ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಗ್ರಾಮೀಣ ಯುವಕರು ಮತ್ತು ಯುವತಿಯರಿಗೆ ಭವಿಷ್ಯಕ್ಕೆ ಅಗತ್ಯವಾದ ಡಿಜಿಟಲ್ ಕೌಶಲಗಳನ್ನು ಕಲಿಸುವುದು ಸಂಸ್ಥೆಯ ಆದ್ಯತೆಯಾಗಿದೆ. ಎನ್‌ಎಸ್‌ಡಿಸಿ ದೃಢೀಕೃತ ತರಬೇತಿಯಿಂದ ಯುವಜನರಲ್ಲಿ ಸ್ವಾವಲಂಬನೆ ಮತ್ತು ವೃತ್ತಿಪರ ನೈಪುಣ್ಯತೆ ವೃದ್ಧಿಯಾಗಲಿದೆ ಎಂದು ವಿಐಎಸ್ಎಲ್-ಐಒಕೆ ಸಿಇಓ ಶ್ರೀಶೈಲ ಗೌಡ ಹೇಳಿದರು.
ವೇದಾಂತ ಫೌಂಡೇಶನ್ ಆಶ್ರಯದಲ್ಲಿ ವಿಐಎಸ್ಎಲ್ – ಐರನ್ ಓರ್ ಕರ್ನಾಟಕ (ಐಓಕೆ) ವತಿಯಿಂದ ನಡೆಸಲ್ಪಡುತ್ತಿರುವ ಹಿರೇಗುಂಟನೂರು ಹಾಗೂ ಸಿರಿಗೆರೆಯ ವೇದಾಂತ ಕಂಪ್ಯೂಟರ್ ಕೇಂದ್ರಗಳಲ್ಲಿ (ವಿಸಿಸಿ) ಈ ಪ್ರಮಾಣಪತ್ರ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಪ್ರಮುಖ ಸಾಮಾಜಿಕ ಕಳಕಳಿಯ ಕಾರ್ಯಕ್ರಮವಾದ ಪ್ರಾಜೆಕ್ಟ್ ವೃದ್ಧಿ ಅಡಿಯಲ್ಲಿ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ (ಎನ್‌ಎಸ್‌ಡಿಸಿ) ಮಾನ್ಯತೆ ಪಡೆದ ಆರು ತಿಂಗಳ ಅವಧಿಯ ವೃತ್ತಿಪರ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ಶಿಬಿರಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಗ್ರಾಮೀಣ ಭಾಗದ ಯುವಜನತೆ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ, ಪ್ರಮುಖ ಸಮಗ್ರ ಕಬ್ಬಿಣ ಮತ್ತು ಉಕ್ಕು ಉತ್ಪಾದನಾ ಸಂಸ್ಥೆಯಾದ ವೇದಾಂತ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ (ವಿಐಎಸ್ಎಲ್) ವತಿಯಿಂದ ಜಿಲ್ಲೆಯ 50ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉಚಿತ ಡಿಜಿಟಲ್ ಕೌಶಲ ತರಬೇತಿ ನೀಡಿ ಪ್ರಮಾಣಪತ್ರ ವಿತರಿಸಲಾಯಿತು.
Also read>> ಜೀವನಕ್ಕೆ ಸನ್ಮಾರ್ಗ ತೋರಿದ ಪ್ರತಿಯೊಬ್ಬ ವ್ಯಕ್ತಿಯು ಗುರುಗಳೇ: ಅಶ್ವತ್ ಅಭಿಮತ
ಹಿರೇಗುಂಟನೂರಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣ ನಾಯ್ಕ್ ಮಾತನಾಡಿ, ಕಳೆದ ಐದು ವರ್ಷಗಳಿಂದ ವೇದಾಂತ ಕಂಪ್ಯೂಟರ್ ಕೇಂದ್ರಗಳು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಅಗತ್ಯ ತಾಂತ್ರಿಕ ಜ್ಞಾನ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಐ ಸೇರಿದಂತೆ ಅತ್ಯಾಧುನಿಕ ಡಿಜಿಟಲ್ ಕೋರ್ಸ್‌ಗಳು ಗ್ರಾಮೀಣ ಯುವಜನರ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಮತ್ತು ಅವರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಲು ದಾರಿದೀಪವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತರಬೇತಿ ಪಡೆದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿ ಹಾಗೂ ಸಿದ್ದಾಪುರ ಗ್ರಾಮದ ನಿವಾಸಿ ಯುವರಾಜ್ ಸಿ. ತಮ್ಮ ಅನಿಸಿಕೆ ಹಂಚಿಕೊಂಡು, ಕಳೆದ ಆರು ತಿಂಗಳ ಪ್ರಾಯೋಗಿಕ ತರಬೇತಿಯು ಡಿಜಿಟಲ್ ಕ್ಷೇತ್ರದಲ್ಲಿ ಮುನ್ನಡೆಯಲು ನನಗೆ ನೆರವಾಗಿದ್ದು, ಉದ್ಯೋಗಾವಕಾಶಗಳ ಭರವಸೆ ಹೆಚ್ಚಿಸಿದೆ ಎಂದರು.
2021 ರಿಂದೀಚೆಗೆ ಸಂಸ್ಥೆಯು ಮೂಲಭೂತ ಕಂಪ್ಯೂಟರ್ ಬಳಕೆ, ಫೈನಾನ್ಷಿಯಲ್ ಅಕೌಂಟಿಂಗ್ ಹಾಗೂ ಎಐ ತಂತ್ರಜ್ಞಾನಗಳಲ್ಲಿ 2,600ಕ್ಕೂ ಹೆಚ್ಚು ಗ್ರಾಮೀಣ ಯುವಕ-ಯುವತಿಯರಿಗೆ ಯಶಸ್ವಿಯಾಗಿ ತರಬೇತಿ ನೀಡಿದೆ. ಅಲ್ಲದೆ, ಸಿಎಸ್‌ಆರ್ ಯೋಜನೆಗಳ ಭಾಗವಾಗಿ ಆರೋಗ್ಯ, ಶಿಕ್ಷಣ, ಜೀವನೋಪಾಯ ವೃದ್ಧಿ ಹಾಗೂ ನಂದ್ ಘರ್ ಯೋಜನೆಯಡಿ 150 ಅಂಗನವಾಡಿಗಳ ಅಭಿವೃದ್ಧಿಗೂ ಸಂಸ್ಥೆ ಸಕ್ರಿಯ ಕೊಡುಗೆ ನೀಡುತ್ತಿದೆ.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಜಾಕಿರ್ ಸಾಬ್, ಮೋಹನ್ ಕುಮಾರ್, ತರಬೇತಿದಾರರು, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








