೂರೈಸಬೇಕು ಎನ್ನುವ ಸದುದ್ದೇಶದಿಂದ ಈ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಸ್ವೀಕರಿಸುವಂತಹ ಯಾವುದೇ ಅರ್ಜಿಗಳನ್ನು ವಜಾ ಮಾಡಬಾರದು ಅವಶ್ಯವಾಗಿ ಬೇಕಾಗಿರುವಂತಹ ದಾಖಲೆಗಳನ್ನು ಸರಿಪಡಿಸುವಂತೆ ಸಾರ್ವಜನಿಕರಿಗೆ ತಿಳಿಸಿ ಪಡೆಯಬೇಕು ಎಂದರು.
Also read: ಒಂದು ಕುಟುಂಬ ಒಂದು ಟಿಕೆಟ್: ಹೊಸ ನೀತಿ ಜಾರಿಗೆ ತರಲು ಮುಂದಾದ ಕಾಂಗ್ರೆಸ್!
ತಾಲೂಕಿನಲ್ಲಿ ಅತ್ಯಂತ ಹಿಂದುಳಿದವರು, ಕಡು ಬಡವ ಜನರಿದ್ದು ಇವರುಗಳ ಅರ್ಜಿಯನ್ನು ವಜಾ ಮಾಡುವುದು ಸಮಂಜಸವಾಗುವುದಿಲ್ಲ. ಆದುದರಿಂದ ಮುಂದಿನ ದಿನಗಳಲ್ಲಿ ಗ್ರಾಮ ಒನ್ ಕೇಂದ್ರಗಳಲ್ಲಿ ಯಾವುದೇ ಅರ್ಜಿಗಳನ್ನು ಗ್ರಾಮ ಒನ್ ಕೇಂದ್ರದ ಆಪರೇಟರ್‌ಗಳು ವಜಾ ಮಾಡುವುದಿಲ್ಲವೆಂದು ಪರಿಪೂರ್ಣ ದಾಖಲಾತಿಗಳನ್ನು ಸಾರ್ವಜನಿಕರಿಂದ ಪಡೆದು ಇವರಿಗೆ ಸೇವೆಯನ್ನು ಒದಗಿಸುತ್ತೇವೆ ಎಂದು ಪ್ರಮಾಣೀಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಸಂಧ್ಯಾ, ಉಪ ತಹಶೀಲ್ದಾರ್ ಗಿರೀಶ್, ಎಲ್ಲಾ ತಾಲೂಕು ಮಟ್ಟದ ಆಪರೇಟರ್ ಗಳು ಮತ್ತಿತರು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post