ಕಲ್ಪ ಮೀಡಿಯಾ ಹೌಸ್ | ಧರ್ಮಸ್ಥಳ |
ಮರಳು ಸಾಗಾಣಿಕೆದಾರರಿಂದ ಕಮಿಷನ್ ಪಡೆದಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆರೋಪದ ಹಿನ್ನೆಲೆಯಲ್ಲಿ ತಾವು ಯಾವುದೇ ಹಣ ಪಡೆದಿಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಧರ್ಮಸ್ಥಳದಲ್ಲಿ ಇಂದು ಮಂಜುನಾಥ ಸ್ವಾಮಿಯ ಮುಂದೆ ಪ್ರಮಾಣ ಮಾಡಿದ್ದಾರೆ.
ಸಾಗರ ಹಾಗೂ ಹೊಸನಗರ ಮರಳು ಸಾಗಾಣಿಕೆದಾರರಿಂದ ಶಾಸಕರು ಕಮಿಷನ್ ಪಡೆದಿದ್ದಾರೆ ಇದು ಸತ್ಯವಲ್ಲ ಎಂದಾದರೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಎಂದು ಗೋಪಾಲಕೃಷ್ಣ ಸವಾಲು ಹಾಕಿದ್ದರು. ಇದನ್ನು ಗಂಭೀರವಾಗಿ ಸ್ವೀಕರಿಸಿದ ಶಾಸಕ ಹಾಲಪ್ಪ ಇಂದು ಧರ್ಮಸ್ಥಳಕ್ಕೆ ಆಗಮಿಸಿ ತಾವು ಸಾಗರ ಹಾಗೂ ಹೊಸನಗರ ಮರಳು ಸಾಗಾಣಿಕೆದಾರರಿಂದ ಯಾವುದೇ ರೀತಿಯ ಕಮಿಷನ್ ಪಡೆದಿಲ್ಲ ಎಂದು ಮಂಜುನಾಥ ಸ್ವಾಮಿಯ ಮುಂದೆ ಪ್ರಮಾಣ ಮಾಡಿದ್ದಾರೆ. ಅಲ್ಲದೆ ಶ್ರೀಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಈ ವಿಚಾರ ಕುರಿತಂತೆ ಅರಿಕೆ ಮಾಡಿಕೊಂಡಿದ್ದಾರೆ.
ಆನಂತರ ಮಾತನಾಡಿದ ಹಾಲಪ್ಪ, ಮಾಜಿ ಶಾಸಕರು ಹಾಕಿದ್ದ ಸವಾಲನ್ನು ಸ್ವೀಕರಿಸಿ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುವುದಾಗಿ ಹೇಳಿದ್ದೆ ಆ ನಂತರದಲ್ಲಿ ಮಾತು ಬದಲಾಯಿಸಿದ ಅವರು, ನನ್ನ ಸ್ನೇಹಿತರಾದ ವಿನಾಯಕ್ ರಾವ್ ಹಾಗೂ ನನ್ನ ಅಣ್ಣನ ಮಗ ರವೀಂದ್ರ ಕಮಿಷನ್ ಪಡೆದಿದ್ದಾರೆ ಎಂದು ದೂರಿದ್ದರು. ಹೀಗಾಗಿ ಅವರಿಬ್ಬರನ್ನು ಇಂದು ನನ್ನೊಂದಿಗೆ ಕರೆದುಕೊಂಡು ಬಂದು ಮರಳು ಸಾಗಾಣಿಕೆದಾರರಿಂದ ನಾವುಗಳಾರು ಕಮಿಷನ್ ಪಡೆದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದೇನೆ. ಇಷ್ಟಕ್ಕೂ ಅವರಿಗೆ ಇನ್ನೂ ಅನುಮಾನಗಳಿದ್ದರೆ, ನನ್ನ ವಿರುದ್ಧ ಕಾನೂನಾತ್ಮಕವಾಗಿ ಪ್ರಕರಣ ದಾಖಲಿಸಲಿ. ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ನಾನು ಇಂದು ಇಲ್ಲಿಗೆ ಆಗಮಿಸುವುದಾಗಿ ಮುಂಚೆಯೇ ಮಾಜಿ ಶಾಸಕರಿಗೆ ತಿಳುವಳಿಕೆ ನೋಟಿಸ್ ನೀಡಿದ್ದೆ. ಆದರೆ ಅವರು ಇನ್ನೂ ಆಗಮಿಸಿಲ್ಲ ಎಂದು ನುಡಿದರು.
10:30ರ ವೇಳೆಗೆ ಗೋಪಾಲಕೃಷ್ಣ ಅವರು ಧರ್ಮಸ್ಥಳಕ್ಕೆ ಆಗಮಿಸಿದ್ದು, ತಾವು ಪ್ರಮಾಣ ಮಾಡುವರೇ ಎಂಬುದನ್ನು ಕಾದು ನೋಡಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post