ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ವಿಶಾಲ್ ರಾಜ್ #Vishal Raj ಅವರ ನಿರ್ದೇಶನದಲ್ಲಿ ಮತ್ತು ಹೊಸಪೇಟೆಯ ಶರ್ಮ ಅವರ ನಿರ್ಮಾಣದಲ್ಲಿ ಮೂಡಿಬಂದ ದಂತಪುರಾಣ #Dantapurana ಚಲನಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಕಿರ್ಲೋಸ್ಕರ್ #Kirloskar ಸಂಸ್ಥೆ ವತಿಯಿಂದ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಫೆ.6ರಂದು ಹೊಸಪೇಟೆಯ ಮೀರಲಾಂ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ದಂತಪುರಾಣ ಚಲನಚಿತ್ರ ಬಿಡುಗಡೆಯಾದ ಮಾರನೆಯ ದಿನವೇ ಕಿರ್ಲೋಸ್ಕರ್ ಆಡಿಟೋರಿಯಂನಲ್ಲಿ ವಿಶೇಷ ವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅದು ಎಲ್ಲಾ ರೀತಿಯಲ್ಲೂ ಗಮನಾರ್ಹವಾಗಿಯೂ ಯಶಸ್ವಿಯಾಗಿಯೂ ನೆರವೇರಿತು.
ಈ ಹಿನ್ನೆಲೆಯಲ್ಲೇ ಕಿರ್ಲೋಸ್ಕರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ ಅವರು ಚಿತ್ರ ನಿರ್ದೇಶಕರನ್ನೂ ಮತ್ತು ನಿರ್ಮಾಪಕರನ್ನೂ ಕಾರ್ಖಾನೆಗೆ ಆತ್ಮೀಯವಾಗಿ ಆಹ್ವಾನಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅವರು ಚಿತ್ರತಂಡಕ್ಕೆ ಶುಭಾಶಯಗಳು ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಈ ವೀಕ್ಷಣೆ ಕಾರ್ಯಕ್ರಮದಲ್ಲಿ ಕಿರ್ಲೋಸ್ಕರ್ ಆಫೀಸರ್ಸ್ ಕ್ಲಬ್ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಚಲನಚಿತ್ರವನ್ನು ಆಸಕ್ತಿಯಿಂದ ವೀಕ್ಷಿಸಿದರು. ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮವು ಸಾಂಸ್ಕೃತಿಕ ಸೌಹಾರ್ದತೆಯ ವಾತಾವರಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಿರ್ಲೋಸ್ಕರ್ ಲೇಡೀಸ್ ಕ್ಲಬ್ ಅಧ್ಯಕ್ಷರಾದ ಕಮಲಾ ಗುಮಾಸ್ತೆಯವರು ಚಿತ್ರತಂಡವನ್ನು ಸನ್ಮಾನಿಸಿ ಶುಭಾಶಯ ಕೋರಿದರು.
ಈ ಚಲನಚಿತ್ರದಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿ, ಪರಂಪರೆ, ರೂಢಿ-ಪದ್ದತಿ ಮತ್ತು ಆಚರಣೆಗಳ ಜೊತೆಗೆ ಇಂದಿನ ಜೀವನಶೈಲಿಯನ್ನು ಒಟ್ಟುಗೂಡಿಸಿ ಮನಸಿಗೆ ಹತ್ತಿರವಾಗುವ ಕಥಾವಸ್ತುವಿನ ಮೂಲಕ ಚಿತ್ರವನ್ನು ನಿರ್ಮಿಸಲಾಗಿದೆ. ವಿಶೇಷವಾಗಿ ಅಜ್ಜಿಗೆ ಹಲ್ಲು ಕಟ್ಟಿಸಿ, ಅವಳಿಗೂ ಎಲ್ಲರಂತೆ ಆಹಾರ ಸೇವಿಸಲು ಸಾಧ್ಯವಾಗುವಂತೆ ಮಾಡುವ ದೀರ್ಘ ಕಥಾವಳಿ ನೋಡುಗರ ಗಮನ ಸೆಳೆಯುತ್ತದೆ. ಇಂದಿನ ಮಕ್ಕಳು ಅಜ್ಜಿಯೊಂದಿಗೆ ಸಮಯ ಕಳೆಯದೆ ಇರುವ ಪರಿಸ್ಥಿತಿಯನ್ನು ಮನದಟ್ಟುಗೊಳಿಸುವಂತೆ ಚಿತ್ರ ಮನಸ್ಸನ್ನು ಕರಗಿಸುತ್ತದೆ.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















