ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯವನ್ನು ಸ್ವಭಾಷಾ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಆಚರಿಸಲಾಗುತ್ತಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ವಿಶ್ವಾವಸು ಸಂವತ್ಸರದ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಪರಮಪೂಜ್ಯರು ಆಶೀರ್ವಚನ ನೀಡಿದರು. ನಾವು ನಮ್ಮ ಭಾಷೆಯನ್ನು ಮಾತನಾಡುವುದು ದೇಶ, ಸಂಸ್ಕøತಿ, ಭಾಷೆ, ಪರಂಪರೆಗೆ ನಾವು ಸಲ್ಲಿಸುವ ಅತಿದೊಡ್ಡ ಸೇವೆ. ಇದು ಜೀವನಕ್ಕೆ ಸ್ವಾರಸ್ಯವನ್ನೂ ತರುತ್ತದೆ ಎಂದರು.

ಇದೇ ಮೊಟ್ಟಮೊದಲ ಬಾರಿಗೆ ಇಂಥ ಸೂತ್ರ ಇಟ್ಟುಕೊಂಡು ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಚಾತುರ್ಮಾಸ್ಯ ಧರ್ಮಕ್ಕೆ ಸೀಮಿತ ಎಂದು ವಾದಿಸುವವರಿದ್ದಾರೆ. ಭಾಷೆಯನ್ನು ಉಳಿಸುವುದು ಕೂಡಾ ಧರ್ಮದ ಒಂದು ಅಂಗ. ಉರಿಯುವುದು ಬೆಂಕಿಯ ಧರ್ಮ; ಹರಿಯುವುದು ನೀರಿನ ಧರ್ಮ; ಅಂತೆಯೇ ನಮ್ಮ ಭಾಷೆ ಮಾತನಾಡುವುದು ನಮ್ಮ ಧರ್ಮ ಎಂದು ವಿಶ್ಲೇಷಿಸಿದರು.

ಹಲವು ವರ್ಷಗಳ ಹಿಂದೆ ಬಿಎಂಶ್ರೀಯವರ ಕಾಲದಲ್ಲಿ ಒಂದು ಇಂಗ್ಲಿಷ್ ಪದ ಬಳಸಿದರೆ ಒಂದು ರೂಪಾಯಿ ತಪ್ಪುಕಾಣಿಕೆ ತೆಗೆದಿಡಬೇಕು ಎಂಬ ಕಾಸಿನ ಸಂಘ ಹಿಂದೆ ಅಸ್ತಿತ್ವದಲ್ಲಿತ್ತು. ಕನ್ನಡದ ಸಾರ ಉಳಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಕನ್ನಡವನ್ನು ಶುದ್ಧವಾಗಿ ಮಾತನಾಡಲು ಕಲಿಯೋಣ. ಭಾಷೆಯಲ್ಲಿ ಒಂದು ಪದ ಮರೆಯಾದರೆ ಅದಕ್ಕೆ ಸಂಬಂಧಿಸಿದ ಸಂಸ್ಕøತಿ- ಸಂಸ್ಕಾರ ಎಲ್ಲವೂ ನಾಶವಾಗುತ್ತದೆ. ಒಂದು ಪರಕೀಯ ಪದ ಆಯಾ ಭಾಷೆಯ ಸಂಸ್ಕಾರವನ್ನು ತರುತ್ತದೆ. ನಮಗೆ ಗೊತ್ತಾಗದಂತೆ ನಾವೇ ಪರಕೀಯರಾಗುತ್ತಿದ್ದೇವೆ. ಉದಾಹರಣೆಗೆ ಇಂಗ್ಲಿಷ್ ನಾವು ಆವಾಹಿಸಿಕೊಂಡಿರುವ ಆಕ್ರಮಣ. ನಮ್ಮತನವನ್ನು ಉಳಿಸಿಕೊಳ್ಳಬೇಕಾದರೆ ನಮ್ಮ ಭಾಷೆ ಉಳಿಸಿಕೊಳ್ಳುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.
ಗುಲಾಮಗಿರಿ, ದಾಸ್ಯದ ಸಂಕೇತ ಏಕೆ ಎಂದು ಈಗ ಪ್ರಶ್ನಿಸದಿದ್ದರೆ ಮುಂದಿನ ದಿನ ಈ ಪ್ರಶ್ನೆ ಎತ್ತುವವರೂ ಇರಲಾರರು. ರಾಮಚಂದ್ರಾಪುರ ಮಠ ಶುದ್ಧ ದೇಸಿ ತಳಿಯ ಗೋವು ಉಳಿಸಲು ಬಹುದೊಡ್ಡ ಆಂದೋಲನ ನಡೆಸಿದೆ. ಭಾರತೀಯ ತಳಿಗಳ ಪರಿಶುದ್ಧತೆ ಉಳಿಯಬೇಕು ಎಂಬ ಕಾರಣಕ್ಕೆ ತಳಿಸಂಕರ ವಿರೋಧಿಸುತ್ತಾ ಬಂದಿದೆ. ಗೋವಿನಲ್ಲಿ ತಳಿಸಂಕರ ಹೇಗೆ ಪ್ರಮಾದವೋ ಭಾಷೆಯಲ್ಲಿ ಕೂಡಾ ಸಂಕರ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.
ನಮ್ಮ ಮಾತೃಭಾಷೆಯ ಹಲವು ಪದಗಳು ಮರೆತು ಹೋಗಿವೆ. ಕನ್ನಡ ಮಾತನಾಡುವ ಪ್ರಯತ್ನ ಇಂದಿನಿಂದಲೇ ಆರಂಭವಾಗಲಿ; ಕನ್ನಡ ಮಾತನಾಡಬೇಕಾದಲ್ಲಿ ಕನ್ನಡವನ್ನೇ ಮಾತನಾಡೋಣ. ಪರಿಸ್ಥಿತಿಗೆ ಅನುಗುಣವಾಗಿ ಆಂಗ್ಲಭಾಷೆ ಮಾನಾಡಿದರೆ ತಪ್ಪಲ್ಲ; ಆದರೆ ಕನ್ನಡದ ಜತೆ ಅದನ್ನು ಬೆರೆಸುವುದು ಬೇಡ. ಹಾಗೆ ಮಾಡಿದರೆ ಇಡೀ ಸಮಾಜವೇ ಭಾಷೆ ಇಲ್ಲದ ಸಮಾಜವಾಗಿ ಮಾರ್ಪಾಡಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಮೊದಲ ಹಂತದಲ್ಲಿ ಪರಕೀಯ ಶಬ್ದಗಳನ್ನು ಕಡಿಮೆ ಮಾಡೋಣ; ಅಂತಿಮವಾಗಿ ಶುದ್ಧವಾದ ಭಾಷೆಯನ್ನು ಉಳಿಸಿ ಬೆಳೆಸೋಣ. ಚಾತುರ್ಮಾಸ್ಯದಲ್ಲಿ ನಾಲಿಗೆ ಶುದ್ಧೀಕರಣದ ಕಾರ್ಯ ಮಾಡೋಣ. ನಮ್ಮತನವನ್ನು ಉಳಿಸಿಕೊಳ್ಳೋಣ ಎಂದು ಆಶಿಸಿದರು.
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಜಿ.ಎಲ್.ಗಣೇಶ್, ಚಾತುರ್ಮಾಸ್ಯ ಸಮಿತಿ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ, ಮಹಾಮಂಡಲ ಉಪಾಧ್ಯಕ್ಷ ಜಿ.ಜಿ.ಹೆಗಡೆ ತಲೆಕೇರಿ, ಯುಎಸ್‍ಜಿ ಭಟ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post