ಕಲ್ಪ ಮೀಡಿಯಾ ಹೌಸ್ | ಗದಗ |
ಸುಮಾರು 150 ವರ್ಷದ ಐತಿಹಾಸಿಕ ಪ್ರಸಿದ್ಧ ಶಿಲ್ಪಕಲೆಗಳನ್ನು ಹೊಂದಿದ್ದ ವೀರ ನಾರಾಯಣ ದೇವಾಲಯದ #VeeraNarayanaTemple ಗೋಡೆಗಳನ್ನು ಜೀರ್ಣೋದ್ದಾರದ ಹೆಸರಿನಲ್ಲಿ ಯಾವುದೇ ರೀತಿಯ ಮಾಹಿತಿ ನೀಡದೇ ಧ್ವಂಸ ಮಾಡಲಾಗಿದ್ದು, ಈ ಕುರಿತಂತೆ ದೇವಾಲಯದ ವಂಶ ಪಾರಂಪರಿಕ ಅರ್ಚಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಜರಾಯಿ ಇಲಾಖೆಗೆ ಸೇರದೇ ಇರುವ ಈ ದೇವಾಲಯವನ್ನು ವಂಶ ಪಾರಂಪರಿಕವಾಗಿಯೇ ಅರ್ಚಕರು, ಪಾರುಪತ್ತೆದಾರರು ನಡೆಸಿಕೊಂಡು ಬಂದಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಪೂರ್ವ ಮಾಹಿತಿ ನೀಡಿದೇ ಪೊಲೀಸ್ ಭದ್ರತೆಯಲ್ಲಿ #PoliceSecurity ಒಡೆದು ಹಾಕಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.
ದೀಪಾವಳಿ ಹಬ್ಬದಂದು ಏಕಾಏಕಿ ಪೊಲೀಸ್ ಭದ್ರತೆಯಲ್ಲಿ ದೇವಾಲಯವನ್ನು ಧ್ವಂಸ ಮಾಡಲಾಗಿದ್ದು, ಅವಸರದ ಕಾಮಗಾರಿ ಹಲವು ಸಂಶಯಗಳಿಗೆ ಕಾರಣವಾಗಿದೆ.ಪ್ರಮುಖವಾಗಿ ಗಮನಿಸಬೇಕಾದ ವಿಷಯವೆಂದರೆ, ದೇವಾಲಯದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಅರ್ಚಕರು ಈವೆರಗೂ ಯಾವುದೇ ರೀತಿಯ ಅನುದಾನದ ಸಹಾಯವನ್ನು ಸರ್ಕಾರದಿಂದ ಕೇಳಿಲ್ಲ. ಆದರೂ, ಜೀರ್ಣೋದ್ಧಾರ ಮಾಡುತ್ತೇವೆ ಎಂಬ ಅಂಶದಿಂದ ಜೀರ್ಣೋದ್ಧಾರದ ನೀಲನಕ್ಷೆಯನ್ನೂ ಸಹ ಪ್ರದರ್ಶಿಸದೇ ಧ್ವಂಸ ಮಾಡಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ.
ಅಲ್ಲದೇ, ಪುರಾತನ ಐತಿಹ್ಯ ಹಾಗೂ ಶಿಲ್ಪಕಲೆಯನ್ನು ಹೊಂದಿರುವ ಈ ದೇವಾಲಯದ ಗೋಡೆಗಳನ್ನು ಯಾವುದೇ ರೀತಿಯ ಸೂಕ್ಷ್ಮತೆ ವಹಿಸದೇ ಯಂತ್ರಗಳನ್ನು ಬಳಡಿ ಬೇಕಾಬಿಟ್ಟಿಯಾಗಿ ಕೆಡವಲಾಗಿದೆ. ಈ ವೇಳೆ ದೇವಾಲಯದ ದ್ವಾರಗಳೂ ಸಹ ಹಾನಿಯಾಗಿವೆ.
ಕಾಮಗಾರಿ ಆರಂಭ ಮಾಡುವ ಮುನ್ನ ದೇವಾಲಯದ #Temple ವಂಶ ಪಾರಂಪರಿಕ ಅರ್ಚಕರನ್ನು ಯಾವುದೇ ರೀತಿಯಲ್ಲೂ ಸಹ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ದೀಪಾವಳಿ ಹಬ್ಬದ ವೇಳೆಯಲ್ಲಿ ಬೇಡ ಎಂದು ಬೇಡಿಕೊಂಡು ಕಣ್ಣೀರು ಸುರಿಸಿದರೂ ಲೆಕ್ಕಿಸದೇ ಗೋಡೆಗಳನ್ನು ಒಡೆಯಲಾಗಿತ್ತು.
1 ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ಜೀರ್ಣೋದ್ಧಾರ #Anastylosis ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಕಾಮಗಾರಿ ಆರಂಭಕ್ಕೂ ಮುನ್ನ ಯಾವುದೇ ರೀತಿಯಲ್ಲೂ ನೀಲ ನಕ್ಷೆ ಪ್ರದರ್ಶನ ಮಾಡಿಲ್ಲ ಎಂದು ಭಕ್ತರು ದೂರಿದ್ದಾರೆ.
ಈ ಬಗ್ಗೆ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಜೆಡಿಎಸ್ ರಾಜ್ಯ ವಕ್ತಾರ ವೆಂಕನ ಗೌಡ ಗೋವಿಂದಗೌಡ್ರ, ವೀರ ನಾರಾಯಣ ದೇವಾಲಯದಲ್ಲಿ ತರಾತುರಿಯಿಂದ ನಡೆಸುತ್ತಿರುವ ಕಾಮಗಾರಿಯಿಂದ ಇಲ್ಲಿನ ಶಿಲ್ಪಕಲೆಗೆ ಹಾಗೂ ಪುರಾತನ ಮಹತ್ವಕ್ಕೆ ಧಕ್ಕೆ ಉಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರ ಅವಸರದ ಕ್ರಮ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದ್ದಾರೆ.
ಹಿಂದೂಗಳ ಅತಿ ದೊಡ್ಡ ಹಬ್ಬವಾದ ದೀಪಾವಳಿಯ ದಿನದಂದೇ ದೇವಾಲಯದ ಗೋಡೆಗಳನ್ನು ಒಡೆಯುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಗೋಡೆಗಳನ್ನು ಧ್ವಂಸ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದರು.
ಸಂಬಂಧಿಸಿದ ಅಧಿಕಾರಿಗಳು ಕೂಡಲೇ ದೇವಾಲಯಕ್ಕೆ ಸಂಬಂಧಿಸಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಬೇಕು. ಕೂಡಲೇ ಜೀರ್ಣೋದ್ಧಾರದ ನೀಲನಕ್ಷೆ ಪ್ರದರ್ಶನ ಮಾಡಬೇಕು ಎಂದು ಆಗ್ರಹಿಸಿದರು.
ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ವಂಶ ಪಾರಂಪರಿಕ ಅರ್ಚಕರು, ನಾವು ಯಾರ ಬಳಿಯಲ್ಲೂ ಜೀರ್ಣೋದ್ದಾರಕ್ಕೆ ಅನುದಾನ ಕೇಳಿಲ್ಲ. ನಾವೇ ಜೀರ್ಣೋದ್ಧಾರ ಮಾಡಿಕೊಳ್ಳುತ್ತೇವೆ. ಸರ್ಕಾರದ ಯಾವುದೇ ಅನುದಾನದ ಅವಶ್ಯಕತೆ ನಮಗೆ ಇಲ್ಲ. 12 ಶತಮಾನದಿಂದ ವಂಶ ಪಾರಂಪರ್ಯವಾಗಿ ನಾವು ಪೂಜೆ ಮಾಡಿಕೊಂಡು, ದೇವಾಲಯವನ್ನು ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ. ಆದರೆ, ನಮಗೆ ಯಾವುದೇ ರೀತಿಯ ಮಾಹಿತಿ ಅಥವಾ ನೋಟೀಸ್ ನೀಡದೇ ದೇವಾಲಯದ ಗೋಡೆ ಒಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಗುಲ 12ನೇ ಶತಮಾನದ್ದಾಗಿದ್ದು, ಅಂದರೆ 800 ವರ್ಷ ಹಳೆಯದ್ದಾಗಿದೆ. ಆದರೆ, ಸುಮಾರು 150 ವರ್ಷದ ಹಿಂದಿನ ಐತಿಹಾಸಿಕ ಗೋಡೆಗಳನ್ನು ಈಗ ಒಡೆದು ಹಾಕಲಾಗಿದೆ.
ಮುಜರಾಯಿ ಇಲಾಖೆಗಾಗಲೀ, ಪ್ರಾಚ್ಯವಸ್ತು ಇಲಾಖೆಗಾಗಲೀ ನಮ್ಮ ದೇವಾಲಯಕ್ಕಾಗಲೀ ಯಾವುದೇ ಸಂಬಂಧವಿಲ್ಲ. ಜೀರ್ಣೋದ್ಧಾರ ಮಾಡುವುದಾಗಿ 2003ರಲ್ಲಿ ನೋಟಿಫಿಕೇಶನ್ ಮಾಡಲಾಗಿದ್ದು, ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದೆವು. ಆಗ ನಮ್ಮ ಪರವಾಗಿ ತೀರ್ಪು ಬಂದಿತ್ತು. ಆದರೆ, ಈಗ ಮತ್ತೆ, ಜೀರ್ಣೋದ್ಧಾರ ಮಾಡುವ ಹೆಸರಿನಲ್ಲಿ ಸ್ಥಳೀಯ ಶಾಸಕರು ಆಸಕ್ತಿ ವಹಿಸಿ ಈಗ ಧ್ವಂಸ ಮಾಡಿಸಿದ್ದಾರೆ ಎಂದು ದೂರಿದ್ದಾರೆ.
ಇದೇ ಸಂಬಂಧಿತ ನಮಗೂ ಸರ್ಕಾರಕ್ಕೂ ನ್ಯಾಯಾಲಯದಲ್ಲಿ ಪ್ರಕರಣವಿತ್ತು. ಈ ನಡುವೆ, ಹಿಂದೆ ಧರ್ಮಶಾಲಿ ಮಂಟಪವನ್ನು ಅಧಿಕಾರಿಗಳು ಕೆಡವಿದ್ದರು. ಅದನ್ನು ಸ್ವಚ್ಚ ಮಾಡಿ ಕೊಡಿ ಎಂದು ನ್ಯಾಯಾಲಯ ಆದೇಶಿಸಿತ್ತು. ಆದೇಶದಲ್ಲಿ ಅಭಿವೃದ್ಧಿ, ಧ್ವಂಸ, ಮರು ನಿರ್ಮಾಣ ಸೇರಿದಂತೆ ಮಾಡುವಂತಿಲ್ಲ ಎಂದು ಉಲ್ಲೇಖಿಸಿದೆ. ಆದರೆ, ಅದನ್ನು ತಮಗೆ ಬೇಕಾದಂತೆ ಉಲ್ಲೇಖಿಸಿಕೊಂಡು ದೇವಾಲಯ ಒಡೆದಿದ್ದಾರೆ. ದೇವಾಲಯದ ಗೋಡೆ ಒಡೆಯಲು ಆದೇಶ ತೋರಿಸಿ ಎಂದರೂ ತೋರಿಸಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಹಿಂದೂ ಮುಖಂಡರೇ ಇತ್ತ ನೋಡಿ…
ಒಂದೆಡೆ ಹಿಂದೂಗಳ ಮಠ ಮಂದಿರಗಳು ಹಾಗೂ ಅದಕ್ಕೆ ಸಂಬಂಧಿಸಿದ ಭೂಮಿ ತನ್ನದು ಎಂದು ವಕ್ಫ್ ಬೋರ್ಡ್ ನೋಟೀಸ್ ನೀಡಿದ್ದು ರಾಜ್ಯದಲ್ಲಿ ವಿವಾದ ಎಬ್ಬಿಸಿದೆ. ಇದರ ನಡುವೆಯೇ, ಐತಿಹಾಸಿಕ ಪ್ರಸಿದ್ಧ ಗದುಗಿನ ವೀರ ನಾರಾಯಣ ದೇವಾಲಯವನ್ನು ಜೀರ್ಣೋದ್ಧಾರದ ಹೆಸರಿನಲ್ಲಿ ಯಾವುದೇ ರೀತಿಯ ಮಾಹಿತಿ ನೀಡದೇ, ನೀಲನಕ್ಷೆ ಬಹಿರಂಗ ಪಡಿಸದೇ ಧ್ವಂಸ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕೆಲಸದ ಹಿಂದೆ ಕಾಣದ ಕೈಗಳ ಬಲ ಪ್ರಯೋಗ ಆಗಿದೆ ಎಂದು ಅನುಮಾನಗಳನ್ನು ದೇವಾಲಯದ ಭಕ್ತರು ಹೊರಹಾಕಿದ್ದಾರೆ.
ಇಂತಹ ಸಂದರ್ಭದಲ್ಲಿ ದೇಶದಲ್ಲೇ ಪ್ರಸಿದ್ಧಿ ಪಡೆದಿರುವ ಗದುಗಿನ ವೀರ ನಾರಾಯಣ ದೇವಾಲಯವನ್ನು ರಕ್ಷಿಸಿ, ಕಾಣದ ಕೈಗಳ ವಶಕ್ಕೆ ಹೋಗದಂತೆ ತಡೆಯಲು ಹಿಂದೂ ಮುಖಂಡರ, ಸಂಘಟನೆಗಳ ಹಾಗೂ ಮಠಾಧೀಶರ ಬೆಂಬಲ ಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post