ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಆನ್ ಲೈನ್ ತರಗತಿಗಳು ಸಾಮಾನ್ಯ ತರಗತಿಗಳಿಗೆ ಹೋಲಿಸಿದರೆ, ಕಡಿಮೆ ವೆಚ್ಚದ್ದಾಗಿದ್ದು, ಈ ವ್ಯವಸ್ಥೆಯನ್ನು ಪಿಯು ಮಟ್ಟದಿಂದಲೇ ಪ್ರಾರಂಭಿಸುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.
ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿಂದು ಅವರು ಮಾತನಾಡಿದರು.
ಕೋವಿಡ್19 ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗಳ ಮೂಲಕ ಪಠ್ಯಕ್ರಮವನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು.
ಲಾಕ್ ಡೌನ್ ಪೂರ್ವದಲ್ಲಿ ಶೇ.79 ರಷ್ಟು ಪಠ್ಯಕ್ರಮ ಪೂರ್ಣಗೊಂಡಿದ್ದು, ಮೇ 31ರೊಳಗೆ ಶೇಕಡಾ 21ರಷ್ಟು ಪಠ್ಯಕ್ರಮಗಳನ್ನು ಆನ್‌ಲೈನ್ ಬೋಧನೆ ಮೂಲಕ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ವೆಬ್ ಎಕ್ಸ್, ಸ್ಕೈಪ್ ಹಾಗೂ ಇತರೆ ಆನ್‌ಲೈನ್ ಪ್ಲಾಟ್ ಫಾರಂ ಮೂಲಕ 30 ಸಾವಿರ ಆನ್ ಲೈನ್ ತರಗತಿಗಳನ್ನು ನಡೆಸಲಾಗಿದೆ. ವಾಟ್ಸಪ್ ಮತ್ತು ಟೆಲಿಗ್ರಾಂ ಮೂಲಕ ಶೇಕಡಾ 85 ರಷ್ಟು ವಿದ್ಯಾಥಿಗಳಿಗೆ ಇ-ನೋಟ್ಸ್, ಪಿಪಿಟಿ ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳ ವಿತರಣೆ ಮಾಡಲಾಗಿದೆ. ಜ್ಞಾನನಿಧಿ ಯು-ಟ್ಯೂಬ್ ಚಾನೆಲ್ ಮೂಲಕ 65 ವಿಷಯಗಳ 7074 ಬೋಧನಾ ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, 5 ಲಕ್ಷ ವೀಕ್ಷಣೆಯಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಗೆಟ್ ಸಿಇಟಿ ಗೋ ಮೂಲಕ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಲುಪಲಾಗಿದ್ದು, 13600 ವಿದ್ಯಾರ್ಥಿಗಳು ಯು ಟ್ಯೂಬ್ ಚಂದಾದಾರರಾಗಿದ್ದಾರೆ. 90 ಸಾವಿರ ಲಾಗಿನ್ ಸೃಜನೆ ಆಗಿದೆ. ಸದರಿ ಪೋರ್ಟಲ್‌ಗೆ ನಾಲ್ಕು ಸ್ಟಾರ್’ಗಳು ದೊರೆತಿದ್ದು, ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. 10 ಸಾವಿರಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಲ್ಯಾಪ್’ಟಾಪ್ ವಿತರಿಸಲಾಗಿರುವ ವಿದ್ಯಾರ್ಥಿಗಳಿಗೆ ಆನ್ ಲೈನ್ ಕಲಿಕೆ ಅನುಷ್ಠಾನಕ್ಕೆ ಬರಲಿದೆ. ಕೋವಿಡ್ 19 ರ ಪ್ರರಿಸ್ಥಿತಿಯಲ್ಲಿ ಡಿಜಿಟಲ್ ಕಲಿಕೆಗೆ ಹೆಚ್ಚಿನ ಮಹತ್ವ ಒದಗಿಸಲಾಗಿದ್ದು, ಮೈತ್ರಿ ಸಹಾಯವಾಣಿ ಪೋರ್ಟಲ್’ನಿಂದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.
ಹನ್ನೊಂದು ಕೋಟಿ ರೂ. ಗಳ ವೆಚ್ಚದಲ್ಲಿ ವಿಶ್ವವಿದ್ಯಾಲಯ ಮತ್ತು ಕಾಲೇಜು ಸಮಗ್ರ ನಿರ್ವಹಣಾ ವ್ಯವಸ್ಥೆಯನ್ನು ಇ-ಆಡಳಿತ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ತಿಳಿಸಿದರು.
ಯುಜಿಸಿ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳನ್ನು ಜೂನ್ 15ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಬಾರಿ ಬೇಸಿಗೆ ರಜೆಯನ್ನು ಮೊಟಕುಗೊಳಿಸಲಾಗುವುದು. ರಾಜ್ಯದ 13 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರಿ ಕಾಲೇಜುಗಳು ಇಲ್ಲದೇ ಇರುವುದನ್ನು ಗುರುತಿಸಿದ್ದು, ಹೆಚ್ಚುವರಿ ಕಾಲೇಜುಗಳು ಇರುವ ಕ್ಷೇತ್ರಗಳಿಂದ 6 ಪ್ರಥಮ ದರ್ಜೆ ಕಾಲೇಜುಗಳನ್ನು ಈ ಭಾಗಗಳಿಗೆ ಸ್ಥಳಾಂತರ ಮಾಡಲಾಗುವುದು. ಬೆಂಗಳೂರಿನ ಬಾಬಾ ಸಾಹೇಬ್ ಸ್ಕೂಲ್ ಆಫ್ ಎಕಾಮಿಕ್ಸ್ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆ ಲಾಕ್ ಡೌನ್ ನಂತರದ ದಿನಗಳಲ್ಲಿ ಪ್ರಧಾನ ಮಂತ್ರಿಗಳನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಯುವ ಸಬಲೀಕರಣ ಕೇಂದ್ರಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಪೋರ್ಟಲ್ ಮೂಲಕ ಒಂದೇ ಸೂರಿನಡಿ ಸಮಗ್ರ ಮಾಹಿತಿಯನ್ನು ಒದಗಿಸಲಾಗುವುದು. ಈ ಕೇಂದ್ರಕ್ಕೆ ಪ್ರೌಢಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳ ನೊಂದಣಿಯನ್ನು ಪ್ರಾರಂಭಿಸಲಾಗುವುದು. ಶಾಲೆ/ಕಾಲೇಜಿನಿಂದ ಹೊರಗುಳಿಯುವ ವಿದ್ಯಾರ್ಥಿಗಳನ್ನು ಈ ಮೂಲಕ ಪತ್ತೆ ಹೆಚ್ಚಸಲು ಸಾಧ್ಯವಾಗಲಿದೆ. ಕೈಗಾರಿಕೆಗಳನ್ನು ಇದರೊಂದಿಗೆ ಸಂಪರ್ಕಿಸಿ ವಿದ್ಯಾರ್ಥಿಗಳಿಗೆ ಇಂರ್ಟನ್’ಶಿಪ್ ಹಾಗೂ ಉದ್ಯೋಗ ದೊರಕಿಸುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀ ನಾರಾಯಣ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಉಪಸ್ಥಿತರಿದ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post