ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಮಳೆ ಸರಿಯಾಗಿ ಆಗುವುದಿಲ್ಲ ಎಂದು ಇನ್ಮುಂದೆ ಈ ಭಾಗದ ಜನರು ಗುಳೆ ಹೋಗಬಾರದು. ಬದಲಾಗಿ, ರೈತ ತರಬೇತಿ ಕೇಂದ್ರವನ್ನು ಸದುಪಯೋಗ ಮಾಡಿಕೊಂಡು, ಮುಂದೆ ಬನ್ನಿ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದರು.
ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಇವರ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಆದಿಬಸವೇಶ್ವರ ದೇವಸ್ಥಾನ ಹತ್ತಿರದ ಮೆತ್ತಗಲ್ಲ ಗ್ರಾಮದಲ್ಲಿ ಕೃಷಿ ಸಂಸ್ಕರಣಾ ಘಟಕಕ್ಕಾಗಿ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯ ರೈತ ಸಹೋದರ ಮತ್ತು ಸಹೋದರಿಯರು ಕೃಷಿ ಸಂಸ್ಕರಣಾ ಘಟಕ ತರಬೇತಿ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಇದರ ಉದ್ದೇಶ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದರ ಜೊತೆಗೆ ಅವರು ಬೆಳೆದ ಬೆಳೆಗಳಿಗೆ ಮೌಲ್ಯವರ್ಧಿತ ಬೆಲೆ ಸಿಗಬೇಕಿದೆ ಎಂದರು.
ರೈತ ತರಬೇತಿ ಕೇಂದ್ರದಿಂದ ಸಾವಿರಾರು ರೈತರಿಗೆ ಉಪಯೋಗವಾಗುತ್ತದೆ. ಒಳ್ಳೆಯ ಮಾರುಕಟ್ಟೆ ಸಂಪರ್ಕ, ಅವರು ಬೆಳೆದ ಬೆಳೆಗಳ ಮೌಲ್ಯವರ್ಧನೆ ಹೇಗೆ ಮಾಡಬೇಕು ಎಂಬುದು ಸೇರಿದಂತೆ ಇತರೆ ಹಲವಾರು ಮಾಹಿತಿಯನ್ನು ನೀಡಲಾಗುತ್ತದೆ. ಮಳೆ ಸರಿಯಾಗಿ ಆಗದಿದ್ದರೆ ಈ ಭಾಗದ ಜನರು ಬೆಂಗಳೂರು, ಮಂಗಳೂರಿಗೆ ಗೂಳೆ ಹೋಗುತ್ತಾರೆ ಇಂತಹ ತರಬೇತಿ ಕೇಂದ್ರಗಳಿಂದ ಅವರಿಗೆ ಅನುಕೂಲವಾಗಲಿದೆ. ನಮ್ಮ ಪ್ರಧಾನಿಯವರು ಹೇಳುವ ಹಾಗೆ ವೋಕಲ್ ಫಾರ್ ಲೋಕಲಗೆ ಇದೊಂದು ಒಳ್ಳೆಯ ಉದಾಹರಣೆಯಾಗಿದೆ ಎಂದರು.
ಪ್ರಧಾನಿಯವರ ನಿರ್ದೆಶನದಂತೆ ರೈತರ ಕೃಷಿ ಉಪಕರಣ ತೆರಿಗೆ ಈ ಹಿಂದೆ ಇದ್ದ 12 ಪ್ರತಿಶತದಿಂದ ಈಗ 5 ಪ್ರತಿಶತ ಮಾಡಲಾಗಿದೆ. ಇದರಿಂದ ಅವರ ಟ್ಯಾಕ್ಟರ್, ಟಿಲ್ಲರ್ ಸೇರಿದಂತೆ ಇತರೆ ಕೃಷಿ ಉಪಕರಣಗಳ ಖರೀದಿಗೆ ಅನುಕೂಲವಾಗಲಿದೆ. ರೈತರ ಬಲವರ್ಧನೆಗಾಗಿ ಇವುಗಳನ್ನು ಕಡಿಮೆ ಮಾಡಿದ್ದೇವೆ. ಪ್ರಧಾನಮಂತ್ರಿಗಳ ಧನ ಧಾನ್ಯ ಯೋಜನೆಯಿಂದ ಆಹಾರ ಸಂಸ್ಕರಣೆ, ಮೌಲ್ಯವರ್ಧನೆ ಜೊತೆಗೆ ರೈತರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ಯೋಜನೆ ಅಡಿಯಲ್ಲಿ ದೇಶದ 100 ಜಿಲ್ಲೆಗಳು ಆಯ್ಕೆಯಾಗಿದ್ದು, ಅವುಗಳಲ್ಲಿ ಕೊಪ್ಪಳ ಜಿಲ್ಲೆಯು ಒಂದಾಗಿದೆ ಇದಕ್ಕಾಗಿ ಬಜೆಟನಲ್ಲಿ 255 ಕೋಟಿ ಅನುದಾನ ನೀಡಲಾಗಿದೆ. ಇದರ ಉದ್ದೇಶ ರೈತರಿಗೆ ಗುಣಮಟ್ಟದ ಬೀಜದ ಜೊತೆಗೆ ಹೊಸ ತಂತ್ರಜ್ಞಾನ ಅವರಿಗೆ ತಲುಪಿಸುವುದಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ನನಗೆ ಅತ್ಯಂತ ಸಂತೋಷವಾಗುತ್ತಿದೆ. ಕೊಪ್ಪಳ ಜಿಲ್ಲೆ ಹನುಮ ಜನ್ಮಸ್ಥಳ ಅಂಜನಾದ್ರಿ, ಕಿನ್ನಾಳ ಕಲೆಗಳ ತವರು, ಕೊಪ್ಪಳದ ಜನರಿಗೆ ಇಂದು ಒಳ್ಳೆಯ ಅವಕಾಶ ಸಿಕ್ಕಿದೆ. ಕರ್ನಾಟಕದಿಂದಲೇ ನಾನು ರಾಜ್ಯಸಭಾ ಸದಸ್ಯಯಾಗಿದ್ದೇನೆ ಎಂದರು.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಈ ತರಬೇತಿ ಕೇಂದ್ರಗಳನ್ನು ಮಾಡಲಾಗಿದೆ. ಇದರಿಂದ ರೈತರಿಗೆ ಪುಡ್ ಪ್ರೋಸೆಸಿಂಗ್, ಪ್ಯಾಕೇಜ್ ಜೊತೆಗೆ ಮಾರ್ಕೆಟಿಂಗ್ ಸೌಲಭ್ಯಕ್ಕೆ ಅನುಕೂಲವಾಗಲಿದೆ. ನಮ್ಮೊಂದಿಗೆ ನಬಾರ್ಡ್ ಪರಿಣಿತರು ಇದ್ದಾರೆ. ಅನ್ನದಾತರ ಭವಿಷ್ಯಕ್ಕಾಗಿ ನಾವು ಈ ಕೆಲಸ ಮಾಡಬೇಕಿದೆ. ಕಲ್ಯಾಣ ಕರ್ನಾಟಕ ಭಾಗವನ್ನು ಕರ್ನಾಟಕದ ಅಕ್ಷಯ ಪಾತ್ರೆ ಎಂದು ಕರೆಯುತ್ತಾರೆ. ಗಂಗಾವತಿ ಭಾಗದಲ್ಲಿ ತುಂಗಭದ್ರಾ ನದಿಯಿಂದ ಹೆಚ್ಚಿನ ನೀರಾವರಿ ಇದೆ. ಈ ತರಬೇತಿ ಕೇಂದ್ರಗಳ ಸದುಪಯೋಗವನ್ನು ರೈತರು, ಮಹಿಳೆಯರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು. ಅವಶ್ಯಕತೆ ಇರುವಲ್ಲಿ ಇಂತಹ ಇನ್ನಷ್ಟು ತರಬೇತಿ ಕೇಂದ್ರಗಳನ್ನು ನಬಾರ್ಡ್ ನವರು ಸ್ಥಾಪಿಸಬೇಕು. ರಾಜ್ಯ ಸರ್ಕಾರಕ್ಕು ಧನ್ಯವಾದಗಳನ್ನು ತಿಳಿಸುತ್ತೆನೆ. ಜಿಲ್ಲಾಡಳಿತದಿಂದಲು ಒಳ್ಳೆಯ ಸಹಕಾರ ಸಿಕ್ಕಿದೆ. ರೈತರ ಲಾಭಕ್ಕಾಗಿ ಈ ಕೆಲಸ ಆಗಬೇಕಿದೆ ಎಂದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ಅಧ್ಯಕ್ಷರಾದ ಕೆ.ವಿ. ಶಾಜಿ ಮಾತನಾಡಿ, ಕೃಷಿ ತರಬೇತಿ ಕೇಂದ್ರ ರೈತರ ಜೀವನದಲ್ಲಿ ಪರಿವರ್ತನೆ ತರಲು ನಬಾರ್ಡ್ ಕೈಗೊಂಡ ಪ್ರಮುಖ ಹೆಜ್ಜೆಯಾಗಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ಕಲ್ಯಾಣ ಕರ್ನಾಟಕ ಪ್ರದೇಶದ ರೈತರಿಗಾಗಿ ಈ ಯೋಜನೆಯ ಕನಸು ಕಂಡಿದ್ದರು. ಇಂದು ಅದು ನಿಜವಾಗುತ್ತಿದೆ. ಅವರ ಆಶಯದಂತೆ ನಬಾರ್ಡ್ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ ಎಂದರು.
ರೈತರು ಭಾರತವನ್ನು ಆಹಾರದ ಕಣಜವನ್ನಾಗಿ ಮಾಡುತ್ತಿದ್ದಾರೆ. ಈ ಯೋಜನೆಯ ಉದ್ದೇಶ ಕೃಷಿಯನ್ನು ಅಗ್ರೋಬಿಜಿನೆಸ್ ಆಗಿ ರೂಪಾಂತರಿಸುವುದಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೂ ಸಹಕಾರ ನೀಡುವುದಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳಲ್ಲಿ ಅಗ್ರೋ ಪ್ರೋಸೆಸಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಹಣಕಾಸು ಸಚಿವರು ಎಂಪಿಎಲ್’ಎಡಿಎಸ್ ನಿಧಿಯಿಂದ ಹಣ ನೀಡಿರುವುದು ಪ್ರಶಂಸನೀಯವಾಗಿದೆ. ಕೊಪ್ಪಳದಲ್ಲಿನ ಈ ಕೇಂದ್ರವು ರೈತರ ಕೌಶಲ್ಯಾಭಿವೃದ್ಧಿ, ಸಾಮರ್ಥ್ಯ ನಿರ್ಮಾಣ ಹಾಗೂ ಮೂಲಸೌಕರ್ಯಕ್ಕೆ ಸಹಾಯಕವಾಗಲಿದೆ ಎಂದರು.
ಗಂಗಾವತಿ ಶಾಸಕ ಜಿ. ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿಗಳಾದ ಡಾ.ಆರ್. ವಿಶಾಲ, ನಬಾರ್ಡ್ ಡೆಪಿಟ್ಯು ಡೈರೆಕ್ಟರ್ ಎ.ಕೆ. ಸೂದ್, ವನಬಳ್ಳಾರಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಂಬಮ್ಮ ಶ್ರೀಕಂಠ ಹುಲಸನಹಟ್ಟಿ, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೇರಿದಂತೆ ಹಲವು ಜನಪ್ರತಿನಿಧಿಗಳು, ಕೃಷಿ ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಬೆಂಗಳೂರಿನ ಅಧಿಕಾರಿಗಳು, ಇರಕಲ್ಲಗಡದ ಗವಿಸಿದ್ದೇಶ್ವರ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಪದಾಧಿಕಾರಿಗಳು ಮತ್ತು ವಿವಿಧ ಇತರೆ ಇಲಾಖೆಗಳ ಅಧಿಕಾರಿಗಳು, ರೈತರು, ಮೆತಗಲ್ ಗ್ರಾಮಸ್ಥರು ಹಾಗೂ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















