ತ್ರಿವಿಧ ದಾಸೋಹಿ, ಅಕ್ಷರದಾತ, ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಅಗಲಿಕೆ ಇಡಿಯ ರಾಜ್ಯವನ್ನು ದುಃಖದ ಮಡಿಲಿಗೆ ದೂಡಿದೆ. ಮಾತ್ರವಲ್ಲ ರಾಷ್ಟದಾದ್ಯಂತ ಇರುವ ಭಕ್ತರನ್ನು ಇನ್ನಿಲ್ಲದ ಶೋಕಸಾಗರದಲ್ಲಿ ಮುಳುಗಿಸಿದೆ.
ಈಗಾಗಲೇ ಲಕ್ಷಾಂತರ ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿ, ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಎಲ್ಲೆಲ್ಲೂ ಶ್ರೀಗಳ ಸೇವೆ ಹಾಗೂ ಸಾಧನೆಯ ಹಾದಿಯ ಗುಣಗಾನ ನಡೆಯುತ್ತಿದೆ. ಶ್ರೀಗಳ ನಿಸ್ವಾರ್ಥ ಸೇವೆ ಎಷ್ಟಿತ್ತೆಂದರೆ ಅವರ ಗುಣಕ್ಕೆ ದೇಶದ ಗಣ್ಯರು ಮನಸೋತು, ಅವರ ಅನುಯಾಯಿಯಾಗುತ್ತಿದ್ದರು. ಇಂತಹ ಗಣ್ಯರ ಸಾಲಿನಲ್ಲಿ ನಿಲ್ಲುವವರು ಮಾಜಿ ಪ್ರಧಾನಿ, ಅಜಾತಶತ್ರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಸಹ ಒಬ್ಬರು.
ಹಿಂದೆ ಶ್ರೀಗಳ 83ನೆಯ ಜನ್ಮ ದಿನದ ಹಿನ್ನೆಲೆಯಲ್ಲಿ ವಾಜಪೇಯಿ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಮುನ್ನವೇ ಶ್ರೀಗಳ ಕುರಿತಾಗಿ ತಿಳಿದು, ಅವರನ್ನು ಅಪಾರವಾಗಿ ಇಷ್ಟಪಡುತ್ತಿದ್ದ ಅಟಲ್’ಜೀ, ಆ ಭೇಟಿಯಲ್ಲಿ ಇಡಿಯ ಮಠವನ್ನು ಕಂಡು ಭಾವುಕರಾಗಿದ್ದರು. ಅನ್ನದಾನ, ವಿದ್ಯಾದಾನ ಮಾಡುತ್ತಾ ಸಮಾಜವೇ ತಮ್ಮುಸಿರು ಎಂದು ಸಾರ್ಥಕತೆ ಮೆರೆಯುತ್ತಿದ್ದ ಶ್ರೀಗಳಿಂದ ಪ್ರಭಾವಿತರಾಗಿದ್ದರು.
ಈ ವೇಳೆ ಮಾತನಾಡಿದ್ದ ಅಟಲ್’ಜೀ, ನನಗೆ ಇನ್ನೊಂದು ಜನ್ಮ ಎನ್ನುವುದು ಇದ್ದರೆ ಕರ್ನಾಟಕದಲ್ಲಿ ಜನಿಸಿ, ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮಿಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಯಾಗಿ ಕಲಿಯುತ್ತೇನೆ. ಅಂತಹ ಅವಕಾಶ ನನಗೆ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದರೆ ಎಂದರೆ, ಸಿದ್ದಗಂಗಾ ಶ್ರೀಗಳ ವ್ಯಕ್ತಿತ್ವ ಎಂತಹ ಶ್ರೇಷ್ಠತಮವಾದುದು ಎಂಬುದು ವೇದ್ಯವಾಗುತ್ತದೆ.
Discussion about this post