ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಲೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಬುದ್ಧ ಶಿಷ್ಯ ಪರಂಪರೆಯನ್ನು ರೂಪಿಸುವುದು ಮಹತ್ವದ ಕಾರ್ಯವಾಗಿದೆ ಎಂದು ಹಿರಿಯ ಮೃದಂಗ ವಿದ್ವಾಂಸ ಎಂ. ವಾಸುದೇವರಾವ್ ಹೇಳಿದರು.
ದೊಡ್ಡಕಲ್ಲಸಂದ್ರದ ಡಮರು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಶ್ರೀವಾಣಿ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್ #SrivaniCenterForPerformingArts ಸಂಸ್ಥೆ 27ನೇ ವಾರ್ಷಿಕೋತ್ಸವ ‘ವೈಭವಂ 2026’ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾರಂಗಕ್ಕೆ ಬರುತ್ತಿರುವ ನವ ಪ್ರತಿಭೆಗಳು ಲಯಬದ್ಧವಾದ ಪ್ರಸ್ತುತಿಗಳನ್ನು ನೀಡಿ ಕ್ಷೇತ್ರಕ್ಕೆ ಮೆರಗು ತರಬೇಕು. ಈ ನಿಟ್ಟಿನಲ್ಲಿ ಗುರುಗಳ ಜವಾಬ್ದಾರಿಯೂ ಗುರುತರವಾಗಿವೆ ಎಂದರು.
ಹಿರಿಯ ಕೊಳಲು ವಿದ್ವಾಂಸ ವೇಣುಗೋಪಾಲ್ ಮಾತನಾಡಿ, ವಸುಧಾ ಮತ್ತು ಬಾಲಕೃಷ್ಣ ದಂಪತಿ 3 ದಶಕಗಳಿಂದ ಕಲಾರಾಧನೆಯಯಲ್ಲಿ ತೃಪ್ತಿ ಕಂಡುಕೊಂಡಿದ್ದಾರೆ. ಹಲವು ಯುವ ಕಲಾವಿದರನ್ನು ಸಂಗೀತ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿರುವುದು ಮಹತ್ತರ ಸಾಧನೆ ಎಂದರು.
ಇದೇ ಸಂದರ್ಭ ಖ್ಯಾತ ಮೃದಂಗ ಕಲಾವಿದ ಎ.ವಿ. ಆನಂದ್ ಅವರಿಗೆ ಎಸ್‌ವಿವಿ ಸ್ಮಾರಕ ಪ್ರಶಸ್ತಿ, ಹಿರಿಯ ಭರತನಾಟ್ಯ ಕಲಾವಿದೆ ಡಾ. ರಂಗಶ್ರೀ ಮತ್ತು ಕೊಳಲು ವಿದ್ವಾಂಸ ಎ.ಪಿ. ಸರ್ವೋತ್ತಮ ಅವರಿಗೆ ಶ್ರೀವಾಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ. ರಂಗಶ್ರೀ ಅವರು ಮಾತನಾಡಿ, ಬಾಲಕೃಷ್ಣ ಮತ್ತು ವಸುಧಾ ದಂಪತಿ ಸಂಗೀತ ಮತ್ತು ನೃತ್ಯ ರಂಗದ ಇತರ ಕಲಾವಿದರಿಗೂ ವೇದಿಕೆ ನೀಡುವ ವಿಶಾಲ ಮನೋಭಾವ ಹೊಂದಿರುವುದು ಮಾದರಿಯಾಗಿದೆ ಎಂದರು.
ರಂಜಿಸಿದ ಕಛೇರಿಗಳು
ವಿದ್ವಾನ್ ಬಾಲಕೃಷ್ಣರ ಶಿಷ್ಯರಿಂದ ಲಯ ವೈಭವಂ, ವಿದ್ವಾನ್ ಎ.ವಿ. ಆನಂದ್ ಮತ್ತು ಶಿಷ್ಯರಿಂದ ಲಯ ಸಂವಾದ, ವಿದುಷಿಯರಾದ ಶಶಿಕಲಾ ನಾರಾಯಣಸ್ವಾಮಿ ವೀಣೆ ಮತ್ತು ವಿಜಯಲಕ್ಷ್ಮೀ ಸುಬ್ರಹ್ಮಣ್ಯಂ ಅವರ ಪಿಟೀಲು ವಾದನ ಕಛೇರಿ ರಂಜಿಸಿತು.
ವಿದುಷಿ ರೂಪಾ ರಾಜೇಶ್- ರಾಜಶ್ರೀ ಹೊಳ್ಳರ ಶಿಷ್ಯೆಯರಿಂದ ಕೂಚಿಪುಡಿ ನೃತ್ಯ, ಜನನಿ ಮುರಳಿಯವರಿಂದ ಕಾಶೀಯಾತ್ರೆ- ವಿಷಯಾಧಾರಿತ ಭರತನಾಟ್ಯ ರಸಿಕರ ಮನಸೂರೆಗೊಂಡವು.
ಉದಯೋನ್ಮುಖ ಕಲಾವಿದರಾದ ಹೇರಂಭ-ಹೇಮಂತರಿಂದ ದ್ವಂದ್ವ ಪಿಟೀಲು ವಾದನ ಕಛೇರಿಗೆ ಪ್ರಣವ ಬಾಲಕೃಷ್ಣರ ಮೃದಂಗ ಮತ್ತು ವೆಲತಂಜೂರು ಶ್ರೀಜಿತ್ ಘಟ ಸಹಕಾರ ಮನೋಜ್ಞವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















