ಸಾಗರ: ಪ್ರೀತಿಸಲು ನಿರಾಕರಿಸಿದ ಕಾರಣಕ್ಕಾಗಿ ಭಗ್ನ ಪ್ರೇಮಿಯೊಬ್ಬ ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಆಗಮಿಸಿ ಯುವತಿಗೆ ಚಾಕುವಿನಿಂದ ಇರಿದ ಘಟನೆ ಅಣಲೆಕೊಪ್ಪದಲ್ಲಿ ಇಂದು ನಡೆದಿದೆ.
ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ನಿವಾಸಿ ರಾಕೇಶ್(22)ಆರೋಪಿ ಎಂದು ಗುರುತಿಸಲಾಗಿದೆ.
ಯುವತಿ ಮನೆಯ ಪಕ್ಕದಲ್ಲಿಯೇ ಆರೋಪಿ ರಾಕೇಶ್ ಸಂಬಂಧಿಕರಿದ್ದರು. ಹೀಗಾಗಿ ರಾಕೇಶ್ ಆಗಾಗ ಬಂದು ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಯುವಕನ ಕಿರುಕುಳು ಹೆಚ್ಚಾದ ಹಿನ್ನೆಲೆಯಲ್ಲಿ ಯುವತಿ ರೋಸಿಹೋಗಿದ್ದಳು ಎನ್ನಲಾಗಿದೆ. ಆದರೆ, ಆರೋಪಿ ರಾಕೇಶ್ ಇಂದು ಬೆಳಗ್ಗೆ ಯುವತಿಗೆ ರಾಖಿ ಕಟ್ಟು ಬಾ ಎಂದು ಕರೆದಿದ್ದ ಎನ್ನಲಾಗಿದ್ದು, ಯುವತಿಯು ರಾಖಿ ಕಟ್ಟಲು ಹೋದಾಗ ಆರೋಪಿಯು ಯುವತಿಯ ಮುಖಕ್ಕೆ ಚಾಕುವಿನಿಂದ ತಿವಿದು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಗಾಯಾಳು ಯುವತಿಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಾಗಿದೆ.
















