ಭದ್ರಾವತಿ: ಮಲೆನಾಡು ಭಾಗದ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗದಿಂದ ತಿರುಪತಿ ಹಾಗೂ ಚೆನ್ನೈಗೆ ಎರಡು ರೈಲುಗಳ ನೇರ ಸಂಚಾರಕ್ಕೆ ರೈಲ್ವೆ ಇಲಾಖೆ ಅನುಮತಿ ನೀಡಲು ಚಿಂತಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಕಲ್ಪ ನ್ಯೂಸ್’ಗೆ ಮಾಹಿತಿ ನೀಡಿರುವ ರೈಲ್ವೆ ಇಲಾಖೆ ಮೈಸೂರು ವಿಭಾಗೀಯ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥ್, ಮಲೆನಾಡು ಭಾಗದ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗದಿಂದ ಆಂಧ್ರಪ್ರದೇಶದ ತಿರುಪತಿ ಹಾಗೂ ತಮಿಳುನಾಡು ರಾಜಧಾನಿ ಚೆನ್ನೈಗೆ ನೇರ ರೈಲು ಸಂಚಾರಕ್ಕೆ ಇಲಾಖೆ ಬಹುತೇಕ ಒಪ್ಪಿಕೊಂಡಿದೆ ಎಂದಿದ್ದಾರೆ.
ಇಲಾಖೆ ಒಪ್ಪಿಗೆ ನೀಡುವ ಮುನ್ನ ಈ ಕುರಿತಂತೆ ರೈಲು ಬೋಗಿ, ಎಂಜಿನ್ ಲಭ್ಯತೆ, ಸಮಯ ಹಾಗೂ ಮಾರ್ಗ ಹೊಂದಾಣಿಕೆ, ಸಂಚಾರ ದಿನಗಳು ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು, ಅಂತಿಮವಾದ ತತಕ್ಷಣ ಆದೇಶ ಹೊರಡಿಸಲಾಗುತ್ತದೆ. ಇನ್ನೊಂದು ತಿಂಗಳಲ್ಲಿ ಈ ಕುರಿತು ಅಧಿಕೃತ ಘೋಷಣೆ ಅಥವಾ ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂದಿದ್ದಾರೆ.
ಶಿವಮೊಗ್ಗದಿಂದ ಬೆಂಗಳೂರು ಮಾರ್ಗವಾಗಿ, ರೈಲು ಪ್ರಯಾಣ ಮಾರ್ಗದ ಚರ್ಚೆ ನಡೆದಿದ್ದು, ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್’ಗೆ ಅನುಮತಿ ದೊರೆಯುವ ಸಾಧ್ಯತೆಯಿದೆ ಎಂದಿದ್ದಾರೆ.
ಸಂಸದ ರಾಘವೇಂದ್ರ ಸತತ ಪ್ರಯತ್ನ
ಮಲೆನಾಡು ಭಾಗದ ರೈಲ್ವೆ ಪ್ರಯಾಣಿಕರಿಗೆ ಈಗಾಗಲೇ ಸಾಕಷ್ಟು ಕೊಡುಗೆ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸತತ ಪ್ರಯತ್ನ ನಡೆಸುತ್ತಿದ್ದು, ಇದಕ್ಕೆ ರೈಲ್ವೆ ಇಲಾಖೆಯೂ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಶಿವಮೊಗ್ಗದಿಂದ ಚೆನ್ನೈ ಹಾಗೂ ತಿರುಪತಿಗೆ ನೇರ ರೈಲು ಬೇಕು ಎಂಬ ಸಾರ್ವಜನಿಕ ಮನವಿಯನ್ನು ಸಂಸದ ರಾಘವೇಂದ್ರ ಇಲಾಖೆಗೆ ಮನವರಿಕೆ ಮಾಡಿಕೊಟ್ಟು ನಿರಂತರವಾಗಿ ಇಲಾಖೆಯ ಮೇಲೆ ಒತ್ತಡ ಹಾಕಿದ್ದಾರೆ.
Discussion about this post