ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಚೌಳೂರು ಗ್ರಾಮದೇವರುಗಳಾದ ಶ್ರೀ ವೀರಭದ್ರೇಶ್ವರಸ್ವಾಮಿ, ಆಂಜನೇಯಸ್ವಾಮಿಯ ಕಡೇ ಕಾರ್ತಿಕೋತ್ಸವದ ಅಂಗವಾಗಿ ಶುಕ್ರವಾರ ಸೂರ್‍ಯಾಸ್ತದ ವೇಳೆಗೆ ವೇದಾವತಿ ನದಿಯ ಚೆಕ್‌ಡ್ಯಾಂ ಕಮ್ ಬ್ರಿಡ್ಜ್‌ನಲ್ಲಿ ಸಂಗ್ರಹವಾದ ನೀರಿನಲ್ಲಿ (ನದಿ)ತೆಪ್ಪೋತ್ಸವ ನಡೆಸಿದರು.
ದೇವರ ಮೂರ್ತಿಗಳನ್ನು ವಿವಿಧ ಜಾನಪದ ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ದು ನದಿಯ ಬಳಿ ವಿವಿಧ ಹೂವು, ಕೆಂಪು ವಸ್ತ್ರಗಳು, ವಿವಿಧ ಬಣ್ಣದ ಅಲಂಕಾರಿಕ ಸಾಮಗ್ರಿಗಳಿಂದ ಅಲಂಕೃತಗೊಳಸಿದ್ದ ತೆಪ್ಪದೊಳಗೆ ಸ್ವಾಮಿಯ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ತೆಪ್ಪವನ್ನು ಹರ್ಷೋದ್ಗಾರಗಳೊಂದಿಗೆ ಸಾಗಿಸಿದರು.
ಗ್ರಾಮದ ಕೆಲ ಭಕ್ತರು ಅಗ್ನಿಶಾಮಕದಳವು ವ್ಯವಸ್ಥೆ ಮಾಡಿದ್ದ ಲೈಫ್‌ಜಾಕೇಟ್ ಧರಿಸಿ ತೆಪ್ಪವನ್ನು ನದಿಯ ಮಧ್ಯದವರೆಗೆ ತೆಗೆದುಕೊಂಡು ಹೋದರು. ಕಾರ್ತಿಕೋತ್ಸವದಲ್ಲಿ ಪ್ರಥಮ ಬಾರಿಗೆ ಗ್ರಾಮಸ್ಥರು ಆಯೋಜಿಸಿದ್ದ ತೆಪ್ಪೋತ್ಸವವನ್ನು ಕಣ್ತುಂಬಿಕೊಳ್ಳಲು ಆಗಮಸಿದ್ದ ವಿವಿಧೆಡೆಯ ಭಕ್ತರು ಬ್ಯಾರೇಜ್ ಕಮ್ ಬ್ರಿಡ್ಜ್ ಮೇಲೆ ನಿಂತು ಕೇಕೆ ಶಿಳ್ಳೆ ಹಾಕಿ ಉತ್ಸವಕ್ಕೆ ಮೆರುಗು ತಂದರು.
ಸುತ್ತೇಳು ಹಳ್ಳಿಗಳ ಜನರು ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ವೇದಾವತಿ ನದಿಯಲ್ಲಿ ಆಯೋಜಿಸಿದ್ದ ತೆಪ್ಪೋತ್ಸವವನ್ನು ವೀಕ್ಷಿಸಲು ತಂಡೋಪತಂಡವಾಗಿ ಆಗಮಿಸಿ ತದೇಕಚಿತ್ತದಿಂದ ಈ ತೆಪ್ಪೋತ್ಸವದ ದೃಶ್ಯವನ್ನು ಕಣ್ತುಂಬಿಕೊಂಡರು
ನೆರೆದಿದ್ದ ಎಲ್ಲಾ ಭಕ್ತರಿಗೂ ಪ್ರಸಾದ ವಿತರಿಸಲಾಯಿತು ಶುಕ್ರವಾರ ರಾತ್ರಿಯಿಡೀ ದೇವಸ್ಥಾನದ ಬಳಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಟಿ ರಘುಮೂರ್ತಿ, ದೇವಸ್ಥಾನದ ಸಮಿತಿಯ ಕನ್ವಿನರ್ ಗೌಡ ರುದ್ರಣ್ಣ, ಶಿವಣ್ಣ, ನಿರಂಜನ, ಮಲ್ಲಿಕಾರ್ಜುನಪ್ಪ, ಕಲಿವೀರಪ್ಪ, ಈರಪ್ಪ, ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಮಾಜಿ ಅಧ್ಯಕ್ಷರಾದ ಹನುಮಂತರಾಯ, ಚಿಕ್ಕಣ್ಣ, ಮುಖಂಡರಾದ ಕುಮಾರ, ಕೇಶವ, ಬಸವರಾಜ, ಸಿಪಿಐ ಆನಂದಪ್ಪ, ಅಗ್ನಿಶಾಮಕ ಅಧಿಕಾರಿ ಜಯಣ್ಣ, ಪಿಎಸ್‌ಐ ಡಿ ಸಿ ಸ್ವಾತಿ, ಎಎಸ್‌ಐ ರವೀಂದ್ರ, ಮಂಡಲ್ ಪ್ರಧಾನ ಲಿಂಗಣ್ಣ, ಪ್ರಕಾಶ, ಲೋಕೇಶ, ವೀರಭದ್ರಪ್ಪ, ಕ್ಯಾತಣ್ಣ, ತಿಪ್ಪೇಸ್ವಾಮಿ, ಸುತ್ತೇಳು ಹಳ್ಳಿಗಳ ಗ್ರಾಮಸ್ಥರು, ದೇವಸ್ಥಾನ ಸಮಿತಿಯ ಸದಸ್ಯರು, ಗ್ರಾಮಸ್ಥರು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post