ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಧರ್ಮದ ತತ್ವವನ್ನು ತಿಳಿಯಲು ಇರುವ ಸರಳ ಮಾರ್ಗವೆಂದರೆ, ಮಹಾಪುರುಷರ ದಾರಿಯನ್ನು ಅನುಸರಿಸುವುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ #Raghaveshwara shri ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುಮಾಸ್ಯ ಕೈಗೊಂಡಿರುವ ಶ್ರೀಗಳು 33ನೇ ದಿನ 33ನೇ ಗುರುಗಳಾದ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳ ದಿನಚರಿಯ ಅನಾವರಣ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

Also read: ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್‌ನ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಧರ್ಮದ ತತ್ವ ಗುಹೆಯೊಳಗೆ ಅಡಗಿಸಲ್ಪಟ್ಟಿದೆ. ಅದನ್ನು ತಿಳಿಯುವ ಸುಲಭ ದಾರಿಯೆಂದರೆ ಮಹಾಪುರುಷರು ನಡೆಯುವ ಹಾದಿ. ಮಹಾಪುರುಷರ ದಾರಿ ಇತರರಿಗೆ ರಾಜಮಾರ್ಗವಾಗುತ್ತದೆ. ಶ್ರೀರಾಮನಂಥ ಮಹಾಪುರುಷರು ನಡೆದ ದಾರಿಯನ್ನು ನೋಡಿದರೆ ನಾವು ಹೇಗೆ ಬದುಕಬೇಕು ಎನ್ನುವುದು ತಿಳಿಯುತ್ತದೆ ಎಂದು ವಿವರಿಸಿದರು.

ಅವರ ಬದುಕಿನ ಅಂತ್ಯಕಾಲವನ್ನು ತಾವೇ ಕಂಡುಕೊಂಡ ಮಹಾತ್ಮ ಅಷ್ಟಮ ರಾಘವೇಶ್ವರರು. ಕಾಶಿಯಲ್ಲಿ ಮುಕ್ತಿ ಪಡೆಯುವ ಅಭಿಲಾಷೆ ಹೊಂದಿದ್ದರೂ, ಅಲ್ಲಿಗೆ ಹೋಗಲು ಸಮಯ, ಆರೋಗ್ಯ ಇಲ್ಲ ಎಂಬ ಕಾರಣಕ್ಕೆ ಗೋಕರ್ಣಕ್ಕೆ ಬಂದು ಮುಕ್ತಿ ಹೊಂದಿದರು ಎಂದು ತಿಳಿಸಿದರು.
ತಮ್ಮ ಪೀಠಸ್ವೀಕಾರದ ಸಂದರ್ಭವನ್ನು ನೆನೆಸಿಕೊಂಡ ಶ್ರೀಗಳು, ರಾಘವೇಶ್ವರಭಾರತಿಗಳ ಸಮಾಧಿ ಸನ್ನಿಧಿಯಿಂದ ಮೊದಲ ಸೂಚನೆ ಬಂದಿತ್ತು. ಅಂಥ ಜೀವಂತ ಸಮಾಧಿ ಅದು. ಇದನ್ನು ಶಿಷ್ಯರು ಆಸ್ಥೆಯಿಂದ ಅಧ್ಯಯನ ಮಾಡಬೇಕು. ಇಂದಿಗೂ ಇರುವ ಅಗಣಿತ ಮಹಿಮ, ಅಸಾಮಾನ್ಯ ತಪಸ್ವಿಯ ದಿನಚರಿ ಬಗ್ಗೆ ಸಮಾಜದಲ್ಲಿ ಚರ್ಚೆ ನಡೆಯಬೇಕು ಎಂದರು.
‘ಕಾಲ’ ಪ್ರವಚನ ಸರಣಿಯನ್ನು ಮುಂದುವರಿಸಿದ ಶ್ರೀಗಳು, ಸತ್ವಗುಣ ದೃಢತೆ ಹಾಗೂ ರಜೋಗುಣ ಜಡತೆಯ ಸಂಕೇತ. ಅಂಥ ದೃಢತೆಯ ಅಧಿಪತಿಯಾದ ಗುರುವಿನ ದೃಷ್ಟಿಯಿಂದ ಬಾಳು ಬಂಗಾರವಾಗುವುದು ಮಾತ್ರವಲ್ಲದೇ, ಮರಣದಲ್ಲೂ ಆತನಿಗೆ ಮುಕ್ತಿ ದೊರಕುತ್ತದೆ ಎಂದು ವಿವರಿಸಿದರು.
ರಾಜಪ್ರಶ್ನೆಗೂ ಜ್ಯೋತಿಷ ಮುಖ್ಯ. ಇದು ಕಾಲ ವಿಧಾಯಕ ಶಾಸ್ತ್ರ. ಉದಾಹರಣೆಗೆ ಯದ್ಧದಿಂದ ಹಿಡಿದು ಪ್ರತಿ ಪ್ರಮುಖ ನಿರ್ಧಾರ ಕೈಗೊಳ್ಳುವಾಗಲೂ ಜ್ಯೋತಿಷಿಗಳ ಸಲಹೆ ಪಡೆಯುವುದು ಅಗತ್ಯ ಎಂದರು. ಗುರು- ಶುಕ್ರ, ಬುಧನಂಥ ಶುಭಗ್ರಹಗಳು ಅಸ್ತಮ ಅಥವಾ ವೃದ್ಧ ಸ್ಥಿತಿಯಲ್ಲಿದ್ದಾಗ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಕಾರಣ ಶುಭದ ಬದಲು ಅಶುಭ ಫಲ ಹೆಚ್ಚಿತು. ಮೂರು ತಿಂಗಳ ಹಿಂದೆ ಈ ಚುನಾವಣೆ ನಡೆದಿದ್ದರೆ, ಫಲಿತಾಂಶ ಸಂಪೂರ್ಣ ಭಿನ್ನವಾಗಿರತ್ತಿತ್ತು ಎಂದು ಬಣ್ಣಿಸಿದರು.
ಅಷ್ಟಮ ರಾಘವೇಶ್ವರರ ದಿನಚರಿಯ ಅನಾವರಣವನ್ನು ಮುಂಬೈ ಐಐಟಿಯ ನಿವೃತ್ತ ಅಧಿಕಾರಿ ಎಲ್.ಜಿ.ಭಟ್ಟಗದ್ದೆ ನೆರವೇರಿಸಿದರು. ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ್ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಎಸ್.ಜಿ.ಭಟ್ ಕಬ್ಬಿನಗದ್ದೆ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post