ಬೆಂಗಳೂರು: ಈ ಸುಂದರ ಸಂಜೆಯಂದು ಅಷ್ಟೇ ಒಂದು ಸುಂದರ, ವಿಭಿನ್ನ ಮತ್ತು ಅದ್ಭುತವಾದ ನೃತ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ನಗರದ ಸೇವಾ ಸದನದಲ್ಲಿ ಸಂಗೀತ್ ನೃತ್ಯ ಭಾರತಿ ಅಕಾಡೆಮಿಯ 4 ಉದಯೋನ್ಮುಖ ಪ್ರತಿಭೆಗಳು ತಮ್ಮ ನೃತ್ಯ ಲೋಕದ ಪ್ರಥಮ ಹೆಜ್ಜೆಗಳನ್ನು ಗೆಜ್ಜೆ ಪೂಜೆಯ ರೂಪದಲ್ಲಿ ತಮ್ಮ ಗುರು ಶ್ರೀಮತಿ ಪದ್ಮಾ ಹೇಮಂತ್ ಅವರ ಮಾರ್ಗದರ್ಶನದಲ್ಲಿ ನಗರದ ಸೇವಾ ಸದನದಲ್ಲಿ ದಾಖಲಿಸಿದರು.
ನಿಗದಿತ ಸಮಯಕ್ಕೆ ಸರಿಯಾಗಿ ಒಂದು ಸುಂದರ ಆದಿ ಪೂಜಿತ ಗಣೇಶನ ಸ್ತುತಿಯೊಂದಿಗೆ ಕುಮಾರಿ ಶೀತಲ ಹೇಮಂತ್ ರವರು ಸೊಗಸಾದ ಕಂಠಸಿರಿಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಪ್ರಥಮವಾಗಿ ಅಂದು ನರ್ತಿಸಲು ಸಿದ್ಧಗೊಂಡಿದ್ದ ಎಲ್ಲಾ ಪ್ರತಿಭೆಗಳು ಸೇರಿ ತಮ್ಮಮೊದಲ ಪ್ರಸ್ತುತಿಯಾಗಿ ’ವಂದಿಸುವುದಾದಿಯಲಿ ಗಣನಾಥನ….’ ದಾಸವರೇಣ್ಯ ಶ್ರೀ ಪುರಂದರ ದಾಸರ ಸೊಗಸಾದ ಹಾಡಿಗೆ ನರ್ತಿಸಿದರು.
ಏಕವ್ಯಕ್ತಿ ಪ್ರದರ್ಶನದಲ್ಲಿ ಮೊದಲಿಗರಾಗಿ ಬಂದ ಎ. ಈಶ್ವರಿ, ನೃತ್ಯದ ಅಧಿದೇವತೆ ಶ್ರೀ ನಟರಾಜನನ್ನು ಕುರಿತಾದ ಪ್ರಚಲಿತ ಮತ್ತು ಸೊಗಸಾದ ಪ್ರಸ್ತುತಿಯನ್ನು ವೇದಿಕೆಗೆ ತಂದರು. ರೇವತಿ ರಾಗ ಆದಿತಾಳದಲ್ಲಿರುವ ಈ ಸಂಯೋಜನೆಗೆ ತಕ್ಕ ನ್ಯಾಯ ಒದಗಿಸಿದರು ಈಶ್ವರಿ. ನೃತ್ಯದ ನಡುವೆ ಅಳವಡಿಸಿದ್ದ ಗಂಗಾವತರಣದ ಸಂಚಾರಿಯಲ್ಲಿ ಎಲ್ಲರನ್ನೂ ಆಕರ್ಷಿಸಿದರು ಕುಮಾರಿ ಈಶ್ವರಿ.
ನವಿರಾದ ಮತ್ತೊಂದು ಗಣೇಶನ ಕುರಿತಾದ ಸ್ತುತಿಯೊಂದಿಗೆ ವೇದಿಕೆಗೆ ಬಂದದ್ದು ಕುಮಾರಿ ಎಸ್. ಸ್ನೇಹ ಸ್ವಲ್ಪ ಕಾಲದಿಂದಷ್ಟೇ ನೃತ್ಯ ಅಭ್ಯಾಸ ಮಾಡುತ್ತಿದ್ದರೂ ಈ ಕಲೆಯ ಬಗೆಗಿನ ಅವರ ಒಲವು ಅವರ ನೃತ್ಯದಲ್ಲಿ ಎದ್ದು ಕಾಣತ್ತಿತ್ತು. ಇವರ ಸಂಚಾರಿ ಭಾಗದಲ್ಲಿ ಗಣಪ ಮತ್ತವನ ವಾಹನ ಮೂಷಿಕನ ನಡುವಿನ ಮಾತುಕತೆಯನ್ನು ಬಿಂಬಿಸುವಲ್ಲಿ ಲಘುಹಾಸ್ಯವನ್ನು ಗುರು ಶ್ರೀಮತಿ ಪದ್ಮ ಹೇಮಂತ್ ಅವರು ಬಳಸಿಕೊಂಡಿದ್ದ ರೀತಿಯಲ್ಲಿ ಹೊಸತನವಿದ್ದುದಷ್ಟೇ ಅಲ್ಲದೆ ಸಭಿಕರು ಮುಕ್ತವಾಗಿ ಆನಂದಿಸುವಂತೆ ಮಾಡಿತು.
ಮುಂದಿನ ಮತ್ತೊಂದು ಸಮೂಹ ಪ್ರಸ್ತುತಿ ಪಾರಂಪರಿಕ ಜತಿಸ್ವರವನ್ನು 4 ಪ್ರತಿಭೆಗಳು ಕಣ್ಸೆಳೆಯುವ ಸಮೂಹ ಸಂಯೋಜನೆಯಲ್ಲಿ ಅನಾವರಣಗೊಳಿಸಿದರು. ಇದು ರಾಗ ಮಾಲಿಕೆ ಮತ್ತು ಮಿಶ್ರಚಾಪು ತಾಳಕ್ಕೆ ನಿಬದ್ಧವಾಗಿತ್ತು.
ಮುಂದಿನ ಏಕವ್ಯಕ್ತಿ ಪ್ರದರ್ಶನದಲ್ಲಿ ವೇದಿಕೆಗೆ ಬಂದ ಪ್ರತಿಭೆ ಕುಮಾರಿ ಲಕ್ಷಿತ ಗೌಡ. ಶ್ರೀ ಪುರಂದರ ದಾಸರ, ’ದಾಸನ ಮಾಡಿಕೊ ಎನ್ನ…’ ಇದು ಇವರ ಪ್ರಸ್ತುತಿ. ಭಕ್ತ ಭಾವಾಜಿಯ ಭಕ್ತಿಯ ಪರಾಕಾಷ್ಠೆಯನ್ನು ವೇದಿಕೆಯ ಮೇಲೆ ನಾಲ್ಕು ಪ್ರತಿಭೆಗಳು ಸೇರಿ ಅದ್ಭುತವಾಗಿ ಪ್ರಸ್ತುತ ಪಡಿಸಿದರು ಸಂಚಾರಿ ಭಾಗದಲ್ಲಿ.
ಏಕವ್ಯಕ್ತಿ ಪ್ರದರ್ಶನದಲ್ಲಿ ಕೊನೆಯ ಭಾಗವಾಗಿ ಬಂದದ್ದು ಕುಮಾರಿ ಎಸ್. ವರ್ಷಿಣಿ, ಗುರು ಶ್ರೀಮತಿ ಪದ್ಮಾ ಹೇಮಂತ್ ಅವರು ರಚಿಸಿರುವ, ’ದುರ್ಗಾಪರಮೇಶ್ವರಿ ಶಂಕರಿ ಶುಭಕರಿ…’ ಎಂದು ಆರಂಭಗೊಳ್ಳುವ ಸಾಹಿತ್ಯಕ್ಕೆ ಬಹಳ ಭಾವಪೂರ್ಣವಾಗಿ ನರ್ತಿಸಿದರುಕುಮಾರಿ ವರ್ಷಿಣಿ., ಈ ನೃತ್ಯದ ಸಂಚಾರಿ ಭಾಗದಲ್ಲಿ ಮಹಿಷಾಸುರ ವರ್ಧನೆಯ ವಿಷಯವನ್ನು ಅಳವಡಿಸಿಕೊಳ್ಳಲಾಗಿತ್ತು. ನೃತ್ಯದ ಕೊನೆಯ ಭಾಗದಲ್ಲಿ ಕಲಾವಿದರ ಪೋಷಕರನ್ನೂ ಬಳಸಿಕೊಂಡಿದ್ದ ರೀತಿಗೆ ಗುರುಗಳನ್ನು ಶ್ಲಾಘಿಸಲೇಬೇಕು.
ತಮ್ಮ ನೃತ್ಯ ಕಾರ್ಯಕ್ರಮದ ಕೊನೆಯ ಭಾಗವಾಗಿ ಸುಂದರವಾದ ಸಂತ ಭಾನುದಾಸರ ಮರಾಠಿ ಅಭಂಗ ಅನ್ನು ಸಮೂಹ ಸಂಯೋಜನೆಯಲ್ಲಿ ಎಲ್ಲಾ ಪ್ರತಿಭೆಗಳು ಸೇರಿ ಪ್ರಸ್ತುತ ಪಡಿಸಿದರು. ಭಜನ್ ರೂಪದಲ್ಲಿರುವ ಜಾನಪದ ಶೈಲಿಯ ಕರ್ಣಾನಂದಕರ ರಾಗ ಸಂಯೋಜನೆಯ ನೃತ್ಯದಲ್ಲಿನ ಭಕ್ತಿಯ ಪರಾಕಾಷ್ಠತೆ ಅಮೋಘವಾಗಿತ್ತು.
ಮಹಾವೀರ್ ನೃತ್ಯ ಸಂಸ್ಥೆಯ ನಿರ್ದೇಶಕರಾದ ಗುರು ಶ್ರೀಮತಿ ತನುಜ ಜೈನ್ ಅವರು ಮಾತನಾಡಿ, ಮಕ್ಕಳ ಶಿಸ್ತು ಪರಿಶ್ರಮವನ್ನು ಅಪಾರವಾಗಿ ಶ್ಲಾಘಿಸಿದರು. ನೃತ್ಯ ಕ್ಷೇತ್ರದಲ್ಲಿನ ಅವರ ಮುಂದಿನ ಬೆಳವಣಿಗೆಗೆ ಬಹಳಷ್ಟು ಸಲಹೆ ಸೂಚನೆಗಳನ್ನು ನೀಡಿದರು.
ರಮಣಶ್ರೀ ನೃತ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾರದಾ ನಟರಾಜನ್ ಅವರು ಸಹ ಯುವ ಪ್ರತಿಭೆಗಳ ನೃತ್ಯ ಪ್ರಬುದ್ಧತೆಯನ್ನು ಮುಕ್ತಕಂಠದಿಂದ ಹೊಗಳಿದ್ದಲ್ಲದೆ ಗುರು ಶ್ರೀಮತಿ ಪದ್ಮ ಹೇಮಂತ್ ಅವರ ಕ್ರಮಬದ್ದ ಶಿಕ್ಷಣವನ್ನು ಮೆಚ್ಚಿ ಆ ಪ್ರತಿಭಾವಂತ ಪ್ರತಿಭೆಗಳಿಗೆ ಹಾರೈಸಿ ಶುಭ ಕೋರಿದರು.
ಡಾ. ಬಿ.ಎಸ್. ಪಾರಿಜಾತ ಅವರು ಮಾತನಾಡಿ, ಈ ಕಿರು ವಯಸ್ಸಿನಲ್ಲಿಯೇ ಯಾವುದೇ ಕಲೆಯನ್ನು ಈ ಮಟ್ಟಿಗೆ ಕಲಿಯಬೇಕಾದರೆ ಅದರ ಹಿಂದಿನ ಶ್ರಮ, ಶಿಸ್ತು, ಕಲೆಯ ಮತ್ತು ಗುರುಗಳ ಬಗೆಗಿನ ಭಕ್ತಿ ಎಷ್ಟು ಮುಖ್ಯವೆಂಬುದನ್ನು ತಿಳಿಸಿ ಹೇಳಿದರು.
ವಾದ್ಯ ಸಹಕಾರದಲ್ಲಿ ಈ ಯುವ ಪ್ರತಿಭೆಗಳಿಗೆ ಮತ್ತೊಬ್ಬ ಯುವ ಪ್ರತಿಭೆ, ಶೀತಲ್ ಹೇಮಂತ್ ಗಾಯನದಲ್ಲಿ ಸಹಕರಿಸಿದರೆ, ವಿದ್ವಾನ ಪಿ ಜನಾರ್ಧನ ರಾವ್ ಮೃದಂಗದಲ್ಲಿ, ವಿದ್ವಾನ್ ಶ್ರೀ ಗಣೇಶ್ ಕುಮಾರ್ ಕೊಳಲಿನಲ್ಲಿ, ವಿದ್ವಾನ್ ಬಿ.ಆರ್. ಹೇಮಂತ್ ಕುಮಾರ್ ವೈಲಿನ್’ನಲ್ಲಿ ನೃತ್ಯ ಗುರು ಶ್ರೀಮತಿ ಪದ್ಮ ಹೇಮಂತ್ ರವರ ನಟುವಾಂಗದೊಂದಿಗೆ ಸಹಕರಿಸಿದರು.
ಶ್ರೀಮತಿ ಮಾನಸ ಮಾನಸ್ ಕಾರ್ಯಕ್ರಮ ನಿರೂಪಿಸಿ, ಶ್ರೀ ರವಿಯವರು ರಂಗಸಜ್ಜಿಕೆ ಮತ್ತು ಬೆಳಕಿನ ನಿರ್ವಹಣೆಯ ಭಾರವನ್ನು ಹೊತ್ತಿದ್ದರು.
ಒಟ್ಟಾರೆ ಒಂದು ಸುಂದರ ನೃತ್ಯ ಸಂಜೆಗೆ ಅಂದು ಸೇವಾ ಸದನವು ಸಾಕ್ಷಿ ಆಯಿತು ಎಂದು ಹೇಳಬಹುದು.
Discussion about this post