ಕಲ್ಪ ಮೀಡಿಯಾ ಹೌಸ್
ಹಾಸನ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದ್ದು, ಸಭೆಯ ಹಿನ್ನೆಲೆ ಟೆಂಟ್ ಹೌಸ್ ನಿರ್ಮಾಣಕ್ಕೆ ಸಚಿವ ಕೆ. ಗೋಪಾಲಯ್ಯ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಪಕ್ಷಕಟ್ಟುವ ನಿಟ್ಟಿನಲ್ಲಿ ಎರಡು ದಿನಗಳ ಕಾರ್ಯಕಾರಣಿ ಸಭೆ ನಡೆಯಲಿದ್ದು, ೩೩೮ ಮಂದಿ ಕೋರ್ ಕಮಿಟಿ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಕೊರೊನಾ ನಿಯಮಾವಳಿ ಪಾಲಿಸಿ ಕಾರ್ಯಕ್ರಮ ಮಾಡಲಾಗುವುದು. ಸಭೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರನ್ನು ಇಲ್ಲೇ ಉಳಿಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ರಾಷ್ಟ್ರೀಯ ನಾಯಕರಾದ ಅರುಣ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂಥೆ ಪಕ್ಷದ ಅನೇಕ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನಾವು ಮತ್ತಷ್ಟು ಜನರ ಹತ್ತಿರಕ್ಕೆ ಹೋಗಲು ಅನುಸರಿಸಬಹುದಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಮೇ ೨ರ ನಂತರ ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಅಲ್ಲಗಳೆದಿರುವ ಸಚಿವರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಆಗಿ ಮುಂದುವರಿಯುತ್ತಾರೆ ಎಂದು ತಿಳಿಸಿದರು.
ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ವೀಕ್ ಆಗಿದೆ ಎಂಬ ಆರೋಪ ಸುಳ್ಳು. ಹಾಸನ ಕಾರ್ಯಕಾರಿಣಿ ಸಭೆಯಿಂದ ರಾಜ್ಯದ ಜನರಿಗೆ ಒಂದು ಸಂದೇಶ ಹೋಗಲಿದೆ. ರಾಜ್ಯದ ಸಿಎಂಗೆ ಹಣಕಾಸು ಬಿಡುಗಡೆ ಮಾಡೋ ಪರಮಾಧಿಕಾರ ಇದೆ. ನಮ್ಮ ಪಕ್ಷದೊಳಗಿನ ಸಮಸ್ಯೆಯನ್ನು ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳುತ್ತೇವೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಾಕೇನಹಳ್ಳಿ ಸ್ಪೋಟ: ಸೂಕ್ತ ಕ್ರಮಕ್ಕೆ ಸೂಚನೆ
ಚಾಕೇನಹಳ್ಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಮತ್ತು ಗಣಿ ಸಚಿವರ ಜೊತೆ ಮಾತನಾಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಅಕ್ರಮ ಗಣಿಗಾರಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮನವಿ
ಸಾರಿಗೆ ನೌಕರರ ಬಹು ಬೇಡಿಕೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದೆ. ಉಳಿದ ಭರವಸೆ ಈಡೇರಿಸಲು ಸಮಯ ಕೇಳಲಾಗಿದೆ. ಉದ್ದೇಶಪೂರ್ವಕವಾಗಿ ಒತ್ತಡ ಹೇರುವುದು ಸರಿಯಲ್ಲ. ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗಿ ಎಂದು ಮುಷ್ಕರ ನಿರತ ಸಾರಿಗೆ ನೌಕರರಲ್ಲಿ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post