ಶಿವಮೊಗ್ಗ: ನಾಶವಾಗುತ್ತಿರುವ ಪರಿಸರವನ್ನು ತಡೆಗಟ್ಟುವಲ್ಲಿ ಇಂದಿನ ಮಕ್ಕಳು ಮುಂದಾಗಬೇಕು ಎಂದು ಜಿಲ್ಲಾ ನ್ಯಾಯಾಧೀಶ ನಟರಾಜನ್ ಕರೆ ನೀಡಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಿವಪ್ಪನಾಯಕ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ಮಕ್ಕಳು ಪರಿಸರ ಕಾಪಾಡುವ ಬಗ್ಗೆ ವಿಶೇಷ ಗಮನ ವಹಿಸದೇ ಇದ್ದರೆ, ಮುಂದೆ ಇದೇ ವಿಚಾರ ನಮ್ಮನ್ನು ಕಾಪಾಡುತ್ತದೆ. ಒಂದುದಿನದ ಕಾರ್ಯಕ್ರಮವಾಗದೇ, ಮರಗಳು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿರುವುದರಿಂದ ಪರಿಸರದ ಮೇಲೆ ಅವು ಪ್ರಭಾವ ಬೀರುತ್ತಿವೆ ಎಂದರು.
ಪರಿಸರಕ್ಕೆ ಸಂಬಂಧಿಸಿದ ವಿಚಾರಗಳನ್ನು ಇಂದಿಗೆ ಮಾತ್ರ ನೆನಪಿಟ್ಟುಕೊಳ್ಳದೇ ಅದನ್ನು ಸಾರ್ವಕಾಲಿಕವಾಗಿ ಪಾಲಿಸಿಕೊಂಡು ಬರಬೇಕು. ವೃಕ್ಷಗಳ ಬಗ್ಗೆ ಪುರಾತನ ಜ್ಞಾನವನ್ನು ನಾವು ಮರೆಯುತ್ತಿದ್ದೇವೆ. ಆದರೆ, ವಿದೇಶದಲ್ಲಿ ಇದನ್ನು ಸದುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದ ಅವರು, ನೆಲ, ಜಲ, ಪರಿಸರವನ್ನು ಕಾಪಾಡಿದರೆ ನಮ್ಮ ಬದುಕು ಸುಂದರವಾಗಿರುತ್ತದೆ. ಆದ್ದರಿಂದ ಪರಿಸರ ಸಂಬಂಧ ವಿಚಾರಗಳನ್ನು ವಿದ್ಯಾರ್ಥಿಗಳು ದಿನನಿತ್ಯ ಪಾಲಿಸಬೇಕು ಎಂದು ಕರೆ ನೀಡಿದರು.
ಸಂತೆ ಕಡೂರಿನ ಪರಿಸರ ಅಧ್ಯಯನ ಕೇಂದ್ರದ ಮುಖ್ಯಸ್ಥ ಜಿ.ಎಲ್. ಜನಾರ್ಧನ, ಕರ್ನಾಟಕ ರಾಜ್ಯ ಮಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ವೈ.ಎನ್. ಹರಿಶಂಕರ್, ಪರಿಸರ ಅಧ್ಯಯನ ಕೇಂದ್ರದ ಪ್ರೊ. ಎಸ್. ಚಂದ್ರಶೇಖರ್, ನ್ಯಾಯಧೀಶ ಸೋಮಶೇಖರ್ ಬದಾಮಿ, ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಶೇಜೇಶ್ವರ ನಾಯಕ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋಣಿ ಎಸ್ ಮರಿಯಪ್ಪ, ಡಯೆಟ್ ಉಪನ್ಯಾಸ ಸಿ.ನಾಗೇಂದ್ರ, ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಭೂಪಾಳಂ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಶೇಷಾಚಲ ಇದ್ದರು.
















