ಕಲ್ಪ ಮೀಡಿಯಾ ಹೌಸ್
ಹೊಸನಗರ: ಇಂದು ತಾನು ನಿಮ್ಮ ಮುತ್ತಲ ಗ್ರಾಮದ ಮೂರನೆಯ ಕೆರೆಯನ್ನು ಅತ್ಯಂತ ಅಭಿಮಾನದಿಂದ ಉದ್ಘಾಟನೆ ಮಾಡುತ್ತಿದ್ದೇನೆ. ಈ ಕೆರೆಯ ಅಭಿವೃದ್ಧಿ ಮೂಲಕ ನಿಮ್ಮ ಗ್ರಾಮದ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸಿ ಮಾದರಿ ಕಾರ್ಯ ಮಾಡಿದ್ದೀರಿ. ಗ್ರಾಮಸ್ಥರು ಸಂಘಟಿತವಾಗಿ ಕೆಲಸ ಮಾಡಿದರೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ನಿರೂಪಿಸಿದ್ದೀರಿ ಎಂದು ಮೂಲೆ ಗದ್ದೆ ಸದಾನಂದ ಶಿವಯೋಗಿ ಆಶ್ರಮದ ಶ್ರೀ ಅಭಿನವ ಚೆನ್ನ ಬಸವ ಸ್ವಾಮೀಜಿ ಹೇಳಿದರು.
ಇಂದು ತಾಲೂಕಿನ ಚಿಕ್ಕ ಜೇನಿ ಗ್ರಾಮ ಪಂಚಾಯತ್ ಮುತ್ತಲ ಗ್ರಾಮದ ಸಾರ ಸಂಸ್ಥೆ ಹಾಗೂ ಅಂಗ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಸಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎರಡು ವರ್ಷದ ಅವಧಿಯೊಳಗೆ ಗ್ರಾಮದ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಮಾಡುವುದು ಸಣ್ಣ ಸಾಧನೆ ಅಲ್ಲ, ಈ ಮೂಲಕ ನಿಮ್ಮ ಗ್ರಾಮದ ನೀರಿನ ಬವಣೆ ನೀಗಿಸಲು ನೀವು ಮಾಡಿದ ಪ್ರಯತ್ನ ಶ್ಲಾಘನೀಯವಾದದ್ದು ಎಂದರು.
ಜಲ ಸಂರಕ್ಷಣೆಯ ಕಾರ್ಯ ಮಾನವನ ಜೀವನದಲ್ಲಿ ಅತ್ಯಂತ ಪುಣ್ಯದ ಕಾರ್ಯ. ಜೀವದಾಯಕ ಜಲ ಎಂಬುದು ಭೂಮಿಯ ಮೇಲಿನ ಸಕಲ ಜೀವ ಸಂಕುಲಗಳ ಪ್ರಾಣ ವಾಯು ಕಾಪಾಡುತ್ತದೆ. ನೀರು ನಮಗಷ್ಟೆ ಅಲ್ಲ ನಮ್ಮ ಜಮೀನುಗಳಿಗೆ ಮಾತ್ರವಲ್ಲ. ಅದು ನಮ್ಮ ಅರಿವಿಗೆ ಬಾರದಂತೆ ಅನ್ಯ ಜೀವಿಗಳ, ಮತ್ತು ನೆಲದ ಮೇಲಿನ ಹಾಗೂ ಒಳಗಿನ ಅನೇಕ ಜೀವಿಗಳ ರಕ್ಷಣಾ ಕಾರ್ಯ ಮಾಡುತ್ತಿರುತ್ತದೆ ಎಂದು ವಿವರಿಸಿದರು.
ಯಾವುದೇ ಜೀವಿಯ ನೀರಡಿಕೆ ನೀಗಿಸುವುದು ಪುಣ್ಯದ ಕೆಲಸ ಇಂತಹ ಕಾರ್ಯದಲ್ಲಿ ನಿರತರಾಗಿರುವ ನೀವೆಲ್ಲರೂ ಅತ್ಯಂತ ಭಾಗ್ಯವಂತರು. ಭಗವಂತನ ವಿಶೇಷ ಅನುಗ್ರಹ ನಿಮ್ಮೆಲ್ಲರ ಮೇಲಿರುತ್ತದೆ ಎಂದು ಹೇಳಿದರು.
ಸ್ವ ಗ್ರಾಮ ಯೋಜನೆ ಸಂಚಾಲಕ ಯೇಸು ಪ್ರಕಾಶ್ ಮಾತನಾಡಿ, ಮುತ್ತಲ ಗ್ರಾಮದಲ್ಲಿ ಸ್ವಗ್ರಾಮ ಯೋಜನೆ ಅಡಿಯಲ್ಲಿ ಗ್ರಾಮದಲ್ಲಿ ಇರುವ ಮೂರು ಕೆರೆ ಅಭಿವೃದ್ಧಿ ಮಾಡುವುದು ನಮ್ಮ ಯೋಜನೆ ಆಗಿತ್ತು ಕಳೆದ ವರ್ಷ ಮಳೆಗಾಲದ ಪೂರ್ವದಲ್ಲಿ ಮಕೋಡು ಕೆರೆ, ಹಾಗೂ ವರ್ತೇ ಕೆರೆ ಅಭಿವೃದ್ಧಿ ಮಾಡಲಾಗಿತ್ತು. ಈ ವರ್ಷ ಉಳಿದಿರುವ ಸಳ್ಳಿ ಕೆರೆ ಅಭಿವೃದ್ಧಿ ಕಾರ್ಯ ಇಂದು ಪೂಜ್ಯ ಶ್ರಿಗಳ ಅಮೃತ ಹಸ್ತದಿಂದ ನೆರವೇರುತ್ತಿದೆ ಎಂದರು.
ನಮ್ಮ ಸಹಯೋಗದಲ್ಲಿ ಕಳೆದ ವರ್ಷ ಮೂರು ಕೆರೆ ಅಭಿವೃದ್ಧಿ ಕಾರ್ಯ ನಡೆದಿತ್ತು. ಈ ವರ್ಷದಲ್ಲಿ ನಾವು ಅಭಿವೃದ್ಧಿ ಮಾಡುತ್ತಿರುವ ನಾಲ್ಕನೆಯ ಕೆರೆಯಾಗಿದೆ. ಮಳೆಗಾಲದ ಪೂರ್ವದಲ್ಲಿ ಇನ್ನೂ ಎರೆಡು ಕೆರೆ ಅಭಿವೃದ್ಧಿ ಮಾಡುವುದು ನಮ್ಮ ಯೋಜನೆ ಆಗಿದೆ ಎಂದರು.
ಈ ಸಂದರ್ಭದಲ್ಲಿ ಕೆರೆ ಸಮಿತಿ ಅಧ್ಯಕ್ಷ ಎಮ್.ಕೆ. ಚೌಡಪ್ಪ, ಕಾರ್ಯದರ್ಶಿ ಎಂ.ಕೆ. ಮಂಜಪ್ಪ, ರಾಮಪ್ಪ ಹಾಗೂ ಕೆರೆ ಸಮಿತಿ ಪದಾಧಿಕಾರಿಗಳು ಸಾರ ಸಂಸ್ಥೆಯ ಕುಮಾರ್ ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post