ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯನಾಯ್ಕ್ ಅವರು ಬುಧವಾರ ಹಾರನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕುಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಬಾಳೆಕೊಪ್ಪ, ಹಾರನಹಳ್ಳಿ, ಕೊನಗವಳ್ಳಿ, ತ್ಯಾಜವಳ್ಳಿ ಹಾಗೂ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಕೃಷಿ ಜಮೀನುಗಳು, ಬೆಳೆಗಳ ಸ್ಥಿತಿ ಹಾಗೂ ಕುಡಿಯುವ ನೀರಿನ ಲಭ್ಯತೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ರೈತರಿಂದ ನೇರವಾಗಿ ಮಾಹಿತಿ ಪಡೆದರು.
Also read>> ಭಗವಂತನ ಸ್ವರೂಪವಾದ ವೇದವ್ಯಾಸರು ನಮಗೆಲ್ಲರಿಗೂ ಆದರ್ಶ: ಸುರೇಶ್ ಋಗ್ವೇದಿ
ಈ ವೇಳೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಗ್ರಾಮವಾರು ಸಮಗ್ರ ವರದಿ ಸಿದ್ಧಪಡಿಸಿ, ಬೆಳೆ ಹಾನಿಯ ನಿಖರ ಮೌಲ್ಯಮಾಪನ ನಡೆಸುವಂತೆ ಹಾಗೂ ಕುಡಿಯುವ ನೀರು, ಮೇವು, ನೀರಾವರಿ ಮತ್ತು ಇತರೆ ಅಗತ್ಯ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಕಲ್ಪಿಸುವಂತೆ ಸೂಚಿಸಿದರು. ಬರ ನಿರ್ವಹಣೆಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳು ಅರ್ಹ ರೈತರಿಗೆ ತಲುಪುವಂತೆ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.
ಬರ ಪರಿಸ್ಥಿತಿಯನ್ನು ಕೇವಲ ಕಚೇರಿ ವರದಿಗಳ ಆಧಾರದ ಮೇಲೆ ಅಂದಾಜಿಸುವ ಬದಲು, ನೈಜ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಗ್ರಾಮಗಳಿಗೆ ಭೇಟಿ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು. ರೈತರ ಹಿತಾಸಕ್ತಿ ಸರ್ಕಾರದ ಮೊದಲ ಕರ್ತವ್ಯವಾಗಿದ್ದು, ಯಾವುದೇ ರೈತ ಸಂಕಷ್ಟಕ್ಕೆ ಸಿಲುಕದಂತೆ ಅಗತ್ಯ ನೆರವು ಒದಗಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಅಡಿಕೆ ತೋಟಗಳಲ್ಲಿ ನೂರಾರು ಅಡಿಕೆ ಗಿಡಗಳು ನೆಲಕ್ಕುರುಳಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‍ಡಿಆರ್‍ಎಫ್) ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‍ಡಿಆರ್‍ಎಫ್) ಮಾರ್ಗಸೂಚಿಗಳಡಿ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರಕುವಂತೆ ವಿಧಾನಸಭೆಯಲ್ಲಿ ಧ್ವನಿಯೆತ್ತಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಶಾಸಕಿ ಶಾರದಾ ಪೂರ್ಯನಾಯ್ಕ್ ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
