ಅಂದು ಆಷಾಢ ಮೊದಲ ಭಾನುವಾರ. ಶ್ರೀ ಚಾಮುಂಡೇಶ್ವರಿ ದೇವಾಲಯ ದೇಗುಲದಲ್ಲಿ ವಿಶೇಷ ಪೂಜೆ. ಬೆಟ್ಟದ ತುತ್ತ ತುದಿಯವರೆಗೂ ಭಕ್ತರ ಸಾಗರ. ನಾಡದೇವತೆಗೆ ವಿಶೇಷ ಪೂಜೆ ನೆರವೇರಿತು.
ಕ್ಷೇತ್ರ ದೇವತೆ ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ದರುಶನಕ್ಕಾಗಿ ದೇವಸ್ಥಾನಕ್ಕೆ ಪುಣ್ಯ ದಿನವಾದ ಆಷಾಢ ಮೊದಲ ಭಾನುವಾರ ಭಕ್ತ ಸಾಗರವೇ ಹರಿದುಬಂದಿತ್ತು.
ಈ ಪುಣ್ಯ ದಿನದಂದು ತಾಯಿಯ ದರ್ಶನ ಪಡೆಯಲು ಮಯಾನಗರಿ ಬೆಂಗಳೂರಿನಿಂದ ಮೈಸೂರಿಗೆ ನನ್ನ ಸವಾರಿ ಮುಂಜಾನೆ 5 ಗಂಟೆಗೇ ಹೊರಟಿತ್ತು.
ಆಶಾಢದ ತುಂತುರು ಮಳೆ ಬರುತ್ತಿದ್ದರೆ, ಇನ್ನೊಂದೆಡೆ ಮಂಜು ಕವಿದ ವಾತಾವರಣದಲ್ಲಿ ಇಬ್ಬನಿ ಬೀಳುವ ಹಾಗೆ ತುಂತುರು ಮಳೆ ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿನ ಅನುಭವ ಪಡೆಯುವ ಭಾಗ್ಯ ನನ್ನದಾಗಿತ್ತು.
ತಾಯಿ ಚಾಮುಂಡೇಶ್ವರಿ ದರ್ಶನ ಮಾಡಲು ಬೆಟ್ಟದ ತಪ್ಪಲಿನಿಂದ ಬೆಟ್ಟದ ತುದಿಗೆ ಕಡೆಗೆ ಹೆಜ್ಜೆ ಹಾಕಿ ಹೊರಟಾಗ…
ಬೆಟ್ಟದ ತಪ್ಪಲಿನಲ್ಲಿ ಹನುಮವ್ವ:
ಹನುಮಕ್ಕ: ಕಾಯಿ, ಹಣ್ಣು, ಅರಿಶಿನ-ಕುಂಕಮ ಇವೆಲ್ಲವನ್ನೂ ಇಟ್ಟು ಕೊಂಡು 70 ರ ಅಜ್ಜಿ ವ್ಯಾಪಾರ ವಹಿವಾಟು ನಡೆಸುತ್ತಾ ಆ ಇಳಿ ವಯಸ್ಸಿನಲ್ಲಿ ಮಂದಹಾಸ ಬೀರುತ್ತಾ, ಬರುವ ಭಕ್ತಾದಿಗಳನ್ನು ತನ್ನ ಅಂಗಡಿ ಬಳಿ ಸೆಳೆಯುತ್ತಾ ಇಂದಿನ ಆಧುನಿಕ ಯುಗದಲ್ಲಿ ಯುವಕರು ಶ್ರಮವಹಿಸಿ ದುಡಿಯಲು ಪ್ರೇರಣೆ ನೀಡುವಂತಹ ಕಾಯಕದಲ್ಲಿ ತೊಡಗಿದ್ದು ಆದರ್ಶಪ್ರಾಯವಾಗಿತ್ತು.
ಅಲ್ಲಿಂದ ಮುಂದಕ್ಕೆ ಬೆಟ್ಟದ ತಪ್ಪಲಿನಲ್ಲಿ ಚಾಮುಂಡೇಶ್ವರಿಯ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿ ಬರುವ ಭಕ್ತರಿಗೆ ಬೆಟ್ಟದ ತಪ್ಪಲಿನಲ್ಲಿರುವ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಶಿಲಾಮೂರ್ತಿಗೆ ನಮಸ್ಕರಿಸಿ ಅಲ್ಲಿಯೇ ಪೂಜೆ ಸಲ್ಲಿಸುತ್ತಿದ್ದ ಅರ್ಚಕ ಬಾಲಸುಂದರ್, ತಾಯಿಯ ದರ್ಶನ ಪಡೆಯಲು ಬರುತ್ತಿದ್ದ ಭಕ್ತ ಸಮೂಹಕ್ಕೆ ಕೈಗೆ ದಾರ ಕಟ್ಟಿ ಒಳಿತಾಗಲಿ ಎಂದು ಹಾರೈಸುತ್ತಾ ನಿಂತಿದ್ದು ಸಂತಸ ಮೂಡಿಸಿತು.
ಈ ಪದ್ದತಿಯ ಬಗ್ಗೆ ಅವರ ಬಳಿ ಕೇಳಿದಾಗ, ನಂಬಿ ಕೈಗೆ ದಾರ ಕಟ್ಟಿಸಿಕೊಂಡ ಭಕ್ತರಿಗೆ ಒಳಿತಾಗಿದೆ ಎಂದು ಮಂದಹಾಸ ಬೀರಿದರು.
ಬಾಲಸುಂದರ:
ಭಕ್ತರ ಹಣೆಗೆ ಗಂಧ ಹಚ್ಚಿ, ಪೂಜೆ ಮಾಡಿ ಇಟ್ಟುಕೊಂಡಿದ್ದ ದಾರಗಳನ್ನು ಅವರ ಕೈಗಳಿಗೆ ಕಟ್ಟಿ ಒಳಿತಾಗಲಿ ಎಂದು ಹಾರೈಸುತ್ತಾ ನಿಂತಿದ್ದ ಹಿರಿಯ ಜೀವಿ ಬಾಲಸುಂದರ್ ಅವರ ಜೊತೆ ಜೊತೆಗೆ ಗೊರವರ ಕುಣಿತ ತಂಡದವರು ಶುಭ ಹಾರೈಸಿ ಕಳಿಹಿಸುತ್ತಿದ್ದರು ಬರುವ ಭಕ್ತರಿಗೆ!!
ಬೆಟ್ಟದ ತಪ್ಪಲಿನಲ್ಲಿದ್ದ ಗೊರವರ ಕುಣಿತ ತಂಡದ ಮಹೇಶ್ ಅವರ ಜೊತೆ ನನ್ನ ಮಾತು ಆರಂಭವಾಗಿತ್ತು.
ಚಾಮರಾಜನಗರ ಜಿಲ್ಲೆಯ ದಿ. ಕುಡುಮಲ್ಲು ಗೌಡರ ಕಡೆಯವರು ನಾವು ಜನಪದ ಕಲೆಯ ಕಲಾವಿದರು. ಆಷಾಢ ಶುಕ್ರವಾರದಿಂದ ಚಾಮುಂಡೇಶ್ವರಿ ದೇವಾಲಯ ದೇಗುಲಗದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆ ದಿನದಿಂದ ನಾವು ತಾಯಿಯ ಸನ್ನಿಧಾನಕ್ಕೆ ಬಂದಿರುವುದಾಗಿ ಬರುವ ಭಕ್ತರಿಗೆ ಶುಭಕೋರಲು ಬಂದಿರುವುದಾಗಿ ತಿಳಿಸಿದರು.
ಗೊರವರ ಕುಣಿತ:
ಗೊರವರ ಕುಣಿತ ಕರ್ನಾಟಕದ ವಿಶಿಷ್ಟ ಜನಪದ ಕಲೆ. ಗೊರವರು ತಮ್ಮನ್ನು ಮೈಲಾರಲಿಂಗನ ಶಿಷ್ಯರೆಂದೂ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿಯ ಒಕ್ಕಲಿನವರೆಂದು ಗುರ್ತಿಸಿಕೊಳ್ಳುತ್ತೇವೆ ಎನ್ನುತ್ತಾರೆ ಮಹೇಶ್.
ಪ್ರತಿ ಗೊರವನು ತನ್ನ ಮೊದಲ ಮಗನಿಗೆ ಮೈಲಾರಲಿಂಗನ ದೀಕ್ಷೆ ಕೊಡಿಸುವ ಮೂಲಕ ಸತ್ಸಂಪ್ರದಾಯ ಮುಂದುವರೆಸುತ್ತಾನೆ ಎಂದು ಮಾಹಿತಿ ನೀಡಿದರು.
ಕುಣಿತ ವೇಷದ ವಿಶೇಷತೆಯೇನು ಗೊತ್ತಾ?
ಗೊರವರು ಧರಿಸುವ ವೇಷಭೂಷಣಗಳು ಆಕರ್ಷಕವೂ, ಅರ್ಥಪೂರ್ಣ!! ಸೊಂಟಕ್ಕೊಂದು ನಡುಪಟ್ಟಿ, ಕವಡೆಗಳಿಂದ ಅಲಂಕೃತಗೊಂಡ ಕೆಂಪು ಬಣ್ಣದ ಬನಾತು, ಕೊರಳಲ್ಲಿ ರುದ್ರಾಕ್ಷಿ ಮಾಲೆ, ರುಮಾಲು, ರುಮಾಲಿನ ಮೇಲೆ 15 ಇಂಚು ಅಗಲದ ಕರಡಿಚರ್ಮದ ಕುಲಾವಿ, ನೊಸಲಲ್ಲಿ ಮೂರು ಪಟ್ಟೆಯ ವಿಭೂತಿ, ಎಡ ಬಗಲಲ್ಲಿ ಜೋಳಿಗೆ, ಎಡಗೈಯಲ್ಲಿ ಬಿದಿರಿನ ಪಿಳ್ಳಂಗೋವಿ, ಬಲಗೈಯಲ್ಲಿ ಮೇಕೆ ಚರ್ಮದಿಂದ ತಯಾರಿಸಿದ ಡಮರುಗ ಮತ್ತು ಮೇಲಂಗಿಯ ಮೇಲೆ ಕರಿಕಂಬಳಿಯನ್ನು ಕತ್ತು ಬಳಸಿ ಇಳಿ ಬಿಡಲಾಗಿರುತ್ತದೆ. ಮಲ್ಲಿಕಾರ್ಜುನ ಸ್ವಾಮಿ ನಾಗರಾಜು ಗೊರವರ ಕುಣಿತ ಹಾಗೂ ಬದುಕಿನ ಬಗ್ಗೆ ಮಾಹಿತಿ ನೀಡಿದರು.
ಮೆಟ್ಟಿಲು ಸೇವೆ:
ಮೈಸೂರಿನ ಮಹದೇವಪುರದ ಶ್ರೀಮತಿ ಗಿರಿಜಾ ಹಾಗೂ ಶ್ರೀಮತಿ ಪೂರ್ಣಿಮಾ ಅ ವರ ಸಕಲ ಇಷ್ಟಾರ್ಥ ನೆರವೇರಿದ ಕಾರಣ ಅವರು ಬೆಟ್ಟದ ತಪ್ಪಲಿನಿಂದ ಹಿಡಿದು ಬೆಟ್ಟದ ಮೇಲಿರುವ ತಾಯಿಯ ಸನ್ನಿಧಾನದವರಗೆ 1200 ಮೆಟ್ಟಿಲುಗಳಿಗೆ ಅರಿಶಿನ ಕುಂಕುಮ ಹಚ್ಚಿ ನಮಸ್ಕರಿಸುತ್ತಾ ಸಾಗಿತ್ತು ಅವರ ಪಯಣ!
ಮಲೈ ಮಹದೇಶ್ವರ ಬೆಟ್ಟ:
ಏಳು ಮಲೈ ಮಹದೇಶ್ವರ ಬೆಟ್ಟದ ಮಹದೇಶ್ವರ ಗುಡ್ಡದಪ್ಪನ ಭಕ್ತರು ನಾವು ಎನ್ನುತ್ತಾರೆ ಇವರು.
ಆಷಾಢ ಶುಕ್ರವಾರದಿಂದ ಚಾಮುಂಡೇಶ್ವರಿ ದೇವಾಲಯ ದೇಗುಲಗದಲ್ಲಿ ವಿಶೇಷ ಪೂಜೆ ನಾವು ಇಲ್ಲಿ ಬಂದು ಮಹದೇಶ್ವರನ ಬಗ್ಗೆ ಭಕ್ತಿ ಭಾವದಿಂದ ಅವರ ಕೀರ್ತನೆಗಳನ್ನು ಜನರಿಗೆ, ಭಕ್ತರಿಗೆ ತಲುಪಿಸುವ ಕಾಯಕದಲ್ಲಿ ತೊಡುಗಿಕೊಂಡಿದ್ದೇವೆ ಎಂದು ಮಹೇಶ್, ಸಿದ್ದಪ್ಪ, ಸಿದ್ದಪ್ಪ, ಮಹೇಶ್’ರವರು ಹೇಳುತ್ತಾ ನಾವು 15 ವರುಷಗಳಿಂದ ಭಕ್ತಿಭಾವದಿಂದ ಕೀರ್ತನೆಗಳನ್ನು ಹಾಡುತ್ತಾ ಇದ್ದು ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಅವರ ಮುಂಭಾಗದಲ್ಲಿದ್ದ ಬಿದಿರಿನ ಕಟ್ಟು ನೋಡಿ ನಾನು ಅವರ ಬಳಿ ಕೇಳಿದಾಗ ಅವರು ನೂತನವಾಗಿ ಮನೆ ಕಟ್ಟುವ ಜನರು ಇದನ್ನು ಮನೆಗೆ ಕಟ್ಟಿದ್ದರೆ ಒಳಿತಾಗುವುದು ಎಂದು ನುಡಿದರು.
ಇನ್ನು, ಬೆಟ್ಟದಲ್ಲಿ ಬನಗಿರಿಯ ಅಜ್ಜಿಯರು ಭಜನೆಯಲ್ಲಿ ತೊಡಿಗಿದ್ದರು. ಬೆಟ್ಟದಲ್ಲಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಚೀಲ ಹಾಗೂ ತ್ಯಾಜ್ಯ ನಿರ್ವಹಣೆ ಮಾಡಲು ದೊಡ್ಡ ದೊಡ್ಡ ಪ್ರಮಾಣದಲ್ಲಿ ಡ್ರಮ್ ಇಟ್ಟು ಪರಿಸರದ ರಕ್ಷಣೆಯ ಹೊಣೆಯನ್ನು ದೇವಾಲಯದ ಆಡಳಿತ ಮಂಡಳಿ ನಿರ್ವಹಿಸಿದ್ದು ನಿಜಕ್ಕೊ ಶ್ಲಾಘನೀಯ.
ಇಷ್ಟೆಲ್ಲಾ ವಿಶೇಷತೆಗಳ ನಡುವೆ ಬೆಟ್ಟದಲ್ಲಿರುವ ನಂದಿಗೆ ವಿಶೇಷ ಪೂಜೆ ಹಾಗು ಅಲಂಕಾರ ಮಾಡಲಾಗಿತ್ತು. ಈ ಸಂಭ್ರಮಗಳ ನಡುವೆ ಆಷಾಢ ಮೊದಲ ಭಾನುವಾರ ಚಾಮುಂಡೇಶ್ವರಿ ದೇವಾಲಯ ದೇಗುಲಗದಲ್ಲಿ ವಿಶೇಷ ಪೂಜೆ ನಡೆದು ಬೆಟ್ಟದ ತಪ್ಪಲಿನಿಂದ ಹಿಡಿದು ಬೆಟ್ಟದ ತುತ್ತ ತುದಿಯವರೆಗೂ ಭಕ್ತರ ಸಾಗರ ತಾಯಿಯ ದರ್ಶನ ಪಡೆದು ಬಂದಿದ್ದ ಭಕ್ತರು ಪಾವನರಾದರು. ಇದೆಲ್ಲವನ್ನೂ ಕಾಣುವ ಭಾಗ್ಯವೂ ಸಹ ನನ್ನದಾಗಿತ್ತು.
ಚಿತ್ರ, ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ
Discussion about this post