ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅವರು ಲಕ್ಷ್ಮೀ ನಾರಾಯಣ ಕಾಶಿ, ಸಾಮಾಜಿಕ, ಸಾಂಸ್ಕೃತಿಕ ಸೇವಾ ಕ್ಷೇತ್ರದಲ್ಲಿನ ಮುಂಚೂಣಿ ವ್ಯಕ್ತಿ. ಮಾತ್ರವಲ್ಲ ಸದ್ಯ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಹಾಗೂ ರಾಜ್ಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಸದಸ್ಯರು. ಸದಾ ಸಮಾಜಕ್ಕಾಗಿ ಮಿಡಿಯುವ ಮನ ಇವರದ್ದು. ಇಂತಹ ವ್ಯಕ್ತಿಯ ಚಿಂತನೆಯ ಮತ್ತೊಂದು ಸಾಮಾಜಿಕ ಕಾರ್ಯ ಈಗ ಸಾಕಾರಗೊಂಡಿದೆ.
ಕೋವಿಡ್19ರ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಕೈಲಾಗುವ ನೆರವು ನೀಡಲು ನಿರ್ಧರಿಸಿದರು. ಅದರಂತೆ ಪತ್ನಿ ಡಾ.ಯಶೋಧಾ ಅವರೊಂದಿಗೆ ಚರ್ಚಿಸಿದರು. ಕಾಶಿ ದಂಪತಿಗಳು 25,000 ರೂ.ಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ಅಳಿಲು ಸೇವೆ ಎಂದು ದೇಣಿಗೆ ಅರ್ಪಿಸಿದರು. ನಂತರ ತಮ್ಮ ಗೆಳೆಯರನ್ನೂ ಕಲೆ ಹಾಕಿದರು. ಅದರಲ್ಲೂ ವಿಶೇಷವೆಂದರೆ ಶಿವಮೊಗ್ಗದ ಡಿವಿಎಸ್ ಕಾಲೇಜನಲ್ಲಿ 1972 ನೆಯ ಬ್ಯಾಚ್’ನಲ್ಲಿ ಪದವಿ ಪೂರೈಸಿದ ಹಳೇ ಮಿತ್ರರಿಗೆಲ್ಲರೊಂದಿಗೆ ನಿಧಿ ಅರ್ಪಿಸುವ ಆಲೋಚನೆ ಹಂಚಿಕೊಂಡರು.
ಈಗಾಗಲೇ ಕಳೆದ ವರ್ಷ ಪುನರ್ಮಿಲನ 2019 ಎಂಬ ಅಭಿದಾನದಲ್ಲಿ ಸ್ನೇಹೋತ್ಸವ ಏರ್ಪಡಿಸಿದ್ದರು. ಅದೇ ಲಹರಿಯಲ್ಲಿ ಫೋನ್ ಮೂಲಕ, ಸಾಮಾಜಿಕ ಜಾಲತಾಣದ ಮೂಲಕ ಮಿತ್ರರಿಗೆ ತಮ್ಮ ಯೋಜನೆ ಹಂಚಿಕೊಂಡರು. ಯಾರೂ ಇಲ್ಲವೆನ್ನದೇ ಹನಿಗೂಡಿದರೆ ಹಳ್ಳ ಎಂಬಂತೆ 55,000 ರೂ. ಸಂಗ್ರಹವಾಯಿತು.
ಶಿವಮೊಗ್ಗ ಸಂಸದ ಶ್ರೀ ಬಿ.ವೈ. ರಾಘವೇಂದ್ರ ಅವರನ್ನು ಇಂದು ಭೇಟಿ ಮಾಡಿ, ಅವರಿಗೆ ದೇಣಿಗೆ ವಿಚಾರ ತಿಳಿಸಿ ಪುನರ್ಮಿಲನದ ಪರವಾಗಿ ಜಿಲ್ಲಾಧಿಕಾರಿಗಳಿಗೆ ನಿಧಿ ಅರ್ಪಿಸಲು ಕೋರಿಕೊಂಡರು. .ರಾಘವೇಂದ್ರ ಅವರು ಸಂತೋಷದಿಂದ ಕಾಶಿಯವರ ಜೊತೆ ಹೆಜ್ಜೆ ಹಾಕಿದರು. ಜಿಲ್ಲಾಧಿಕಾರಿ ಶಿವಕುಮಾರ್ ಅವರಿಗೆ ಪುನರ್ಮಿಲನ -1972 ಪರವಾಗಿ ಸಂಸದರು 55,000 ರೂ. ಚೆಕ್ ಅರ್ಪಿಸಿದರು.
ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪಮೇಯರ್ ರೇಖಾ ಮುರಳೀಧರ್, ಮಾಜಿ ಉಪಮೇಯರ್ ಚನ್ನಬಸಪ್ಪ(ಚೆನ್ನಿ) ರಾಜ್ಯ ಬಿಜೆಪಿ ಕೃಷಿಮೋರ್ಚಾ ಅಧ್ಯಕ್ಷ ದತ್ತಾತ್ರಿ ಹಾಜರಿದ್ದರು.
Get in Touch With Us info@kalpa.news Whatsapp: 9481252093
Discussion about this post