ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ನಿರಂತರವಾಗಿ ತೆರಿಗೆ ವಂಚನೆ #Tax evasion ಹಿನ್ನೆಲೆಯಲ್ಲಿ ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್’ಗೆ #Actor Vijay 1.5 ಕೋಟಿ ರೂ. ದಂಡ ಪಾವತಿಸುವಂತೆ ನೋಟೀಸ್ ನೀಡಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲೂ ಸಹ ಹಿನ್ನಡೆಯಾಗಿದೆ.
ಸರಿಯಾದ ರೀತಿಯಲ್ಲಿ ಆದಾಯ ತೆರಿಗೆ #Incime Tax ಪಾವತಿಸದೇ ವಂಚನೆ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ 1.5 ಕೋಟಿ ರೂ. ದಂಡ ಪಾವತಿಸುವಂತೆ ವಿಜಯ್’ಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿ ಮಾಡಿತ್ತು.
ನೋಟೀಸ್ ನೀಡಿರುವುದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ #High Court ಮೆಟ್ಟಿಲೇರಿದ್ದರು. ಆದರೆ, ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿರುವ ಹಿನ್ನೆಲೆಯಲ್ಲಿ ಅವರಿಗೆ ಭಾರೀ ಹಿನ್ನಡೆಯಾಗಿದೆ.
ಆದಾಯ ತೆರಿಗೆ ಇಲಾಖೆಯ ಪ್ರಕಾರ, ವಿಜಯ್ ಅವರು 2015–16ನೇ ಸಾಲಿನಲ್ಲಿ ಸುಮಾರು 15 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಸರಿಯಾಗಿ ಘೋಷಿಸಿಲ್ಲ. ಈ ಹಿನ್ನೆಲೆಯಲ್ಲಿ 2015ರ ಸೆಪ್ಟೆಂಬರ್‌ನಲ್ಲಿ ನಡೆಸಿದ ಆದಾಯ ತೆರಿಗೆ ಶೋಧದ ನಂತರ 1.50 ಕೋಟಿ ರೂ. ದಂಡ ವಿಧಿಸಲಾಗಿತ್ತು. ಈ ದಂಡದ ಆದೇಶವನ್ನು ಪ್ರಶ್ನಿಸಿ ವಿಜಯ್ 2022ರಲ್ಲಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ, ಕಳೆದ ತಿಂಗಳು ತೀರ್ಪನ್ನು ಕಾಯ್ದಿರಿಸಿದ್ದರು.
ಶುಕ್ರವಾರ ತೀರ್ಪು ಪ್ರಕಟಿಸಿದ ಅವರು, ತೆರಿಗೆ ಅಧಿಕಾರಿಗಳು ಹೊರಡಿಸಿದ್ದ ಶೋಕಾಸ್ ನೋಟಿಸ್ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 263 ಅಡಿಯಲ್ಲಿ ನಿಗದಿಪಡಿಸಿರುವ ಸಮಯ ಮಿತಿಯೊಳಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಜೊತೆಗೆ, ದಂಡ ವಿಧಿಸುವ ಪ್ರಕ್ರಿಯೆಯಲ್ಲಿ ಯಾವುದೇ ಕಾರ್ಯವಿಧಾನದ ದೋಷಗಳು ಕಂಡುಬಂದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆದರೆ, ಕಾಲಮಿತಿಯನ್ನು ಹೊರತುಪಡಿಸಿ ಇತರ ಆಧಾರಗಳ ಮೇಲೆ ನೋಟಿಸ್ ಮತ್ತು ದಂಡದ ಆದೇಶವನ್ನು ಪ್ರಶ್ನಿಸಲು ವಿಜಯ್ ಅವರಿಗೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT)ಯನ್ನು ಸಂಪರ್ಕಿಸುವ ಅವಕಾಶವನ್ನು ನ್ಯಾಯಾಲಯ ನೀಡಿದೆ. ಹೀಗಾಗಿ, ಮುಂದಿನ ಹಂತದಲ್ಲಿ ವಿಜಯ್ ಈ ಪ್ರಕರಣವನ್ನು ಐಟಿಎಟಿ ಮುಂದೆ ಕೊಂಡೊಯ್ಯುವ ಸಾಧ್ಯತೆ ಇದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









