ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಮೈತ್ರೇಯಿ ಆದಿತ್ಯಪ್ರಸಾದ್ |
ಶರಣರ ಸಾವನ್ನು ಮರಣದಲ್ಲಿ ಕಾಣು ಎಂಬ ಮಾತು ಮತ್ತೆ ನೆನಪಾದದ್ದು ನಂದನ್ ಅವರ ಅಂತಿಮ ದರ್ಶನ ಮಾಡಿದಾಗ… ಏಕೆಂದರೆ ಅವರ ಆ ಮುಖ ಸಾವನ್ನೇ ಸಂತೋಷದಿಂದ ಒಪ್ಪಿಕೊಂಡಂತಿತ್ತು. ಅದೃಷ್ಟವೋ ದುರದೃಷ್ಟವೋ ಅಂದೇ ಬೆಳಗ್ಗೆ ಕುಂಸಿಯ ರಾಷ್ಟೀಯ ಪ್ರೌಢಶಾಲೆಯಲ್ಲಿ ಬೆಳಗ್ಗೆ ಸನ್ಮಾನ ಕೂಡ ಅವರಿಗೆ ಆಗಿತ್ತು. ಅಂದಿನ ದಿನ ರಾತ್ರಿಯೇ ಅವರು ಇಹಲೋಕ ತ್ಯಜಿಸಿದ್ದರು. ಅವರ ಕುರಿತಾಗಿ ಹೇಳುವುದಾದರೆ ಜೊತೆಗಿದ್ದವರು ಹಾಗೇ ಎದ್ದು ಹೋದಂತೆ ಅನ್ನಿಸಿದಂತೂ ಸತ್ಯ. ಆದರೂ ಆಪ್ತರ ಅಗಲಿಕೆಯ ಯಾತನೆ ಸಹಿಸಲಾಧ್ಯ. ಅವರೆಂದರೆ… ನನಗೆ ಈ ಶ್ಲೋಕ ನೆನಪಾಗುತ್ತದೆ.
ಪರೋಪಕಾರಾಯ ಫಲಂತಿ ವೃಕ್ಷಃ
ಪರೋಪಕಾರಾಯ ವಹಂತಿ ನದ್ಯಃ l
ಪರೋಪಕಾರಾಯ ದುಹಂತಿ ಗಾವಃ
ಪರೋಪಕಾರಾರ್ಥಂ ಇದಂ ಶರೀರಮ್ ll ಎಂಬ
ಸುಭಾಷಿತವು ಪರೋಪಕಾರಿಗಳ ಕುರಿತಾಗಿ ಹೇಳುವಾಗ ಮರಗಳು ಸಿಹಿಯಾದ ಹಣ್ಣುಗಳನ್ನು ಕೊಡುತ್ತವೆ ಆದರೆ ತಾನೇ ಅದನ್ನು ತಿನ್ನುವುದಿಲ್ಲ, ನದಿಗಳು ಹರಿಯುತ್ತವೆ ನೀರನ್ನು ತಾನೇ ಸೇವಿಸುವುದಿಲ್ಲ, ಹಸು ಅಮೃತದಂತಹ ಹಾಲನ್ನು ಕೊಡುತ್ತದೆ ಆದರೆ ಅದನ್ನು ಪೂರ್ಣ ತಾನೇ ಸೇವಿಸುವುದಿಲ್ಲ. ಹೀಗೆ ಪರೋಪಕಾರಿಗಳು ತಮ್ಮ ಬಳಿ ಇರುವುದು ತಮಗಾಗಿ ಮಾತ್ರ ಅಲ್ಲ ಇತರರಿಗಾಗಿ ಹೆಚ್ಚು ಎನ್ನುವಂತಹ ಸ್ವಭಾವಾದವರು ಶಿವಮೊಗ್ಗ ನಂದನ್ #ShivamoggaNandan ಅವರು. ಅವರಿಂದಾಗಿ ಈ ಊರಿಗೂ ಹೆಸರು ಬಂದಿತ್ತು.
Also Read>> ಫೆ.11-16 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ರೈಲು ಕುರಿತಾಗಿ ಲೇಟೆಸ್ಟ್ ಅಪ್ಡೇಟ್

ನನ್ನ ರೂಮ್ ಮೇಟ್ ಸವಿತಾ ಎಂಬುವವಳು ಕಾನೂನು ಪದವಿ ಓದುತ್ತಿದ್ದಳು. ಅವಳ ಗೆಳತಿಯ ಫೋಟೋಗಳನ್ನು ಅದ್ಭುತವಾಗಿ ತೆಗೆದಿದ್ದನ್ನು ನಾನು ಮೊದಲೇ ನೋಡಿದ್ದೆ, ಆಗಲೇ ಅವರ ಕುರಿತಾಗಿ ಸ್ವಲ್ಪ ತಿಳಿದಿದ್ದೆ. ಆದರೆ ಮೊದಲು ನೋಡಿದ್ದು ಮಾತ್ರ ಸಂಸ್ಕೃತೋತ್ಸವದ ಭಾಷಣ ಸ್ಪರ್ಧೆಯಲ್ಲಿಯೇ. ಹೀಗೆ ಆರಂಭವಾದ ಪರಿಚಯ ಮತ್ತೂ ಪರಿಚಿತರಾದದ್ದು ನನ್ನ ಮನೆಯವರಿಂದ. ಏಕೆಂದರೆ ಅವರದ್ದೂ ಫೋಟೋಗ್ರಫಿ ಫೀಲ್ಡೇ ಆಗಿದ್ದರಿಂದ ಈರ್ವರೂ ಸ್ನೇಹಿತರಾಗಿದ್ದರು. ಅಲ್ಲದೇ ಇಬ್ಬರದೂ ಪತ್ರಿಕೋದ್ಯಮವೇ #Journalism ಆಗಿದ್ದರಿಂದ ಅವರು ಮತ್ತಷ್ಟು ಹೆಚ್ಚು ಆಪ್ತರಾಗಿದ್ದರು.

ಆಗಾಗ ಎಲ್ಲೋ ಸಿಗುತ್ತಿದ್ದರು, ಖುಷಿಯಿಂದ ಮಾತಾಡಿಕೊಂಡು ಹೋಗುತ್ತಾ ಇದ್ದರು. ನನಗೇನೋ ಒಂಥರಾ ಹೆಮ್ಮೆ. ಎಲ್ಲರಿಗೂ ಚಿರಪರಿಚಿತರಾದ ನಂದನ್ ಅವರಿಗೇ ನಾವು ಪರಿಚಿತರು ಎಂದು. ಒಮ್ಮೆಯಂತೂ ಮಗನಿನ್ನು ಸಣ್ಣವನಿದ್ದಾಗ ವನ್ಯಜೀವಿ ಸಪ್ತಾಹ ಸಕ್ರೆಬೈಲಿನಲ್ಲಿ ನಡೆದಿತ್ತು. ಆ ಸಮಾರೋಪದ ಕಾರ್ಯಕ್ರಮಕ್ಕೆ ಮಗ ಮತ್ತು ಮನೆಯವರು ಹೋಗಿದ್ದರು. ಅಲ್ಲಿ ಮಗನೇ ಅವರ ಫೋಟೋ ತೆಗೆದು ಅವರಿಗೆ ತೋರಿಸ್ತಾ ಇರೋ ಫೋಟೋ ಅಂತೂ ಸೂರ್ಯಂಗೆ ಟಾರ್ಚಾ ಅನ್ನೋ ರೀತಿಯಲ್ಲಿ ಇತ್ತು.

ನಮ್ಮ ಮನೆಯ ಗೃಹಪ್ರವೇಶದ, ನನ್ನ ಪುಸ್ತಕ ಬಿಡುಗಡೆಯ ಎಲ್ಲ ಸುಂದರ ಕ್ಷಣಗಳನ್ನು ಅವರು ಜೀವಂತವಾಗಿರಿಸಿದ್ದಾರೆ.
ಸದ್ಗುಣಗಳ ಗಣಿಯಾದವರು ಇನ್ನಷ್ಟು ನಮ್ಮೊಂದಿಗೆ ಇರಬೇಕಿತ್ತು. ಸಾಧಿಸಿದ್ದು ಇನ್ನೂ ಕಡಿಮೆ, ಅದ್ಭುತವಾದದ್ದು ಸಾಧಿಸುವ ತುಡಿತ ಇಟ್ಟುಕೊಂಡಿದ್ದ ಜೀವ ಅದು. ಯಾರೇ ಆಗಲಿ ತ್ರಾಹಿ ಅಂದವರಿಗೆ ತನ್ನ ನೆರವಿನ ಹಸ್ತ ಚಾಚದೇ ಇರುತ್ತಿರಲಿಲ್ಲ. ಸರಳ, ಸಹೃದಯ,ಪ್ರಾಣಿ ಪ್ರೇಮಿ, ಪರಿಸರ ಪ್ರೇಮಿ, ಸಜ್ಜನ, ಹಠವಾದಿ ಹಾಗೂ ನಿಷ್ಟುರವಾದಿ ( ಆದರದು ವಿಷಯದ ವಾಸ್ತವತೆಗಷ್ಟೆ ಮೀಸಲು) ಇದರ ಹೊರತಾಗಿಯೂ ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದ ವ್ಯಕ್ತಿ.
ಕಂಟೆಂಟ್ ಬೇಸ್ ಫೋಟೋಗಳನ್ನೇ ಹೆಚ್ಚು ತೆಗೆಯುತ್ತಿದ್ದರು. ಪರಿಸರ ಪ್ರೇಮಿ, ಮರ ಗಿಡ ಪ್ರಾಣಿ ಪಕ್ಷಿಗಳೆಂದರೆ ಪ್ರಾಣ, ಮಗಳೆಂದರೆ ಪ್ರೀತಿ, ಮಗನೆಂದರೆ ಹೆಮ್ಮೆ. ತನ್ನ ಜೀವನದಲ್ಲಿ ಹೆಚ್ಚು ಗೌರವ ಪ್ರೀತಿ ತೋರಿಸ್ತಾ ಇದ್ದಿದ್ದು ತಾಯಿಗೆ, ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದು ತಾಯಿಯನ್ನೇ.
ಹೃದಯಾಘಾತದಿಂದ ಅವರಿಲ್ಲ ಎಂದು ಕೇಳಿದಾಗಿನಿಂದ, ಸೂತಕದ ಮನೆಯಾದ ಸುದ್ದಿಮನೆ ಎಂಬ ಮುರಳಿಧರ್ ಅವರ ಸಾಲುಗಳು, ಸಾವಿಗೆ ಸಾವು ಬರಬಾರದೇಕೆ ಎಂಬ ರವಿ ಟೆಲೆಕ್ಸ್ ಅವರ ಮಾತುಗಳು ಮತ್ತಷ್ಟು ಹೃದಯವನ್ನು ಆರ್ದ್ರಗೊಳಿಸಿದೆ. ಅವರ ಕುರಿತಾಗಿ ಇತರರು ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ಬರೆದಿದ್ದನ್ನು ನೋಡಿದರೆ ಅವರು ಎಷ್ಟು ಜನರ ಹೃದಯಕ್ಕೆ ಹತ್ತಿರವಾಗಿದ್ದರು ಎಂದು ತಿಳಿದು ಬರುತ್ತದೆ. ‘ಮನಸ್ಸಿಗಾಗಿರುವ ಭಾರದಿಂದ ನಾನು ನೋಡಲೂ ಬಂದಿಲ್ಲ… ನನಗೆ ನಗು ಮುಖದ ನಂದನ್ ನೆನಪೇ ಬೇಕೆಂಬ ಹಠ… ಆದರೂ ಛಾಯಾಗ್ರಹಣದಲ್ಲಿ ನಂದನ್ ಗೆ ನಂದನ್ ಅವರೇ ಸಾಟಿ… ಒಳ್ಳೆಯ ಫೋಟೋ ಎಂದಾಕ್ಷಣ ನಂದನ್ ನೆನಪಾಗುತ್ತಿದ್ದರು, ಈಗ ಆ ಪ್ರಶ್ನೆಗೆ ಶೂನ್ಯ ಕಾಡುತ್ತಿದೆ… ಪ್ರಶ್ನೆಯಾಗಿಯೇ ಉಳಿಯುವುದೇನೋ ಅಷ್ಟರ ಮಟ್ಟಿಗೆ ನಂದನ್ ನಮ್ಮನ್ನು ಆವರಿಸಿದ್ದರು… ಎನ್ನುವ ವಾದಿರಾಜ್ ಮಾತುಗಳಂತೆಯೇ ಅನೇಕರಿಗಾಗಿದೆ.
ಒಟ್ಟಾರೆ ಹೇಳಬೇಕೆಂದರೆ ಬದುಕನ್ನು ಪ್ರೀತಿಸುವಂತೆ ಮಾಡಿದ, ಭಾವನೆಗಳ ಜೊತೆಗೆ ಜೀವಂತ ಚಿತ್ರ ನೋಡಿದಂತಾಗುವ ಫೋಟೋ ಕ್ಲಿಕ್ಕಿಸುವ ಮತ್ತು ಆ ಕ್ಷಣಗಳನ್ನು ಜೀವಂತವಾಗಿರಿಸಿದ ಜಾದುಗಾರ. ಇವೆಲ್ಲವೂ ನನ್ನೊಬ್ಬಳ ಮಾತಲ್ಲ ಅವರ ಕುರಿತಾಗಿ ಯಾರನ್ನೇ ಕೇಳಿದರೂ ಇವುಗಳೇ ಬರುತ್ತವೆ. ನಮ್ಮ ಶ್ರೀಧರ, ಶಿವಣ್ಣ ಎಲ್ಲರೂ ಸಹ ಅವರ ಸಾವಿಗೆ ಮರುಗಿದವರೇ. ಹೀಗೆ ಹೇಳುವಾಗ ಕಣ್ಣಂಚಲಿ ಹನಿಯೊಂದು ಜಾರಿದೆ. ಭಾವನೆಗಳಿಗೆ ಜೀವ ತುಂಬುವ ಜೀವಿಗೆ ಭಾವಪೂರ್ಣ ವಿದಾಯವನ್ನು ಈ ನುಡಿ ನಮನಗಳ ಮೂಲಕ ಸಲ್ಲಿಸುತ್ತಿದ್ದೇನೆ. ಹೋಗಿ ಬನ್ನಿ ನಂದನ್ ಜೀ….ನಿಮ್ಮಂತವರ ಸಂತತಿ ಸಾವಿರವಾಗಲಿ.









Discussion about this post