ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈದ್ಯರು ಸದೃಢ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಖ್ಯಾತ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ #DRCRChandrashekhar ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಭಾರತೀಯ ವೈದ್ಯಕೀಯ ಸಂಘದ #IMA ವತಿಯಿಂದ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಸ್ವ ಆರೋಗ್ಯ ನಿರ್ವಹಣೆ ಕುರಿತಾದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಉಪನ್ಯಾಸದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಭವಿಷ್ಯದಲ್ಲಿ ವೈದ್ಯರಾಗಿ ಎದುರಿಸಬೇಕಾದ ವೃತ್ತಿಪರ ಹಾಗೂ ವೈಯಕ್ತಿಕ ಸವಾಲುಗಳು ಮತ್ತು ಅವಕ್ಕೆ ಬೇಕಾದ #MentalHealth ಮಾನಸಿಕ-ದೈಹಿಕ ಸಿದ್ಧತೆ ಕುರಿತು ಅವರು ವಿವರವಾಗಿ ಮಾತನಾಡಿದರು.
ಮಾತೃದೇವೋ ಭವ, ಪಿತೃದೇವೋ ಭವ, ಗುರುದೇವೋ ಭವ ಎಂದು ಹೇಳುವಾಗೆ ವೈದ್ಯೋ ನಾರಾಯಣ ಹರಿಃ ಎಂಬ ಉನ್ನತ ಸ್ಥಾನಮಾನ ಸಮಾಜದಲ್ಲಿ ವೈದ್ಯರಿಗೆ ಮಾತ್ರ ಇರುವುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದರು.
ಆದರೆ ಇದೇ ವೇಳೆ ವೈದ್ಯರು ಸೋಂಕು ರೋಗಗಳು (Infections), ಪೋಷಕಾಂಶ ಕೊರತೆ (Under-nutrition), ಒತ್ತಡ, ಖಿನ್ನತೆ, ಆತಂಕ, ಹೃದಯ ಹಾಗೂ ರಕ್ತನಾಳ ಸಂಬಂಧಿತ ಕಾಯಿಲೆಗಳು/ಸ್ಟ್ರೋಕ್, ಮಧುಮೇಹ, ಕ್ಯಾನ್ಸರ್, ವ್ಯಸನಗಳು (Addiction) ಮುಂತಾದ ಅನೇಕ ಸಮಸ್ಯೆಗಳಿಗೆ ಹೆಚ್ಚು ಒಳಗಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ವೈದ್ಯರು ಕೂಡ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಸಮಾನವಾಗಿ ಗಮನ ಹರಿಸುವುದು ಅತ್ಯಾವಶ್ಯಕ ಎಂದು ತಿಳಿಸಿದರು.
ವೈದ್ಯರು ಸದೃಢ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂಬ ಸಂದೇಶದೊಂದಿಗೆ, ಒತ್ತಡ ನಿರ್ವಹಣೆ, ಜೀವನಶೈಲಿ ಬದಲಾವಣೆಗಳು ಮತ್ತು ಸಮತೋಲನ ಜೀವನ ನಡೆಸುವ ಕುರಿತು ಡಾ. ಸಿ.ಆರ್. ಚಂದ್ರಶೇಖರ್ ಅವರು ಉಪಯುಕ್ತ ಸಲಹೆಗಳನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಡಾ. ಕೆ.ಆರ್. ರವೀಶ್, ಡಾ. ವಿನಾಯಕ ಜಿ, ಡಾ. ಸಿದ್ಧಲಿಂಗಪ್ಪ, ಡಾ. ಬಿ.ಎಸ್. ಸುರೇಶ್, ಡಾ. ವಿನಯಾ ಶ್ರೀನಿವಾಸ್, ಡಾ. ಕೌಸ್ತಭ ಅರುಣ್, ಡಾ. ವಿ.ಎಲ್.ಎಸ್. ಕುಮಾರ್, ಡಾ. ಕೆ.ಎಸ್. ಶುಭ್ರತಾ, ಡಾ. ಶೀಲಾ ವಿಜಯ್, ಡಾ. ವಿಜಯಾನಂದ್, ಡಾ. ಪದ್ಮೇಗೌಡ ಸೇರಿದಂತೆ ಹಲವು ಗಣ್ಯ ವೈದ್ಯರು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















