ಈ ಬಾರಿಯ ಲೋಕಸಭಾ ಚುನಾವಣೆಗೂ ಮುನ್ನ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಸಮೀಕ್ಷೆ ನಡೆಸುವ ಮೂಲಕ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜಿಲ್ಲೆಯ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿತ್ತು. ಸುಮಾರು 20 ದಿನಗಳ ಕಾಲ ಶಿವಮೊಗ್ಗ ಕ್ಷೇತ್ರದಾದ್ಯಂತ ಸಂಚಾರ ನಡೆಸಿ, ಜನರ ಮನದಾಳದ ಮಾತಿಗೆ ದನಿಯಾಗುವ ಪ್ರಯತ್ನವನ್ನು ಮಾಡಿತ್ತು.
ನಮ್ಮ ತಂಡದ ಸಮೀಕ್ಷೆ ನಡೆದಿದ್ದು, ಚುನಾವಣೆಯ ಹಿಂದಿನ ದಿನ. ಅಂದರೆ, ಎಪ್ರಿಲ್ 22ರಂದು. ಚುನಾವಣಾ ನೀತಿಸಂಹಿತೆ ಕಟ್ಟುನಿಟ್ಟಾಗಿದ್ದ ಹಿನ್ನೆಲೆಯಲ್ಲಿ ಜನರ ಅಭಿಪ್ರಾಯಗಳನ್ನು ಕೊನೆಯ ಗಳಿಗೆಯಲ್ಲಿ ಪ್ರಕಟಿಸಿದರೆ, ಮತದಾರರ ಮೇಲೆ ಪ್ರಭಾವ ಬೀರಬಹುದು ಎಂಬ ಉದ್ದೇಶದಿಂದ ಅಂದಿನ ವರದಿಯನ್ನು ಪ್ರಕಟಿಸಿರಲಿಲ್ಲ. ಈಗ, ನಮ್ಮ ಓದುಗರ ಮಾಹಿತಿಗಾಗಿ ಎಪ್ರಿಲ್ 22ರಂದು ನಡೆಸಿದ ಸಮೀಕ್ಷೆಯಲ್ಲಿ ಮಾತನಾಡಿಸಿದ ಕೆಲವು ಜನರ ಅಭಿಪ್ರಾಯವನ್ನು ಮಾತ್ರ ಪ್ರಕಟಿಸುತ್ತಿದ್ದೇವೆ.
ತಾ.22-4-2019: ಸೋಮವಾರ
ಲೋಕಸಭಾ ಚುನಾವಣೆ-2019: ಶಿವಮೊಗ್ಗ ಕ್ಷೇತ್ರ
ಕೊನೇ ಕ್ಷಣಗಳಲ್ಲಿ: ಸಾಗರದ ನಂದಿತಳೆ, ಕಲೇದೂರು, ಹೈತೂರು ಹೆಬ್ಬರಿಗೆ, ಕವಲಕೋಡು ಹೊನ್ನೆಸರ, ಭೀಮನಕೋಣೆ ಮತದಾರರ ಅನಿಸಿಕೆ ಸಂಗ್ರಹಿಸಲಾಯಿತು. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಬಿವೈಆರ್ ಅವರಿಗೇ ನಂದಿತಳೆ ಬೂತ್’ನಲ್ಲಿ ಲೀಡ್ ಕೊಡಲಾಗಿತ್ತು. ಮೇದರವಳ್ಳಿ ನಂದಿತಳೆ ಕಾಸ್ಪಾಡಿ ಕಾನ್ಮನೆ ಹೊರಬೈಲು ಮಳಲಿ ಗ್ರಾಮಗಳು ಉಳ್ಳೂರು ಗ್ರಾಮ ಪಂಚಾಯತ್’ಗೆ ಸೇರುತ್ತವೆ. ಸುಮಾರು ಎರಡು ಸಾವಿರ ಮತದಾರರಿದ್ದಾರೆ.
ನಮಗೆ ಮೋದಿ ಮತ್ತೆ ಪ್ರಧಾನಿಯಾಗಬೇಕು. ಅವರಿಂದ ದೇಶದ ಪ್ರಗತಿ, ರಕ್ಷಣೆ… ಅಲ್ಲದೇ ಅವರೇ ಬೆಸ್ಟ್ ಪಿಎಂ. ನಾನು ಬೆಂಗಳೂರಿನಲ್ಲಿ ನಾಲ್ಕು ವರ್ಷದಿಂದ ಇಂಜಿನಿಯರ್ ಆಗಿದ್ದೇನೆ. ಮತದಾನಕ್ಕೆ ತಪ್ಪಿಸಿಕೊಳ್ಳಬಾರದು ಅಂತ ಎರಡು ದಿನ ಮುಂಚಿತವಾಗಿಯೇ ನಮ್ಮೂರಿಗೆ ಬಂದಿರುವೆ. ನನ್ನಂತೆ ನನ್ನ ಮಿತ್ರರೂ ಬಂದಿದ್ದಾರೆ. ಮೋದಿ ಅವರು ಕೃಷಿಕರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ ಕಾಳಜಿ ಹೊಂದಿದ್ದಾರೆ.
-ಮಧು, ಇಂಜಿನಿಯರ್, ನಂದಿತಳೆ
70 ವರ್ಷಗಳಿಂದ ಗರೀಬಿ ಹಟಾವೋ ಅಂತ ಕಾಂಗ್ರೆಸ್ ಹೇಳಿತಷ್ಟೇ. ಗರೀಬಿ ಹೋಗಲಿಲ್ಲ. ಈಗ ಮೋದಿ ಅವರಿಗೆ ಕೆಲಸ ಮಾಡಲು ಇನ್ನೊಂದು ಅವಧಿ ಬೇಕು. ನಮ್ಮ ನಂದಿತಳೆ ಬೂತ್ ನಲ್ಲಿ ಯುವಜನರ ಮತಗಳು ಅಧಿಕವಾಗಿವೆ.
-ನವೀನ್, ಮರಗೆಲಸ ವಿನ್ಯಾಸಕಾರ (ಉಡ್ ಡಿಸೈನರ್)
ನಮಗೆ ಮೋದಿ ಅವರೇ ಪ್ರಧಾನಿಯಾಗಬೇಕು. ಅವರಿಗೇ ಅಂದರೆ ಬಿಜೆಪಿಗೇ ನಮ್ಮ ಮತ.
-ಶ್ರೀಮತಿ ನೀಲಾ (ಮಧು, ನವೀನ್ ಅವರ ತಾಯಿ)
ಈಗಲೂ ಇಲ್ಲಿ ಮೋದಿ ಅಲೆಯಿದೆ. ನಮ್ಮ ಹಳ್ಳಿಗರಲ್ಲಿ ಮತನೀಡುವ ಉತ್ಸುಕತೆಯಿದೆ. ಶೇ.75 ಮತಚಲಾವಣೆಯಾಗುತ್ತದೆ. ಇಲ್ಲಿಗೆ ಬಿವೈಎಸ್ ಬರುತ್ತಿರುತ್ತಾರೆ. ಮಧು ಬಂದಿಲ್ಲ. ಸಿಎಂ ಆಗಿದ್ದ ಬಂಗಾರಪ್ಪನವರ ಹೆಸರಿನ ಬಲ ಬಿಟ್ಟರೆ ಅವರ ಬಗ್ಗೆ ನಮಗೆ ತಿಳಿದೇ ಇಲ್ಲ. ಮೋದೀಜಿ ವಿಶ್ವದಲ್ಲಿ ಭಾರತಕ್ಕೆ ಉನ್ನತ ಸ್ಥಾನ ತಂದುಕೊಟ್ಟರು. ಸೂಕ್ತ ನಾಯಕರಾಗಿದ್ದಾರೆ. ಸುಭದ್ರ ಭಾರತ ಸ್ಥಾಪಿಸುತ್ತಾರೆ.
-ಕೃಷ್ಣಮೂರ್ತಿ, ಕೃಷಿಕ, ನಂದಿತಳೆ
ಮೋದಿ ನಮಗೆ ಯಾಕಿಷ್ಟ ಅಂದರೆ…. ದೇಶಕ್ಕಾಗಿ ಶ್ರಮಿಸೋ ನಂಬಿಕಸ್ಥ ಮನುಷ್ಯ. ಮಹಿಳೆಯರ ಕರ್ತೃತ್ವ ಶಕ್ತಿ ಬಗ್ಗೆ ವಿಶ್ವಾಸವಿರುವ ಪ್ರಧಾನಿ. ತ್ರಿವಳಿ ತಲಾಖ್ ಗೆ ನಿಷೇಧ ತಂದಿದ್ದಾರೆ. ಮತ ನೀಡುವುದಕ್ಕೋಸ್ಕರ ಬೆಂಗಳೂರಿನಲ್ಲಿರುವ ಮಗ ಬರ್ತಾ ಇದ್ದಾನೆ.
-ಶ್ರೀ ಶೈಲಜಾ ಕೃಷ್ಣಮೂರ್ತಿ, ನಂದಿತಳೆ
ಕಳೆದ ಲೋಕ ಸಭಾ ಉಪಚುನಾವಣೆಯಲ್ಲಿ ಮಧುಗೆ ಲೀಡ್ ಕೊಟ್ಟಿದ್ವಿ. ಈ ಬಾರಿಯೂ ಮೈತ್ರಿ ಪಕ್ಷಕ್ಕೇ ಲೀಡ್ ಬರತ್ತೆ. ಹೆಗ್ಗೋಡು ಪಂಚಾಯತ್’ನ ಹೆಗ್ಗೋಡು, ಹೊನ್ನೇಸರ, ಚೆನ್ನಿಗನ ತೋಟ ಗ್ರಾಮಗಳಲ್ಲಿ ಜೆಡಿಎಸ್ ಪ್ರಬಲವಾಗಿದೆ. ಶೇ.70 ಬೆಂಬಲ ಮಧು ಅವರಿಗೆ ಇದೆ. ಅವರ ತಂದೆ ಬಂಗಾರಪ್ಪ ಸಿಎಂ ಆಗಿ ಜನಪ್ರಿಯ ಕೆಲಸ ಮಾಡಿದ್ದಾರೆ. ಕಾಗೋಡು ತಿಮ್ಮಪ್ಪ ಅವರೊಡನೆ ಬಗರ್ ಹುಕುಂ ಕೆಲಸವನ್ನು ಮಧು ಅವರು ಚೆನ್ನಾಗಿ ಮಾಡಿ ಹೆಸರು ಪಡೆದಿದ್ದಾರೆ. ಕಳೆದ ಬಾರಿ ಸಂಸದರಾಗಿದ್ದವರಿಂದ ಏನೂ ಕೆಲಸವಾಗಿಲ್ಲ. ಕಸ್ತೂರಿ ರಂಗನ್ ವರದಿ ಬಗ್ಗೆ ಬಿಎಸ್’ವೈ ಅವರು ಲೋಕಸಭೆಯಲ್ಲಿ ಮಾತಾಡಲೇ ಇಲ್ಲವಲ್ಲ!?
ಹಸಿರುಮಕ್ಕಿ ಸೇತುವೆ ಶುರುಮಾಡಿದ್ದು ಕಾಗೋಡು ಅವರ ಅವಧಿಯಲ್ಲಿ. ಗಡ್ಕರಿ ಅವರು ಸಿಗಂದೂರು ಸೇತುವೆ ಪೂಜೆ ಮಾಡಿದ್ರು ಅಷ್ಟೇ ವರ್ಕ್ ಆರ್ಡರ್ ಸಿಗ್ಲಿಲ್ಲ. ವಿದ್ಯುತ್ ಸರಬರಾಜು ಸರಿಯಿಲ್ಲ. ಸರ್ಕಾರದ ಸೌಲಭ್ಯ ದೊಡ್ಡವರಿಗೆ ಮಾತ್ರ ಸಿಗ್ತಾ ಇದೆ. ಹಳ್ಳಿ ಬಡವರಿಗೆ ಸಿಗ್ತಾ ಇಲ್ಲ. ಇಲ್ಲಿ ಮೋದಿ ಅಲೆ ಇಲ್ಲ. ಇಂದಿರಾಗಾಂಧೀ ಅವರು ಸಾಕಷ್ಟು ಅಭಿವೃದ್ಧಿ ತಂದ್ರು. ಮೋದಿ ಎಲ್ಲರ ಖಾತೆಗೆ ₹15 ಲಕ್ಷ ಹಾಕ್ತೀನಿ ಅಂದ್ರು. ಎಲ್ಲಿ ಬಂತು?
_ಮುದ್ರಾ ಯೋಜನೆ ಕೇವಲ ಕೆಲವೇ ಮಂದಿಗೆ ಸಿಗ್ತಾಇದೆ. ಅದ್ರಲ್ಲೂ ಗೋಲ್ ಮಾಲ್. ಐವತ್ತು ಜನ ಅರ್ಜಿ ಹಾಕಿದ್ರೆ ಐದು ಮಂದಿಗೆ ಮಾತ್ರ ಸಿಗತ್ತೆ. ಉದ್ಯೋಗ ಖಾತ್ರಿ ಇಲ್ಲ. ಜೆಡಿಎಸ್’ಗೇ ನಾವು ಮತ ಕೊಡ್ತೀವಿ.
ಈಶ್ವರ ಹೈತೂರು
ಪುಟ್ಟಪ್ಪ, ಹೆಬ್ಬರಿಗೆ
ಗಿರೀಶ್, ಆತೋಡಿ
ಹೊನ್ನೇಸರ ಬೂತ್’ನಲ್ಲಿ ಕಳೆದ ಲೋಕ ಉಪಚುನಾವಣೆಯಲ್ಲಿ ಶೇ.75 ಮತ ಚಲಾವಣೆಯಾಗಿತ್ತು. ಬಿಜೆಪಿಗೇ ಲೀಡ್ ಬಂದಿತ್ತು. ಈ ಸಲವೂ ಬಿವೈಆರ್ ಗೆಲ್ಲುತ್ತಾರೆ. ಕಳೆದ ಸಾರಿ ಉಪಚುನಾವಣೆಯಲ್ಲಿ ಮತದಾರರು ಸೀರಿಯಸ್ ಆಗಿರಲಿಲ್ಲ. ಹೀಗಾಗಿ ಮತ ಚಲಾವಣೆ ಪೂರ್ಣ ಪ್ರಮಾಣವಿರಲಿಲ್ಲ. ಪ್ರಸ್ತುತ ಸಿಎಂ ಅವರ ವರ್ತನೆ ಜನಕ್ಕೆ ಇಷ್ಟವಾಗ್ತಾ ಇಲ್ಲ. ಇದಕ್ಕೆ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯನವರೇ.. ಎಚ್’ಡಿಕೆ ಇಮೇಜು ಕಳೆದುಕೊಂಡಿದ್ದಾರೆ. ಜೆಡಿಎಸ್ ಶೇ. 10 ಮತಗಳನ್ನು ಈ ಬಾರಿ ಕಳೆದುಕೊಳ್ಳಲಿದೆ. ನಮ್ಮಲ್ಲಿ ಕೆಲಸಮಾಡುವ ಕಾರ್ಮಿಕರು ಬಿಎಸ್’ವೈ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ರಾಘವೇಂದ್ರ ಅವರಿಗೆ ಅಪ್ಪನ ಇಮೇಜು ಪ್ರಭಾವ ಶಾಲಿಯಾಗಿ ಮತಗಳನ್ನ ತರುತ್ತದೆ. ಯಡ್ಯೂರಪ್ಪ ನವರು ಜನರೊಡನೆ ನೇರ ಸಂಪರ್ಕವಿಟ್ಟುಕೊಂಡಿದ್ದಾರೆ. ಎಂಪಿ ನಿಧಿಯಿಂದ ಆಗಬೇಕಾದ ಕೆಲಸಗಳು ಈ ಭಾಗದಲ್ಲಿ ಆಗಿವೆ. ತುಮರಿ ಸೇತುವೆ ಮಾತ್ರ ಒಂದು ಮೈನಸ್ ಪಾಯಿಂಟ್ ಆಗಬಹುದು. ಅದನ್ನು ಅವರು ಮಾಡಬೇಕು. ಅದನ್ನು ಮಾಡಿದ್ರೆ ಮತ್ತೆ ಗೆಲ್ತಾನೇ ಇರ್ತಾರೆ.
-ಗಣೇಶ್, ಕಾಕಲ್
Discussion about this post