ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಗೃಹ ಇಲಾಖೆ ಜೀವಂತವಾಗಿದೆಯೋ ಇಲ್ಲವೋ ಎಂಬ ದೊಡ್ಡ ಅನುಮಾನ ವ್ಯಕ್ತವಾಗುತ್ತಿದೆ. ಪ್ರಸ್ತುತ ಗೃಹ ಇಲಾಖೆಯು ಕೇವಲ ಫೇಸ್‍ಬುಕ್ ಮತ್ತು ವಾಟ್ಸಾಪ್‍ಗಳನ್ನು (Facebook and Whatsup) ನಿಯಂತ್ರಿಸುವುದಕ್ಕೆ ಹಾಗೂ ಬಿಜೆಪಿ ನಾಯಕರ ಭಾಷಣಗಳನ್ನು ಹುಡುಕಿ ನೋಟಿಸ್ ನೀಡುವುದಕ್ಕಷ್ಟೇ ಸೀಮಿತವಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಡ್ರಗ್ಸ್ ದಂಧೆ, ಸಾಲು ಸಾಲು ಕೊಲೆ ಮತ್ತು ಸುಲಿಗೆಗಳ ಬಗ್ಗೆ ಗೃಹ ಇಲಾಖೆಗೆ ಯಾವುದೇ ತಲೆಬಿಸಿಯಿಲ್ಲ. ಬದಲಿಗೆ, ಕೇವಲ ವಿಪಕ್ಷ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಏನು ಮಾತನಾಡುತ್ತಾರೆ, ಭಾಷಣಗಳಲ್ಲಿ ಏನು ಹೇಳುತ್ತಾರೆ ಎಂಬುದನ್ನು ಹುಡುಕುವುದನ್ನೇ ಇಲಾಖೆ ತನ್ನ ಮುಖ್ಯ ಕೆಲಸವನ್ನಾಗಿಸಿಕೊಂಡಿದೆ. ಗೃಹ ಇಲಾಖೆ ಈ ರೀತಿ ಒಂದು ನಿರ್ಧಿಷ್ಟ ಪಕ್ಷವನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದರು.
Also read>> ಶಿವಮೊಗ್ಗ ಗ್ರಾಮಾಂತರದಲ್ಲಿ ಬರ ಪರಿಸ್ಥಿತಿ ಪರಿಶೀಲನೆಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ಭೇಟಿ
ಇದೇ ವೇಳೆ ರಾಜ್ಯದ ಬರ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾಡಬೇಕಾದ ಕೆಲಸವನ್ನು ಇಂದು ವಿರೋಧ ಪಕ್ಷವಾದ ಬಿಜೆಪಿ ಮಾಡುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸರ್ಕಾರದಲ್ಲಿ ಸಚಿವರುಗಳು ಎಲ್ಲಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ರೈತರಿಗೆ ಅನಾಥ ಪ್ರಜ್ಞೆ ಕಾಡುತ್ತಿದ್ದು, ಅವರಿಗೆ ಧೈರ್ಯ ತುಂಬಲು ಹಾಗೂ ಅವರು ವಿಚಲಿತರಾಗದಂತೆ ಬೆಂಬಲವಾಗಿ ನಿಲ್ಲಲು ಬಿಜೆಪಿ 6 ತಂಡಗಳ ಮೂಲಕ ಜಂಟಿ `ಬರ ಅಧ್ಯಯನ ಪ್ರವಾಸ’ ಕೈಗೊಂಡಿದೆ ಎಂದು ತಿಳಿಸಿದರು.
ರಾಜ್ಯದ ಜನತೆ ಇನ್ನು ಒಂದುವರೆ ವರ್ಷಗಳ ಕಾಲ ಈ ದುರಾಡಳಿತವನ್ನು ಸಹಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ಆದರೆ ಕಾಂಗ್ರೆಸ್ ಸರ್ಕಾರದ ಈ ತಾರತಮ್ಯ, ದ್ವೇಷದ ರಾಜಕಾರಣ ಮತ್ತು ಬೆದರಿಕೆ ತಂತ್ರಗಳಿಗೆ ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
