ಹೈಂದವ ಸಂಸ್ಕೃತಿಯ ಅವಿಚ್ಛಿನ್ನ ಪರಂಪರೆಯ ಹರಿಕಾರ, ಸಮಗ್ರ ಹರಿದಾಸ ಸಾಹಿತ್ಯ ಸಂಚಯ ಸಾಧಕ, ಕನ್ನಡ ನಾಡು ಕಂಡ ಅದ್ಭುತ ಪ್ರವಚನಕಾರ, ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ಹರಿದಾಸ ಹಿನ್ನೆಲೆಯ ಶ್ರೀ ದೇಶಪಾಂಡೆ ಕೃಷ್ಣಮೂರ್ತಿ ಮತ್ತು ಶ್ರೀಮತಿ ರಂಗಮ್ಮ ಪುಣ್ಯದಂಪತಿಗಳ ಗರ್ಭಸುಧಾಂಬುಧಿಯಲ್ಲಿ ಮಲ್ಲಿಗೆಯಾಗಿ ಅರಳಿದವರು.
ಸುಮಾರು ಎರಡೂವರೆ ಶತಮಾನಗಳ ಹಿಂದೆ ಅರಳುಮಲ್ಲಿಗೆ ಗ್ರಾಮದಲ್ಲಿ ನೆಲೆಸಿದ್ದ ಇವರ ಪೂರ್ವಜರಾದ ದೇಶಪಾಂಡೆ ಕೃಷ್ಣಮೂರ್ತಿರಾಯರು ಹರಿದಾಸ ಶ್ರೇಷ್ಟರಾದ ಜಗನ್ನಾಥ ದಾಸರ ಶಿಷ್ಯೋತ್ತಮರಾಗಿದ್ದವರು. ಕೃಷ್ಣ ಕರ್ಣಾಮೃತ, ಸುತ್ತಿಸಾರ, ಯಕ್ಷಗಾನ ಶೈಲಿಯಲ್ಲಿ ಭಾಗವತ ದಶಮಸ್ಕಂದ ಹಾಗೂ ಹರಿಸರ್ವೋತ್ತಮ ಸಾರ ಕೃತಿಗಳನ್ನು ರಚಿಸಿದವರು. ಇವರ ಪುತ್ರ ಯಾದವರಾಯರು ಕಲಾವತಿ ಪರಿಣಯ ವೆಂಬ ಅಪೂರ್ವ ಗ್ರಂಥವನ್ನು ವಿರಚಿಸಿ ಖ್ಯಾತರಾದವರು. ಯಾದವರಾಯರ ಪುತ್ರರಾದ ವೆಂಕಟರಾಯರು ತತ್ವರಂಜಿನಿ ಎಂಬ ತಾತ್ವಿಕ ಗ್ರಂಥದ ಕರ್ತೃಗಳು. ವೆಂಕಟರಾಯರ ಪುತ್ರ ರಾಘಪ್ಪನವರು ಸಾರಸ್ವತ ಪರಿಣಯವೆಂಬ ಮಹಾಕಾವ್ಯವನ್ನು ರಚಿಸಿದವರು. ಈ ಪರಂಪರೆಯ ಮುಂದಿನ ಕೊಂಡಿಯೇ ತೀರ್ಥರೂಪರಾದ ದೇಶಪಾಂಡೆ ಕೃಷ್ಣಮೂರ್ತಿರಾಯರು. ಮಾತೃಶ್ರೀಯವರೂ ನಾಡಿನ ಹರಿಕಥಾ ಕ್ಷೇತ್ರವನ್ನು ಸಮೃದ್ಧಗೊಳಿಸಿದ ವೆಂಕಣ್ಣದಾಸರ ಪರಂಪರೆಗೆ ಸೇರಿದವರು. ಇಂತಹ ಕೌಟುಂಬಿಕ ಹಿನ್ನೆಲೆಯ ಇವರಿಗೆ ಸಾಹಿತ್ಯ ಕೃಷಿ ರಕ್ತಗತವಾಗಿ ಬಂದಿರುವ ಬಳುವಳಿಯೇ ಹೌದು.
ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಮುಂದೆ ಎಂ.ಬಿ.ಎ, ಎಂ.ಫಿಲ್, ಪಿ.ಎಚ್‌ಡಿ ಪದವಿಗಳು. ನಂತರ ಒಲಿದು ಆಯ್ದುಕೊಂಡದ್ದು ಅಧ್ಯಾಪಕ ವೃತ್ತಿ. ಇಪ್ಪತ್ತೆಂಟು ವರ್ಷಗಳ ಸುದೀರ್ಘ ಉಪನ್ಯಾಸಕ ವೃತ್ತಿಯಲ್ಲಿ ಅಪಾರ ಶಿಷ್ಯವೃಂದದ ನೆಚ್ಚಿನ ಗುರುಗಳಾಗಿ ಗಳಿಸಿದ ಪ್ರೀತಿ, ಗೌರವ, ಮನ್ನಣೆ ಅನೂಹ್ಯ. ಇವರು ರಚಿಸಿರುವ ವಾಣಿಜ್ಯ ಶಾಸ್ತ್ರದ ಮಹತ್ಕೃತಿಗಳು ವಿದ್ಯಾರ್ಥಿಗಳಿಗೆ ಎಲ್ಲ ಕಾಲಕ್ಕೂ ದಾರಿದೀವಿಗೆಗಳು.
ಇವರ ಕುಟುಂಬದ ಮೂಲವೇ ಹರಿದಾಸ ಪರಂಪರೆ. ಹರಿಕಥನ-ಸಂಕೀರ್ತನ ತಲೆಮಾರುಗಳಿಂದರಿವರಜೀವದುಸಿರು. ವಣಿಜಶಾಸ್ತ್ರದ ಸಂಖ್ಯಾಸಂಭ್ರಮದಲ್ಲಿ ಕಳೆದು ಹೋಗಬಹುದಿದ್ದರಿವರ ಚಿತ್ತ ಹರಿದಾಸ ಸಾಹಿತ್ಯದತ್ತ ಮಗ್ಗುಲಾಗಿದ್ದು ಈ ವಂಶವಾಹಿನಿಯ ಪ್ರಭಾವದಿಂದ. ಈ ಹೊರಳು ದಿಟವಾಗಿ ಈ ನೆಲದ ಭಾಗ್ಯ. ಅಧ್ಯಾಪಕ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಸಂಪೂರ್ಣವಾಗಿ ಆವರಿಸಿಕೊಂಡದ್ದು ಜಗತ್ತಿನ ಸಾಹಿತ್ಯ ಪ್ರಪಂಚಕ್ಕೆ ಕನ್ನಡಿಗರ ವಿಶಿಷ್ಠ ಕೊಡುಗೆಯಾದ ಹರಿದಾಸ ಸಾಹಿತ್ಯ. ಮುಂದೆ ದಾಸಸಾಹಿತ್ಯನಿಕ್ಷೇಪದ ಉತ್ಖನನ ಇವರ ವಚೋವಿಲಾಸದಿಂದ ವಿಶ್ವದೆಲ್ಲೆಡೆ ಮನೆಮನೆಯ ಮಾತಾದವು. ಕಾಲಚಕ್ರದ ನಿರಂತರ ಪರಿಭ್ರಮಣೆಯಲ್ಲಿ ವಿಸ್ಮತಿಗೆ ಒಳಗಾಗಿ, ಕಣ್ಮರೆಯಾಗಿ ಬಿಡಬಹುದಾಗಿದ್ದ ಸಾವಿರಾರು ಹಾಡುಗಳುರಿವರ ಅನ್ವೇಷಣಾ ಪ್ರವೃತ್ತಿಯ ಫಲವಾಗಿ ಬೆಳಕು ಕಂಡು, ನಾಡಿನ ಸಾಹಿತ್ಯ ಭಂಡಾರ ಶ್ರೀಮಂತಗೊಂಡಿದೆ.
ದಾಸ ಸಾಹಿತ್ಯ ಪ್ರಚಾರ ದೀಕ್ಷಾಬದ್ಧರಾಗಿ ಭೂಗೋಳದಾದ್ಯಂತ ಪರ್ಯಟಿಸಿ, ಸಾವಿರಾರು ಉಪನ್ಯಾಸಗಳ ದ್ವಾರಾ ನೂರಾರು ದೇಶಗಳಲ್ಲಿ ಪುರಂದರ, ಕನಕ, ವಿಜಯಾದಿ ದಾಸವರೇಣ್ಯರು ಗೆಜ್ಜೆಕಟ್ಟಿ, ತಂಬೂರಿ ಮೀಟಿ, ತಳತಟ್ಟಿ ಕುಣಿಸಿ ಅಲ್ಲಿನ ಮಣ್ಣನ್ನು ಪುನೀತಗೊಳಿಸಿ, ಭಕ್ತ ಸಾಗರವನ್ನು ಜ್ಞಾನರಸವಾರಿಧಿಯಲ್ಲಿ ಮೀಯಿಸಿದುದರೊಂದಿಗೆ, ವಿದೇಶಿಯರಿಗೆ, ವಿದೇಶದಲ್ಲಿನ ದೇಶಿಯರಿಗೆ ಭಾರತದ ಸಂತ-ಮಹಂತರ ವಿಚಾರಧಾರೆಯ ಮೂಲಕ ಮೌಲ್ಯಗಳ ಪೀಯೂಷವನ್ನುಣಿಸಿ ಲೋಕಾ ಸಮಸ್ತಾಃ ಸುಖಿನೋಭವಂತು ಎಂಬುದೇ ಮೂಲಮಂತ್ರವಾದ ಸನಾತನ ಧರ್ಮದ ಸಾರ್ವಕಾಲಿಕ ಸತ್ಯತೆಯನ್ನು, ನಿತ್ಯತೆಯನ್ನು, ವಿಶ್ವದ ಮೂಲೆ ಮೂಲೆಗೂ ಸಾರಿದ ಮಹಾಪ್ರವಾದಿ ಇವರಾಗಿದ್ದಾರೆ.
ಆಸ್ಟ್ರೇಲಿಯಾ, ಅಮೆರಿಕಾ, ಸಿಂಗಾಪುರ, ಆಫ್ರಿಕಾ, ನ್ಯೂಜಿಲ್ಯಾಂಡ್ ಬಹರಿನ್, ಷಾರ್ಜಾ, ಕೆನಡಾ, ದುಬೈ, ಚೀನಾ, ಮಸ್ಕಾಟ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮುಂತಾದ ದೇಶಗಳಲ್ಲಿನ ನೂರಾರು ವೇದಿಕೆಗಳಲ್ಲಿ, ದೈವಸನ್ನಿಧಿಗಳಲ್ಲಿ ಹರಿದಾಸ ಸಂದೇಶ, ವೈದಿಕ, ಅಧ್ಯಾತ್ಮ ಮೌಲ್ಯಗಳು, ದಾಸಸಾಹಿತ್ಯ ಸಪ್ತಾಹ, ಭಾಗವತ ಸಪ್ತಾಹ, ದಾಸೋತ್ಸವ, ವಿಷ್ಣುಸಹಸ್ರನಾಮ ಸಂಕೀರ್ತನೆಗಳ ಕುರಿತಾದ ಸಾವಿರಾರು ಸಂಭ್ರಮಗಳನ್ನು, ಉಪನ್ಯಾಸ ಮಾಲಿಕೆಗಳನ್ನು ಇಳೆಯ ಜಾಣರು ಮೆಚ್ಚುವಂದದಲಿ ಪ್ರಸ್ತುತಪಡಿಸಿದವರು ನೀವು ನಿಮ್ಮ ವಿಷಯ ಪ್ರತಿಪಾದನಾ ಕುಶಲತೆಗೆ, ನುಡಿಗಾರುಡಿಗೆ, ತಲೆದೂಗಿ, ತಲೆಬಾಗಿ ಮತ್ತೆ ಮತ್ತೆ ಅದನ್ನು ಕೇಳಬಯಸಿ ಇವರ ಬರವಿಗೆ ಕಾತರಿಸಿದವರು ಅಸಂಖ್ಯರು. ಈ ಹಿರಿಮೆ ಗರಿಮೆ ನಿಮಗೆ ದೈವವಿತ್ತವರ. ಇದರ ಫಲವೇ ಇವರನ್ನು ಅರಸಿ ಬಂದ ಪ್ರಶಸ್ತಿ, ಉಪಾಧಿ, ಪುರಸ್ಕಾರ, ಬಿರುದು ಬಾವಲಿಗಳ ಸಾಲು ಸಾಲು. ವಿದೇಶಗಳಲ್ಲಂತೂ ಇವರಿಗೆ ದೊರೆತ ಗೌರವಾದರಗಳು. ಸನ್ಮಾನಗಳು ಜನಮಾನಸದಲ್ಲಿ ನೆಲೆಗೊಂಡ ಇವರ ಬಗೆಗಿನ ಅಭಿಮಾನ, ಪ್ರೀತಿಗೆ ದ್ಯೋತಕ.ಇವರನ್ನು ಅಲಂಕರಿಸುವ ಮೂಲಕ ಪ್ರಶಸ್ತಿ ಪುರಸ್ಕಾರಗಳೇ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆಯೆಂದರೆ ಅದು ಅತ್ಯುಕ್ತಿಯಲ್ಲ. ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನದ ಹಾಗೂ ದಕ್ಷಿಣ ಭಾರತ ಭಕ್ತಿ ಸಾಹಿತ್ಯ ಮಹಾಸಮ್ಮೇಳನದ ಅಧ್ಯಕ್ಷಪೀಠ ನಿಮ್ಮನ್ನು ವರಿಸಿದ್ದುರಿವರ ವೈದುಷ್ಯಕ್ಕೆ ಸಂದ ಅರ್ಹ ಗೌರವ.
ಇವರು ರಚಿಸಿರುವ, ಸಂಪಾದಿಸಿರುವ, ಪ್ರಕಟಿಸಿರುವ ಐವತ್ತಕ್ಕೂ ಹೆಚ್ಚಿನ ಕೃತಿರತ್ನಗಳಲ್ಲಿ ಹರಿದಾಸರ ಹತ್ತುಸಾವಿರ ಹಾಡುಗಳು, ದಾಸಸಾಹಿತ್ಯ ಸಾಗರ, ಪುರಂದರದಾಸ, ಕನಕದಾಸ, ಜಗನ್ನಾಥದಾಸ, ಶ್ರೀಪಾದರಾಜ, ಶ್ರೀ ವ್ಯಾಸರಾಜ, ಶ್ರೀ ವಾದಿರಾಜ, ಶ್ರೀ ರಾಘವೇಂದ್ರ ಸಂಪುಟಗಳು, ಭಜನ ಸಂಪುಟ, ಉಗಾಭೋಗ ಸಂಪುಟ, ಸುಳಾದಿ ಸಂಪುಟಗಳು, ವಿಜಯದಾಸ ನಮನ ಮುಂತಾದ ಕೃತಿಗಳು ಕನ್ನಡ ಭಕ್ತಿಸಾಹಿತ್ಯ ಭಂಡಾರಕ್ಕೆ ಇವರಿತ್ತ ಅಮೂಲ್ಯ ಕೊಡುಗೆಗಳಾಗಿವೆ. ಇವರ ಅನೇಕ ಕೃತಿಗಳು ಇಂಗ್ಲೀಷ್ ಅಲ್ಲದೆ, ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡು, ಜ್ಞಾನಪ್ರಸರಣದ ಹರಹು ಪಾರವಿಲ್ಲದ ಸಿಂಧುವಾಗಿರುವುದು ಮನುಕುಲದ ಸುಕೃತ.
ಮುಳಬಾಗಿಲಿನ ಶ್ರೀಪಾದರಾಜರ ಮಠದ ಹಿರಿಯ ಸ್ವಾಮಿಗಳಾದ ಶ್ರೀ ವಿಜ್ಞಾನನಿಧಿ ತೀರ್ಥರಿಂದ ಹರಿದಾಸ ದೀಕ್ಷೆ ಪಡೆದು ಪಾರ್ಥಸಾರಥಿ ವಿಠಲದಾಸ ಎಂಬ ಅಂಕಿತದ ಅನುಗ್ರಹೀತರಾಗಿ ಸಾವಿರಾರು ಕೀರ್ತನೆ, ಉಗಾಭೋಗ, ಸುಳಾದಿಗಳನ್ನು ರಚಿಸಿ, ದಾಸಪರಂಪರೆಯ ತೇರನ್ನು ಮುನ್ನಡೆಸುವ ಮಹಾಕ್ರತುವಿನ ಅಧ್ವರ್ಯುವಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿದ್ದೀರಿ. ವಾಗ್ದೇವಿ ಮನದುಂಬಿ ಒಲಿದು ಹರಸಿರುವ ಅಪರೂಪದ ವ್ಯಕ್ತಿ.
ವಿಶ್ವಮಟ್ಟದಲ್ಲಿ ಭಾರತೀಯ ಪರಂಪರೆ, ಕರ್ನಾಟಕ ಸಂಸ್ಕೃತಿ, ಹರಿದಾಸ ಸಾಹಿತ್ಯ, ಭಾಗವತ, ಭಗವದ್ಗೀತೆ, ರಾಮಾಯಣ, ಭಾರತ ಪುರಾಣ, ವಿಷ್ಣು ಸಹಸ್ರನಾಮಗಳನ್ನು ಇಷ್ಟೊಂದು ವ್ಯಾಪಕವಾಗಿ, ಪರಿಣಾಮಕಾರಿಯಾಗಿ ಪ್ರಭಾವಶಾಲಿಯಾಗಿ ಪ್ರಚುರಗೊಳಿಸಿ ತಮ್ಮ ಭೀಮಸಾಹಸ ಸಾಟಿಯಿಲ್ಲದ್ದು. ಇದು ಭಾರತೀಯ ಆಧ್ಯಾತ್ಮಿಕ ಇತಿಹಾಸದಲ್ಲಿನ ಸುವರ್ಣಾಧ್ಯಯ. ಹಾಗಾಗಿಯೇ ತಾವು ಭಾರತದ ಸಾರ್ಥಕ ಸಮರ್ಥ ಸಾಂಸ್ಕೃತಿಕ ಆಧ್ಯಾತ್ಮಿಕ ರಾಯಭಾರಿಗಳೆಂದು ಸಿದ್ದ-ಪ್ರಸಿದ್ದರಾಗಿದ್ದೀರಿ.
ಜಾಗತಿಕ ಮಟ್ಟದಲ್ಲಿ ದಾಸಸಾಹಿತ್ಯದ ಪರಿಣಾಮಕಾರೀ ಪ್ರಚಾರ ಮಾಡಿದ ತಮ್ಮ ಸಾಧನೆಗಾಗಿ ಶ್ರೀಲಂಕಾ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅಮೆರಿಕಾದ ಓಕ್ಲೋಹೋಮ ವಿಶ್ವವಿದ್ಯಾಲಯದ ನೂರಾರು ಪ್ರಾಧ್ಯಾಪಕರಿಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ನೀವು ನೀಡಿದ ನಾಲ್ಕು ಉಪನ್ಯಾಸಗಳು ಇಡೀ ವಿಶ್ವವಿದ್ಯಾಲಯ ಭಾರತದತ್ತ ಮುಖಹಾಕುವಂತೆ ಮಾಡಿದ್ದು ಇಡೀ ಭಾರತಕ್ಕೆ ಸಂದ ಹೆಮ್ಮೆ. ಹದಿಮೂರು ದೇಶಗಳಲ್ಲಿ ಬಿಡುಗಡೆಯಾಗಿರುವ ತಮ್ಮ ವಿಷ್ಣುಸಹಸ್ರನಾಮ ಇಂಗ್ಲೀಷ್ ಗ್ರಂಥವನ್ನು ಹಾಂಕಾಂಗ್ ವಿಶ್ವವಿದ್ಯಾಲಯವು 2008 ರಲ್ಲಿ ತನ್ನ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಸೇರ್ಪಡೆಯಾದ ಗ್ರಂಥಗಳಲ್ಲಿ ಮಹತ್ವದ್ದು ಎಂದು ಘೋಷಿಸಿದ್ದು ಅಭಿನಂದನಾರ್ಹ. ನ್ಯೂಜಿಲ್ಯಾಂಡ್‌ನ ರಾಮ್ಸ್ ಫೌಂಡೇಷನ್ ಸಂಸ್ಥೆ ತಾವು ಪ್ರಪಂಚದಾದ್ಯಂತ ನಡೆಸಿಕೊಟ್ಟ ನೂರಾರು ಭಾಗವತ ಸಪ್ತಾಹಗಳನ್ನು ಗುರುತಿಸಿ ಭಾಗವತ ಸುರಭಿ ಎಂಬ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ.
ಆಫ್ರಿಕಾದ ಜಾಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕವರ್ಗವು ತಮ್ಮ ಉಪನ್ಯಾಸಗಳನ್ನು ಆಫ್ರಿಕಾದ ಗಾಳಿಯಲ್ಲಿ ಸೇರಿದ ಭಾರತದ ಆಧ್ಯಾತ್ಮಿಕ ಗಂಧ ಎಂದು ಬಣ್ಣಿಸಿದೆ. ಅಮೆರಿಕಾದ ಹಿಂದೂ ವಿಶ್ವವಿದ್ಯಾಲಯವು ತಮ್ಮ ಉಪನ್ಯಾಸಗಳನ್ನು ಅಮೆರಿಕಾ ನೆಲದ ಮೇಲೆ ನಡೆದ ಭಾರತೀಯ ಆಧ್ಯಾತ್ಮಿಕ ಮೌಲ್ಯಗಳ ಪುನರುತ್ಥಾನದ ಆಂದೋಲನ ಎಂದು ಸಾರಿದೆ. ಟೆಕ್ಸಾಸ್‌ನ ಆಸ್ಟಿನ್ ಹಿಂದೂ ದೇವಾಲಯ ಹಾಗೂ ಅಮೆರಿಕಾದ ಗ್ಲೋಬಲ್ ಅಕಾಡೆಮಿ ಆಫ್ ಪೀಸ್ ಸಂಸ್ಥೆಗಳು ಇವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಅಮೆರಿಕಾದ ವಿಶ್ವ ಮಾಧ್ವ ಸಂಘವು ಇವರಿಗೆ ‘Living Legend’ ಪ್ರಶಸ್ತಿಯನ್ನಿತ್ತು ವಿಶಿಷ್ಟ ಗೌರವ ಸಲ್ಲಿಸಿದ್ದನ್ನು ನಾವು ಮರೆಯುವಂತಿಲ್ಲ. ಎಲ್ಲಕ್ಕೂ ಮಿಗಿಲಾಗಿ ಅಮೇರಿಕದಿಂದ ಪ್ರಕಟವಾದ ಭಾರತೀಯ ಸಂಸ್ಕೃತಿ ಕುರಿತ ‘Hindu Religious Figures, Indian Academics, Indian non fiction Writers, Indian Historians, Vaishnavism, Dwaitha ಎಂಬ ಆರು ಇಂಗ್ಲೀಷ್ ಗ್ರಂಥಗಳಲ್ಲಿ ತಮ್ಮ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಆಂದೋಲನ ಹಾಗೂ ಸಾಧನೆಗಳನ್ನು ಕುರಿತು ಒಂದು ಇಡೀ ಅಧ್ಯಾಯದಲ್ಲಿ ದಾಖಲಿಸಿರುವುದು ದಿಟವಾಗಿಯೂ ಭಾರತಕ್ಕೆ ಸಂದ ವಿಶ್ವಗೌರವವಾಗಿದೆ.
ವಿದ್ಯೆ, ವಿನಯ, ಸಾಹಿತ್ಯ ಸಂಗೀತ, ಹೀಗೆ ಸಮಾಜಸೇವೆ ತಮಗೆ ಅನುರೂಪ ಸತಿಯಾಗಿ ತಮ್ಮ ಬದುಕಿಗೆ ಸುಸಂಪನ್ನತೆಯನ್ನು ತಂದಿತ್ತ ಜೀವಿತಭಾಗಸ್ವಾಮಿನಿ ಶ್ರೀಮತಿ ರಾಜಲಕ್ಷ್ಮಿ ಅವರು. ಇಬ್ಬರು ಪುತ್ರರು, ಒಬ್ಬ ಪುತ್ರಿ ತಮ್ಮ ಅನುರಾಗ ಸಹಜೀವನದ ಫಲಶೃತಿ.
Discussion about this post