ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಸರಸ್ವತಿ ಸಂಗೀತ ವಿದ್ಯಾಲಯ, ಸುಶ್ರಾವ್ಯ ಮತ್ತು ಶ್ರೀ ಸಾಯಿಶೃತಿ ಸಂಗೀತ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ರಜತ ಮಹೋತ್ಸವದ ಅಂಗವಾಗಿ ವೀಣಾ ತ್ರಿಶತೋತ್ಸವ ಕಾರ್ಯಕ್ರಮವನ್ನು ಜ.17 ಮತ್ತು 18ರಂದು ನಗರದ ಫ್ರೀಡಂಪಾರ್ಕ್‌ನಲ್ಲಿ ಆಯೋಜಿಸಲಾಗಿದೆ ಎಂದು ಸರಸ್ವತಿ ಸಂಗೀತ ವಿದ್ಯಾಲಯದ ವಿದೂಷಿ ಬಿ.ಕೆ. ವಿಜಯಲಕ್ಷ್ಮೀರಾಘು ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀಣೆ ಒಂದು ಅದ್ಭುತ ಕಲಾಪ್ರಕಾರ ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸುಮಾರು 301 ವೀಣೆಗಳ ಸಾರಥ್ಯದಲ್ಲಿ ವೀಣಾನಂದ ಝೇಂಕಾರದ ಕಾರ್ಯಕ್ರಮವನ್ನು ನಾವು ಆಯೋಜಿಸಿದ್ದೇವೆ. ಇದು ಶಿವಮೊಗ್ಗ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನಡೆಯುತ್ತಿದೆ. ಒಂದೇ ವೇದಿಕೆಯಲ್ಲಿ 301 ವೀಣಾವಾದಕರು ಇರುವುದು ಇದರ ವಿಶೇಷವಾಗಿದೆ ಎಂದರು.
ಈ ವೀಣಾವಾದನ ಕಾರ್ಯಕ್ರಮವು ಜ.18ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಇದರ ಉದ್ಘಾಟನೆಯನ್ನು ಮೈಸೂರು ರಾಜ ವಂಶಸ್ಥರು ಹಾಗೂ ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಖ್ಯಾತ ವೀಣಾವಾದಕರಾದ ರೇವತಿ ಕಾಮತ್, ಗೀತಾ ರಮಾನಂದ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಸರಸ್ವತಿ ಸಂಗೀತ ವಿದ್ಯಾಲಯದ ಗೌರವಾಧ್ಯಕ್ಷ ವೆಂಕಟರಾಘು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುತ್ತಾರೆ ಎಂದರು.
ಇವರ ಜೊತೆಗೆ ವಿಶೇಷ ಆಹ್ವಾನಿತರಾಗಿ ಸಚಿವ ಮಧುಬಂಗಾರಪ್ಪ, ಶಾಸಕರುಗಳಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಎಸ್. ಪೂರ‍್ಯಾನಾಯ್ಕ್, ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಉಮೇಶ್ ಹಾಲಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುತ್ತಾರೆ ಎಂದರು.
ಚಿಲಕುಂದ ಸಹೋದರಿಯರ ಕಾರ್ಯಕ್ರಮ
ಚಿಲಕುಂದ ಸಹೋದರಿಯರು ಎಂದೇ ಪ್ರಸಿದ್ಧರಾದ ಮತ್ತು ಸರಿಗಮಪ ಕಾರ್ಯಕ್ರಮದ ಮಾರ್ಗದರ್ಶಕರಾದ ಲಕ್ಷ್ಮೀ ನಾಗರಾಜ್ ಹಾಗೂ ಇಂದೂ ನಾಗರಾಜ್ ಅವರ ಗಾಯನೋತ್ಸವ ಕಾರ್ಯಕ್ರಮ ಜ.17ರಂದು ಸಂಜೆ 6 ಗಂಟೆಗೆ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹೊಸಳ್ಳಿ ರಘುರಾಂ, ಕೇಶವದತ್, ಮಂಜುನಾಥ್ ಪಕ್ಕದವಾದ್ಯದಲ್ಲಿರುತ್ತಾರೆ ಎಂದು ರಜತ ಮಹೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ಡಿ.ಎಸ್. ಅರುಣ್ ಹೇಳಿದರು.
ಇದಕ್ಕೂ ಮೊದಲು ಜ.12ರ ಬೆಳಿಗ್ಗೆ 9 ಗಂಟೆಗೆ ಆರಾಧನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ವೀಣಾವಾದಕರು ಮತ್ತು ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಮೂಹ ಗಾಯನ, ವೀಣಾವಾದನ, ಗಾನಸಂಭ್ರಮ, ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಪಂಚರತ್ನ ಕೃತಿಗಳು ವಾದ್ಯ ಮತ್ತು ಗೋಷ್ಠಿ ಗಾಯನದಲ್ಲಿ ನಡೆಯಲಿದೆ. ವಿದ್ವಾನ್ ಹೆಚ್.ಎಸ್. ನಾಗರಾಜ್ ಮತ್ತು ವೃಂದದವರಿಂದ ಜಗದಾನಂದಕಾರಕ, ಹೊಸಳ್ಳಿ ವೆಂಕಟರಾಮ್ ಮತ್ತು ವೃಂದದವರಿಂದ ಪಿಟೀಲು ವಾದನ, ವಿ. ಅರುಣ್ ಮತ್ತು ವೃಂದದವರಿಂದ ಕನಕನರುಚಿರ, ಬಿ.ಕೆ. ವಿಜಯಲಕ್ಷ್ಮೀ ರಾಘು ಮತ್ತು ವೃಂದದವರಿಂದ ಸಮೂಹ ವೀಣಾ ವಾದನ, ಎಂದರೋ ಮಹಾನುಭಾವಲು ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಎಸ್. ವೆಂಕಟರಾಘು, ಜಯಶ್ರೀ ನಾಗರಾಜ್, ಪದ್ಮಿನಿ ಸುಧೀರ್, ಶ್ರೀವತ್ಸ, ಶಿಲ್ಪ, ರೂಪ, ಮನು, ಗಾಯತ್ರಿ, ವೀಣಾ, ವಾಣಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















