ಹೊಸಪೇಟೆ: ಬೇವಿನಹಳ್ಳಿಯಲ್ಲಿರುವ ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಸಾಂಪ್ರದಾಯಿಕ ಹಬ್ಬದ ವಾತಾವರಣದಲ್ಲಿ ಕಾರ್ಖಾನೆಯ ಒಳ ಭಾಗದಲ್ಲಿ ಸಸಿಗಳನ್ನು ಹಾಕುವುದರ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು.
ಪ್ರಾರಂಭದಲ್ಲಿ ಕಾರ್ಖಾನೆಯ ಒಳಭಾಗದಲ್ಲಿ 20,000 ಸಸಿಗಳನ್ನು ನೆಡುವ ಮತ್ತು ಬೆಳೆಸುವ ನಿರ್ಧಾರ ತೆಗೆದುಕೊಳ್ಳುವುದರ ಮೂಲಕ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಗಿಡ ಮರಗಳು ಕಾರ್ಖಾನೆಯ ಒಳಭಾಗದಲ್ಲಿ ಹಾಕಲಾಗಿದೆ. ಅವುಗಳನ್ನು ಸಹ ಉತ್ತಮ ರೀತಿಯಲ್ಲಿ ಬೆಳೆಸಲು ತೀರ್ಮಾನಕ್ಕೆ ಬರಲಾಗಿದೆ.
ವಿಶ್ವ ಪರಿಸರ ದಿನಾಚರಣೆಯ ಸಸಿ ನೆಡುವ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಸಿವಿಲ್ ನ್ಯಾಯಾಧೀಶ ಟಿ. ಶ್ರೀನಿವಾಸ್ ಮತ್ತು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಾದ ಕೆ.ಎಸ್. ಮಂಜುನಾಥ್, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ ಭಾಗವಹಿಸಿದ್ದರು.
ಕಂಪನಿಯ ಪ್ರೆಸಿಡೆಂಟ್ ಎನ್.ಬಿ ಏಕತಾರೆ, ಹಣಕಾಸು ವಿಭಾಗದ ಮುಖ್ಯಸ್ಥ ಶ್ರೀವತ್ಸನ್ ಹಾಗೂ ಹಿರಿಯ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕೆಲಸಗಾರರು ಸ್ವ ಇಚ್ಚೆಯಿಂದ ಭಾಗವಹಿಸಿ ಸಸಿಗಳನ್ನು ನೆಡುವುದರ ಮೂಲಕ ಸಂತಸ ಪಟ್ಟರು.
ಪರಿಸರ ಜಾಗೃತಿ, ಪರಿಸರ ರಕ್ಷಣೆ ಗಿಡಮರ-ಬೆಳಸಿ-ಪರಿಸರ ಉಳಿಸಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಇಂದಿನ ಬದಲಾದ ವಾತವರಣ ಮತ್ತು ದಿನೇ ದಿನೇ ಸಾಕಷ್ಟು ಏರಿಳಿಕೆಯಾಗುತ್ತಿರುವ ಹವಾಮಾನ. ಜೀವಿಗಳ ಮೂಲಭೂತ ಅಗತ್ಯಗಳು ಅಂದರೆ ನೀರು, ಗಾಳಿ, ಆಹಾರ, ಬೆಳಕು ಇವುಗಳ ಉಳಿವಿಗಾಗಿ ಹೆಣಗಾಡುತ್ತಿರುವ ಹಬ್ಬ ಎಂದರೆ ವಿಶ್ವ ಪರಿಸರ ದಿನಾಚರಣೆಯಾಗಿದೆ.
ಪ್ರಾರಂಭದಲ್ಲಿ ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ವಿಶ್ವ ಪರಿಸರ ದಿನಾಚರಣೆಯ ಮಹತ್ವ ಮತ್ತು ಆಚರಣೆಯ ವೈಶಿಷ್ಠತೆಯನ್ನು ನಾಡಿಗೇರ್ ಅವರು ತಿಳಿಸಿದರು. ಪ್ರಾರ್ಥನೆ ಮತ್ತು ಪರಿಸರ ಪ್ರತಿಜ್ಞೆ ತೆಗೆದುಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ನಿಮಿತ್ತ ನಡೆದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಉದ್ಯೋಗಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಮಿಕ ಸಂಘದ ಉಪಾಧ್ಯಕ್ಷ ರಾಮಪ್ಪ ಮಡ್ಡಿಯವರು ಸಹ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪರಿಸರ ವಿಭಾಗದ ಸಾಧನೆಯನ್ನು ಮತ್ತು ವರದಿಯನ್ನು ರವಿಕುಮಾರ್ ಅವರು ವಿವರಿಸಿದರು.
(ವರದಿ: ಮುರಳೀಧರ್ ನಾಡಿಗೇರ್)
Discussion about this post