ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಕಲ್ಯಾಣಕಾರಕನಾದ ಶ್ರೀ ವೆಂಕಟೇಶನ ಸನ್ನಿಧಾನ ಅರಮನೆ ನಗರಿಯಲ್ಲಿ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ವಿಶೇಷ ಮಂದಿರವಾಗಿದೆ. ಅದುವೇ ಶ್ರೀ ವೆಂಕಟಾಚಲ ಧಾಮ. ಚಾಮರಾಜ ಜೋಡಿ ರಸ್ತೆಯಲ್ಲಿ ರಾಮಸ್ವಾಮಿ ವೃತ್ತದ ಸನಿಹವೇ ಇರುವ ಈ ದೇಗುಲದಲ್ಲಿ ಅಭಯಪ್ರದನಾದ ವೆಂಕಟೇಶ ಸ್ವಾಮಿ ಸಾವಿರಾರು ಭಕ್ತರ ಆರಾಧ್ಯ ದೈವನಾಗಿದ್ದಾನೆ. ಮಾತ್ರವಲ್ಲ, ಕಲಿಯುಗದಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಕ್ಷೇತ್ರವೂ ಇಲ್ಲೇ ಇರುವುದು ಬಹಳ ವಿಶೇಷವಾಗಿದೆ.
ಏಕಾದಶ ಸಂವತ್ಸರೋತ್ಸವ
ಶ್ರೀ ವೆಂಕಟಾಚಲಧಾಮದ 11ನೇ ವಾರ್ಷಿಕೋತ್ಸವ ಅಂಗವಾಗಿ ಏಕಾದಶ ಸಂವತ್ಸರೋತ್ಸವ ಆಯೋಜಿಸಲಾಗಿದೆ. ಮೇ 21ರ ಬೆಳಗ್ಗೆ 7ಕ್ಕೆ ಪಂಚಾಶತ್ ಕಲಶಾರಾಧನೆ, ಅಧಿವಾಸ ಹೋಮ, ಬೆಳಗ್ಗೆ 10ಕ್ಕೆ ಶ್ರೀವಿದ್ಯೇಶತೀರ್ಥರಿಂದ ಬ್ರಹ್ಮ ಕಲಶಾಭಿಷೇಕ ಮತ್ತು ಸಂಸ್ಥಾನ ಪೂಜೆ, ಸಂಜೆ 7ಕ್ಕೆ ರಂಗಪೂಜೆ, ರಥೋತ್ಸವ ಸಂಪನ್ನಗೊಳ್ಳಲಿದೆ.
ಶ್ರೀ ವೆಂಕಟೇಶ ದೇವರ ವಿಗ್ರಹ ಇಲ್ಲಿ ನೆಲೆ ನಿಂತಿದ್ದು, ರಾಯರ ವೃಂದಾವನ ಪ್ರತಿಷ್ಠಾಪನೆ ಗೊಂಡದ್ದರ ಹಿಂದೆ ಭಕ್ತರ ಅನನ್ಯವಾದ ಪ್ರಾರ್ಥನೆಯೇ ಕಾರಣವಾಗಿದೆ.
ಭಕ್ತರಿಗೆ ದೇವರ ಅನುಗ್ರಹವಾಗಬೇಕು. ನಂಬಿ ಬಂದ ಜನರಿಗೆ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ನೆರವು ನೀಡಬೇಕು. ನಿತ್ಯ ನೈವೇದ್ಯ ಮಾಡಿದ ಅನ್ನದಾನವಾಗಬೇಕು ಎಂಬುದು ಶ್ರೀವೆಂಕಟಾಚಲ ಧಾಮದ ಮುಖ್ಯ ಉದ್ದೇಶ. ದಶಕಗಳ ಕಾಲ ಇವೆಲ್ಲವೂ ಈಡೇರಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸೇವೆಯನ್ನು ಒದಗಿಸಿಕೊಡಲು ಈ ಶ್ರದ್ಧಾಕೇಂದ್ರದ ಅಣಿಯಾಗಿದೆ.
ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ
ಭಂಡಾರಕೇರಿ ಮಠ
ಉಡುಪಿ ಮೂಲದ ಶ್ರೀ ಭಂಡಾರಕೇರಿ ಮಠದ ಪೀಠಾಧಿಪತಿ ಶ್ರೀ ವಿದ್ಯೇಶ ತೀರ್ಥರು ಆಗಾಗ್ಗೆ ಮೈಸೂರಿನ ಭಕ್ತರಾದ ಆಡಿಟರ್ ರವೀಂದ್ರ ಎಂಬವರ ಆಗಮಿಸಿ ಪಾದಪೂಜೆ ಸ್ವೀಕರಿಸಿ, ತೊಟ್ಟಿಲು ಪೂಜೆ ಮಾಡುತ್ತಿದ್ದರು. ಹೀಗೆ ಒಮ್ಮೆ ಭಕ್ತರಾದ ಆಡಿಟರ್ ಜಿ. ರವೀಂದ್ರ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭ ಮೈಸೂರಿನಲ್ಲಿ ಮಠದ ಶಾಖೆ ಆರಂಭಿಸುವ ಪ್ರಸ್ತಾಪ ಮಾಡಿದರು. ಇಲ್ಲಿ ಶ್ರೀ ಭಾಗವತ ಆಶ್ರಮ ಹೆಸರಿನ ಧಾರ್ಮಿಕ ನೆಲೆ ಸ್ಥಾಪಿಸಬೇಕು. ಆ ಮೂಲಕ ಸಾವಿರಾರು ಭಕ್ತರಿಗೆ ಅನುವಾಗುವಂತೆ ವಿವಿಧ ರೀತಿಯ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ರೂಪಿಸಬೇಕು ಎಂಬುದು ಶ್ರೀಗಳ ಆಶಯವಾಗಿತ್ತು.
Also Read: ಮಳೆಯಿಂದಾಗಿ ಕುಸಿತದ ಭೀತಿಯಲ್ಲಿ ಮನೆಗಳು: ಹೊಳೆಹೊನ್ನೂರಿನ 6 ಕುಟುಂಬಗಳು ಸ್ಥಳಾಂತರ
ಚಾಮರಾಜ ಜೋಡಿ ರಸ್ತೆಯಲ್ಲಿ ಮೈಸೂರು ಆಸ್ಥಾನದ ಅಗ್ರ ಪಂಕ್ತಿಯ ಸಂಗೀತ ವಿದ್ವಾಂಸರಾಗಿದ್ದ ಪದ್ಮನಾಭರಾಯರ ಹಳೆಯ ಮನೆ ಮತ್ತು ನಿವೇಶನ ಖರೀದಿಗೆ ಲಭ್ಯವಿರುವ ಸುಳಿವು ಸಿಕ್ಕಿತು. ಮಠದ ಭಕ್ತರಾದ ಆಡಿಟರ್ ರವೀಂದ್ರ, ಪದಕಿ, ರಾಘವೇಂದ್ರ ಮತ್ತಿತರರು ಮಠಕ್ಕೆ ಈ ಜಾಗ ಖರೀದಿ ಮಾಡುವಲ್ಲಿ ಮುಂದಾಳತ್ವ ವಹಿಸಿದರು. ಹೀಗೆ ಇಲ್ಲಿ ಭಾಗವತಾಶ್ರಮ ಪ್ರತಿಷ್ಠಾನದ ಚಟುವಟಿಕೆಗಳು 2009ರಲ್ಲಿ ಚಾಲನೆ ಪಡೆದವು. ಹವನ, ಹೋಮ, ಭಜನೆ, ಪಾರಾಯಣ, ಹಬ್ಬ-ಹರಿದಿನಗಳ ಆಚರಣೆ ಮೊದಲುಗೊಂಡವು. ಇದಕ್ಕಾಗಿ ಹತ್ತಾರು ಜನ ಸ್ವಯಂಸೇವಕರ ತಂಡ ಸೇವಾಕಾರ್ಯಕ್ಕೆ ಮುಂದಾಯಿತು.

ನವೀಕೃತ ಕಟ್ಟಡ
ಹೆಂಚಿನಮನೆಯ ಹಳೆಯ ಕಟ್ಟಡದ ಭಾಗವತಾಶ್ರಮವನ್ನು ಸುಸಜ್ಜಿತ ಮತ್ತು ಆಧುನೀಕರಣಗೊಳಿಸಬೇಕು ಎಂದು ಭಕ್ತರು ಸಂಕಲ್ಪ ಮಾಡಿದರು. ಮಧುಸೂದನ ಪದಕಿ ಅಧ್ಯಕ್ಷತೆಯಲ್ಲಿ ಕಟ್ಟಡ ನಿರ್ಮಾಣ ಸಮಿತಿ ರಚನೆಗೊಂಡಿತು.
ಆಶ್ರಮದಲ್ಲಿ ವೆಂಕಟೇಶ ದೇವರ ಪ್ರತಿಮೆ ಸ್ಥಾಪನೆ ಆಗಬೇಕು, ಅದರೊಂದಿಗೆ ರಾಯರ ಮೃತ್ತಿಕಾ ಬೃಂದಾವನವೂ ಇದ್ದರೆ ಸನ್ನಿಧಾನ ಮತ್ತಷ್ಟು ಜಾಗೃತ ಕ್ಷೇತ್ರವಾಗುತ್ತದೆ ಎಂದು 10 ಜನರ ಸಮಿತಿ ನಿರ್ಧರಿಸಿತು. ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥರು ಮತ್ತು ಹಿರಿಯ ವೇದ ಪಂಡಿತರಾದ ಶ್ರೀ ಕೃಷ್ಣಕುಮಾರ್ ಆಚಾರ್ ಮಾರ್ಗದರ್ಶನದಲ್ಲಿ ನಿರ್ಮಾಣ ಕಾಮಗಾರಿ ಚಾಲನೆಗೊಂಡಿತು.

ಪ್ರತಿಮೆಯಲ್ಲಿ ಒಂದು ವಿಶೇಷತೆ
ವೆಂಕಟಾಚಲ ಧಾಮದಲ್ಲಿರುವ ಶ್ರೀ ವೆಂಕಟೇಶ ದೇವರ ಪ್ರತಿಮೆಗೆಂದು ವಿಶೇಷತೆ ಇದೆ. ಶ್ರೀ ಪದ್ಮ ಪುರಾಣೋಕ್ತ ಶೈಲಿಯಲ್ಲಿ ದೇವರ ಪ್ರತಿಮೆ ಕೆತ್ತನೆಯಾಗಬೇಕು ಎಂದು ಶ್ರೀ ವಿದ್ಯೇಶತೀರ್ಥರು ಆದೇಶಿಸಿದ್ದನ್ನು ಶಿಲ್ಪಿಗಳು ಕಾರ್ಯರೂಪಕ್ಕೆ ತಂದಿದ್ದಾರೆ. ಹಾಗಾಗಿ ಇಲ್ಲಿ ವೆಂಕಟೇಶನು ಶ್ರೀನಿವಾಸನಾಗಿ ಸಕಲ ಸಿರಿ ಸಂಪತ್ತುಗಳನ್ನೂ ಭಕ್ತರಿಗೆ ಪ್ರದಾನ ಮಾಡುತ್ತಾನೆ ಎಂಬ ನಂಬಿಕೆ ಭಕ್ತರಿಗೆ ಅಚಲವಾಗಿದೆ. ಹಾಗಾಗಿಯೇ ಇದು ‘ವೆಂಕಟಾಚಲ ಧಾಮ’ ಎಂಬ ಹೆಸರಿಗೆ ಅನ್ವರ್ಥವಾಗಿದೆ.
ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ಅವತಾರವಾಗಲು ಶ್ರೀ ವೆಂಕಟೇಶನೇ ಕಾರಣ. ರಾಯರ ಆರಾಧ್ಯ ದೈವವೂ ವೆಂಕಟೇಶನೇ. ಇವೆರಡೂ ಇಲ್ಲಿ ಮಿಳಿತಗೊಂಡಿರುವುದು ಸನ್ನಿಧಾನದ ಮಹತ್ವವನ್ನು ಸಾವಿರ ಪಟ್ಟು ಹೆಚ್ಚಿಸಿದೆ ಎಂದು ಭಕ್ತಿಪೂರ್ವಕವಾಗಿ ಹೇಳುತ್ತಾರೆ ಶ್ರೀ ವಿದ್ಯೇಶ ತೀರ್ಥರು.

ಧಾಮದಲ್ಲಿ ಪ್ರತಿನಿತ್ಯ ವೆಂಕಟೇಶದೇವರಿಗೆ ಮತ್ತು ರಾಯರ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಸೇವೆ, ತಂತ್ರಸಾರೋಕ್ತ ಪೂಜೆ, ಮಹಾ ನೈವೇದ್ಯ, ಪ್ರತಿ ಗುರುವಾರ ಸಂಜೆ ರಥೋತ್ಸವ, ದೀಪೋತ್ಸವ, ರಂಗಪೂಜೆ ನಡೆಯುತ್ತದೆ. ಯುಗಾದಿ, ಶ್ರೀರಾಮ ನವಮಿ, ದೀಪಾವಳಿ, ವಿಜಯದಶಮಿ, ಗಣೇಶ ಚತುರ್ಥಿ ಸೇರಿದಂತೆ ಹಿಂದು ಪಂಚಾಂಗದ ಎಲ್ಲ ಹಬ್ಬ- ಹರಿದಿನಗಳನ್ನೂ ಆಚರಿಸಲಾಗತ್ತದೆ. ವೈಕುಂಠ ಏಕಾದಶಿ ಬಹಳ ವಿಶೇಷ. ಅಂದು ಸ್ವರ್ಗದ ಬಾಗಿಲು ಮತ್ತು ಉಯ್ಯಾಲೆಗಳನ್ನು ನಿರ್ಮಿಸಿ ದೇವರಿಗೆ ವೈಭವೋಪೇತ ಅಲಂಕಾರ, ಶ್ರೀನಿವಾಸ ಕಲ್ಯಾಣಗಳನ್ನು ನೆರವೇರಿಸಲಾಗುತ್ತದೆ. 15ಕ್ಕೂ ಹೆಚ್ಚು ಭಜನಾಮಂಡಳಿಗಳು ಬೆಳಗಿನಿಂದ ರಾತ್ರಿವರೆಗೆ ಅಖಂಡ ಭಜನಾ ಸೇವೆ ಸಮರ್ಪಿಸುತ್ತಾರೆ.
ವಿವಿಧ ದೋಶ ಪರಿಹಾರಾರ್ಥವಾಗಿ ಮಂಡಲಪೂಜೆ, ನಾಗಾರಾಧನೆ, ವಿವಿಧ ರೀತಿಯ ಹೋಮ, ಹವನ, ಉಪನಯನ ಇತ್ಯಾದಿ ಕಾರ್ಯಕ್ರಮಗಳನ್ನೂ ನೆರವೇರಿಸಲು ಭಕ್ತರಿಗೆ ಇಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಪಿತೃಕಾರ್ಯಗಳಿಗೂ ಸಕಲ ರೀತಿಯ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ವಿವರಿಸುತ್ತಾರೆ ಧಾಮದ ವ್ಯವಸ್ಥಾಪಕ (ರಾಘಣ್ಣ).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post