ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ಹೊಳೆಹೊನ್ನೂರು (Holehonnur) ಸಮೀಪದ ಅರಹತೊಳಲು ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಹಾಗೂ ಮಹಿಳೆಯರು, ಮಕ್ಕಳು ಸೇರಿದಂತೆ ಒಂಟಿಯಾಗಿ ಸಂಚರಿಸುತ್ತಿದ್ದವರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಕೋತಿಯನ್ನು (Monkey) ಕೊನೆಗೂ ಸೆರೆಹಿಡಿಯುವಲ್ಲಿ ಬನವಾಸಿಯಿಂದ ಆಗಮಿಸಿದ್ದ ವಿಶೇಷ ತಂಡ ಯಶಸ್ವಿಯಾಗಿದೆ.
ಕಳೆದ ಭಾನುವಾರ ಗ್ರಾಮದ ಬಾಲಕನೊಬ್ಬನ ಮೇಲೆ ಕೋತಿ ಏಕಾಏಕಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು. ಗಾಯಗೊಂಡ ಬಾಲಕನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಘಟನೆ ಬಳಿಕ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಮನೆಯಿಂದ ಹೊರಬರಲು ಸಹ ಹೆದರುವ ಪರಿಸ್ಥಿತಿ ಉಂಟಾಗಿತ್ತು.
Also Read>> ಅರಸೀಕೆರೆಯ 2 ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ; ಆಗಸ್ಟ್ 10ರಿಂದ ಜಾರಿ
ಗ್ರಾಮದಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದ ಯಾರೇ ಕಂಡರೂ ಕೋತಿ ದಾಳಿ ನಡೆಸಲು ಮುಂದಾಗುತ್ತಿತ್ತು. ಇದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದು, ಕೋತಿಯನ್ನು ಶೀಘ್ರವೇ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.

Holehonnur | ಬನವಾಸಿಯ ಪರಿಣಿತ ಕೋತಿ ಸೆರೆಹಿಡಿಯುವ ತಂಡ
ಗ್ರಾಮಸ್ಥರ ಮನವಿಗೆ ತಕ್ಷಣ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಮಂಗಳವಾರ ಬನವಾಸಿಯಿಂದ ಪರಿಣಿತ ಕೋತಿ ಸೆರೆಹಿಡಿಯುವ ತಂಡವನ್ನು ಕರೆಸಿಕೊಂಡು ಕಾರ್ಯಾಚರಣೆ ಆರಂಭಿಸಿದರು.
ವೀರಯ್ಯ ಸಗಣಚಾರಿ ನೇತೃತ್ವದ ತಂಡ ಮಂಗಳವಾರ ಬೆಳಗ್ಗೆಯಿಂದಲೇ ಕೋತಿಯ ಚಲನವಲನವನ್ನು ಗಮನಿಸಿ ಕಾರ್ಯಾಚರಣೆಗೆ ಮುಂದಾಯಿತು.
Also Read>> ಕಟೀಲ್ ಅಶೋಕ್ ಪೈ ಕಾಲೇಜಿನ MSc Psychology ವಿಭಾಗಕ್ಕೆ ಶೇ.100 ಫಲಿತಾಂಶ
ಕೋತಿಯನ್ನು ಬೋನಿನೊಳಗೆ ಸೆಳೆಯಲು ಬ್ರೆಡ್, ಬಾಳೆಹಣ್ಣು, ಮುಸುಕಿನ ಜೋಳ ಹಾಗೂ ಕಡ್ಲೆಕಾಯಿಗಳನ್ನು ಬೋನಿನೊಳಗೆ ಇರಿಸಿ ಹಲವು ಬಾರಿ ಪ್ರಯತ್ನಿಸಲಾಯಿತು. ಆದರೆ ಅತ್ಯಂತ ಚಾಲಾಕಿತನ ಪ್ರದರ್ಶಿಸಿದ ಕೋತಿ ಯಾವುದೇ ಆಹಾರದ ಆಮಿಷಕ್ಕೂ ಒಳಗಾಗದೆ ಮರಗಳ ಮೇಲೆಯೇ ಚಲ್ಲೆಹಣ್ಣು ತಿನ್ನುತ್ತಾ ತಂಡದ ಕಣ್ತಪ್ಪಿಸಲು ಯತ್ನಿಸಿತು.
ಕೊನೆಗೆ ತಂಡದವರು ಉಪಾಯ ರೂಪಿಸಿ ಕೋತಿ ಮನೆಯೊಂದರ ಒಳಭಾಗಕ್ಕೆ ಪ್ರವೇಶಿಸುವಂತೆ ಮಾಡಿ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಕೋತಿಯನ್ನು ಸೆರೆಹಿಡಿದ ನಂತರ ಅದನ್ನು ಮಾನವ ವಸತಿ ಪ್ರದೇಶದಿಂದ ದೂರದ ದಟ್ಟ ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋತಿ ಸೆರೆಗೆ ಒಳಗಾದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಕಳೆದ ಕೆಲವು ದಿನಗಳಿಂದ ಭಯಭೀತರಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮನೋಹರ್, ಗಸ್ತು ಅರಣ್ಯ ಪಾಲಕ ಕೆ. ಹನುಮಂತಪ್ಪ, ಪಿಡಿಒ ಎನ್. ದೊರೆ ಹಾಗೂ ಬನವಾಸಿಯಿಂದ ಆಗಮಿಸಿದ್ದ ವಿಶೇಷ ತಂಡದ ಸದಸ್ಯರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








