ಕಲ್ಪ ಮೀಡಿಯಾ ಹೌಸ್ | ಶಬರಿಮಲೆ |
ಮುಂಬರುವ ಮಂಡಲಂ ಮಹೋತ್ಸವದ ಸಂದರ್ಭದಲ್ಲಿ ಅರವಣ ಸೇರಿದಂತೆ ವಿವಿಧ ಪ್ರಸಾದಗಳ ತಯಾರಿಕೆಗೆ ಇನ್ನು ಮುಂದೆ ಹೊರಗಿನಿಂದ ತುಪ್ಪ ಖರೀದಿಸದಿರಲು ತಿರುವಾಂಕೂರು ದೇವಸ್ವಂ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಶಬರಿಮಲೆಗೆ ಆಗಮಿಸುವ ಭಕ್ತರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತುಪ್ಪವನ್ನು ಕಾಣಿಕೆಯಾಗಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಇನ್ನು ಮುಂದೆ ಭಕ್ತರು ಸಮರ್ಪಿಸುವ ತುಪ್ಪವನ್ನೇ ಪ್ರಸಾದ ತಯಾರಿಕೆಗೆ ಬಳಸಲಾಗುವುದು ಎಂದು ತಿಳಿಸಿದರು.
“ಹೊರಗಿನಿಂದ ತುಪ್ಪ ಖರೀದಿ ಮಾಡುವ ಅಗತ್ಯವಿಲ್ಲ. ದೇವರೇ ನಮಗೆ ಈ ದಾರಿ ತೋರಿಸಿದ್ದಾನೆ,” ಎಂದು ಅವರು ಹೇಳಿದರು.
ಇದೇ ವೇಳೆ, ಮಿಲ್ಮಾ ಸಂಸ್ಥೆಯಿಂದ ದೇವಾಲಯಕ್ಕೆ ಸರಬರಾಜಾಗುತ್ತಿದ್ದ ತುಪ್ಪ ಪೂರೈಕೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಡೈರಿ ಅಭಿವೃದ್ಧಿ ಇಲಾಖೆಯ ತನಿಖೆಯಿಂದ ಬೆಳಕಿಗೆ ಬಂದಿದೆ. ಸುಮಾರು 1.5 ಲಕ್ಷ ಲೀಟರ್‌ಗಿಂತ ಹೆಚ್ಚು ಕಳಪೆ ಗುಣಮಟ್ಟದ ತುಪ್ಪ ದೇವಾಲಯಕ್ಕೆ ಪೂರೈಕೆಯಾಗಿದ್ದು, ಇದರಿಂದ ಮಿಲ್ಮಾಗೆ ₹85 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Also read>> ಅವಾಚ್ಯ ಪದ ಬಳಕೆ | ನನಗಿನ್ನೂ 15 ವರ್ಷ, ತಪ್ಪಾಯ್ತು ಕ್ಷಮಿಸಿ | ಪ್ರಧಾನಿ ಕ್ಷಮೆಯಾಚಿಸಿದ ಬಾಲಕಿ
ಈ ಪ್ರಕರಣದ ಕುರಿತು ಕ್ರೈಂ ಬ್ರಾಂಚ್ ತನಿಖೆ ನಡೆಸುವಂತೆ ದೇವಸ್ವಂ ಕಾರ್ಯದರ್ಶಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಈ ವಿಷಯ ಸೇರಿದಂತೆ ಮುಂದಿನ ಕ್ರಮಗಳ ಬಗ್ಗೆ ದೇವಸ್ವಂ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆ. ಜಯಕುಮಾರ್ ಸ್ಪಷ್ಟಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










