ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನದಿ ಮೂಲ ಸಂಸ್ಕೃತಿಯನ್ನು ಉಳಿಸಬೇಕಾದ ಹೊಣೆ ಯುವಕರು ಸೇರಿದಂತೆ ಎಲ್ಲರ ಜವಾಬ್ದಾರಿಯಾಗಿದೆ ಎಂದು ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಅವರು ಇಂದು ನಿರ್ಮಲ ತುಂಗಾಭದ್ರಾ ಅಭಿಯಾನದ ಅಂಗವಾಗಿ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ, ಪರ್ಯಾವರಣ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಯುವ ಜಾಗೃತಿ ಕಾರ್ಯಕ್ರಮ ಮತ್ತು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ನೀರು ಸಂಸ್ಕೃತಿಯ ಪ್ರತೀಕವೇ ಆಗಿದೆ. ಅದರಲ್ಲೂ ತುಂಗಾ, ಭದ್ರಾ, ಸಿಂಧೂ, ಕಾವೇರಿ ಮುಂತಾದ ಎಲ್ಲಾ ನದಿಗಳು ಭಾರತೀಯ ಸಂಸ್ಕೃತಿಯ ಅಂಗವಾಗಿವೆ. ನಾಗರಿಕತೆಗಳು ಕೂಡ ಇಲ್ಲಿ ಹುಟ್ಟಿಕೊಂಡಿವೆ. ನೀರು ಜೀವಜಲ. ಅದನ್ನು ಉಳಿಸಬೇಕಾದ ಹೊಣೆ ಕೂಡ ನಮ್ಮದೇ ಆಗಿದೆ. ಇಂದು ನದಿಗಳೆಲ್ಲವೂ ಕಲುಷಿತಗೊಂಡಿವೆ. ಇವುಗಳನ್ನು ಕಾಪಾಡುವ ಹಿನ್ನಲೆಯಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಮುಖ್ಯವಾಗಿ ಯುವಕರು ಇದರಲ್ಲಿ ಮುಖ್ಯಪಾತ್ರ ವಹಿಸಬೇಕು ಎಂದರು.
Also read: ಗಿಡ ಮರ ಹೆಚ್ಚು ಬೆಳೆಸಿ ತುಂಗಾ ನದಿ ಮಣ್ಣಿನ ಸಾರವನ್ನು ಹೆಚ್ಚಿಸಿ: ಕೂಡ್ಲಿ ಶ್ರೀ ಅಭಿನವ ಶಂಕರ ಭಾರತೀ
ನಮ್ಮ ಪರಿಸರ ದೇವರು ಕೊಟ್ಟ ವರ. ಅದನ್ನು ನಮ್ಮ ಹಿರಿಯರು ಕಾಪಾಡಿಕೊಂಡು ಬಂದಿದ್ದಾರೆ. ಹಿರಿಯರು ಕೊಟ್ಟಿದ್ದನ್ನೇ ನಾವು ಅನುಭವಿಸುತ್ತಾ ಬಂದಿದ್ದೇವೆ. ಅದನ್ನು ಮುಂದಿನ ಪೀಳಿಗೆಗೂ ವರ್ಗಾವಣೆ ಮಾಡಬೇಕಾದುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ 400 ಕಿಮೀ ಉದ್ದದ ಈ ಜಾಗೃತಿಯ ಪಾದಯಾತ್ರೆ ಅರ್ಥಗರ್ಭಿತವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾವಿರಾರು ಯುವಕರು ಭಾಗವಹಿಸಿ ನದಿಗಳ ಸಂರಕ್ಷಣೆಗಾಗಿ ಘೋಷಣೆಯ ಮೂಲಕ ಕುವೆಂಪು ರಂಗಮಂದಿರದಿಂದ ಹೊನ್ನಾಳಿ ರಸ್ತೆಯ ಚಟ್ನಳ್ಳಿಯವರೆಗೆ ಪಾದಯಾತ್ರೆ ನಡೆಸಲಾಯಿತು. ಗಂಗಾ ಸ್ನಾನ- ತುಂಗಾ ಪಾನ, ಶುದ್ಧ ನೀರು ನಮ್ಮೆಲ್ಲರ ಹಕ್ಕು, ಶುದ್ಧ ನೀರು ಕುಡಿಯದ ದೇಹ ಬದುಕುವುದೇ ಸಂದೇಹ, ಶುದ್ಧ ನೀರು ಸ್ವಚ್ಛತೆಯ ಸಂಕೇತ, ನದಿಗಳನ್ನು ಕಾಪಾಡಿ ಎಂಬ ಘೋಷಣೆಯ ಭಿತ್ತಿಪತ್ರ ಹಿಡಿದು ಪಾದಯಾತ್ರೆಯಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಪರಿಸರವಾದಿ ಬಿ.ಎಂ. ಕುಮಾರಸ್ವಾಮಿ, ಆರ್.ಎಸ್.ಎಸ್. ಮುಖಂಡ ಪಟ್ಟಾಭಿರಾಮ್, ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯ ವಿವೇಕ್ ತ್ಯಾಗಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post