ಬೆಳಕು ಅರಳುವುದೇ ಮೌನದಲ್ಲಿ, ಬೆಳಕು ನಿಶ್ಯಬ್ಧ, ಬೆಳಕು ಮಾತನಾಡುವುದಿಲ್ಲ ತಾನು ಮೌನವಾಗಿದ್ದುಕೊಂಡೇ ತನ್ನ ವ್ಯಾಪ್ತಿಯೊಳಗೆ ಬರುವ ಎಲ್ಲರನ್ನೂ ಮಾತಾಡುವಂತೆ ಪ್ರೇರೆಪಿಸುವುದೇ ಬೆಳಕಿನ ಆದಿಶಕ್ತಿ!
ಅದಕ್ಕೆ ಅಲ್ಲವೆ ಅಬ್ಬರದಲ್ಲಿ ಗೌಜಿನಲ್ಲಿ ಸದ್ದಿನಲ್ಲಿ, ಗರ್ಜನೆಯಲ್ಲಿ ಬೆಳಕು ಮಿಂಚಿ ಮಾಯವಾಗುತ್ತದೆ. ಅತಿಯೆನ್ನುವ ಸದ್ದುಗದ್ದಲದಲ್ಲಿ ಬೆಳಕು ಹೆಚ್ಚು ಹೊತ್ತು ನಿಲ್ಲುವುದಿಲ್ಲ.
ಇನ್ನೊಂದು ಹಣತೆಗೆ ಬೆಳಕು ನೀಡುವ ಹಣತೆ ಎನ್ನನ್ನು ಕಳೆದುಕೊಳ್ಳುವುದಿಲ್ಲ ತನ್ನ ಬೆಳಕನ್ನು ಕೂಡಾ! ಅದು ಏನಿದ್ದರೂ ಪಡೆಯುತ್ತದೆಯೇ ಹೊರತು ಇನ್ನೇನೂ ಅಲ್ಲ! ಬೆಳಕಿನ ಹಸ್ತಾಂತರದಲ್ಲಿ ಪಡೆಯುವ, ಸಮೃದ್ಧಿಯಾಗುವ ಸಂವೇದನೆಯಿದೆ. ನಾವೂ ಹೀಗೆಯೇ ಅಲ್ಲವೆ! ಬೆಳಕು ಕೊಟ್ಟವ ಬಡವನಾಗುವುದಿಲ್ಲ. ಬಡವನೆಂದುಕೊಂಡರೂ ಬೆಳಕು ಕೊಟ್ಟವ ಶ್ರೀಮಂತನಾಗುತ್ತಾನೆ.
ಓ ಬೆಳಕೇ, ನೀನೊಂದು ಮೋಡಿ, ಸೊಗಸುಗಾರ. ಸದಾ ಮಿನುಗುವ ಸುಂದರಾಂಗ ಚಲನಶೀಲತೆಯೇ ಜೀವಾಳ. ಆಂತರ್ಯದ ಸಂಪತ್ತನ್ನು ಹಂಚುತ್ತ ಸಂಭ್ರಮಿಸುವ ಲಕಲಕನೆ ಹೊಳೆಯುವ ನಿಸ್ವಾರ್ಥಯಾನೀ, ನಿನ್ನಂದಕ್ಕೆ ನೀ ಉಂಟು ಮಾಡುವ ಸಂಭ್ರಮಕ್ಕೆ ನಿನ್ನ ಸೆಳೆತಕ್ಕೆ ನೀನೇ ಸಾಟಿ. ಹಬ್ಬದ ನಿಮಿತ್ತ ಮತ್ತೊಮ್ಮೆ ಎಲ್ಲ ಪೊರೆಗಳನ್ನು ಕಳಚಿ ಬರುತ್ತಿರುವ ನಿನಗೆ ಸ್ವಾಗತ.
ಬೆಳಕೆ ನೀ ಎಲ್ಲೋ ಅಲ್ಲೋ ಇಲ್ಲೋ ಮಾತ್ರ ಅಲ್ಲ ಎಲ್ಲಡೆ ವ್ಯಾಪಿಸಿದ್ದು ಬೆಳಕೆ ಜೀವನ ಅದುವೇ ಸತ್ಯದರ್ಶನ ಇದರಿಂದಲೇ ಮೌಲ್ಯಗಳ ಸಾಕ್ಷಾತ್ಕಾರ ಬೆಳಕಿಗೆ ಗಡಿ-ಸೀಮೆಗಳಲ್ಲಿ. ಬೇಧ-ಭಾವಗಳಿಲ್ಲ ಬೆಳಕನ್ನೋದು ಯಾವುದೋ ಭೌತಿಕ ಸಾಧನವಲ್ಲ ಅಥವಾ ತೀರಾ ಎಟುಕುಲಾರದ ಅಭೌತಿಕ ಸಂಗತಿಯೂ ಅಲ್ಲ. ಅದು ನಮ್ಮ ಆತ್ಮ ಸಂಗಾತಿ. ಜೀವದ ಗೆಳೆಯ. ಬದುಕಿಗೆ ಪಥದರ್ಶಕ. ನಮ್ಮದೆ ಒಳಗಣ್ಣು ಇದು ಬೆಳಕು ನಮ್ಮನ್ನು ಬೆಳಗದೇ ನಾವು ಬಾಳಲುಂಟೆ?
ಮಗುವಿನ ಮುಗ್ಧತೆಯಲ್ಲಿ, ತಾಯಿಯ ಮಮತೆಯಲ್ಲಿ, ತಂದೆಯ ಅಕ್ಕರೆಯಲ್ಲಿ ಅಣ್ಣನ ಪೋಷಣೆಯಲ್ಲಿ, ಗೆಳೆಯನ ಕಾಳಜಿಯಲ್ಲಿ, ನಲ್ಲ-ನಲ್ಲೆಯರ ಸಂಭಾಷಣೆಯಲ್ಲಿ ಗುರು-ಶಿಷ್ಯರ ಸಂವಾದದಲ್ಲಿ… ಹೀಗೆ ಎಲ್ಲಲ್ಲೂ, ದೃಷ್ಠಿ ಹಾಯಿಸಿದತ್ತಲೂ ಬೆಳಕಿನ ಸಾಕ್ಷಾತ್ಕಾರವೇ ಗೋಚರಿಸುತ್ತದೆ. ಅದರ ದೇದೀಪ್ಯಮಾನ ಪ್ರಕಾಶ ಹಿತ ನೀಡುತ್ತದೆ ಬೆಳಕಿನ ಹಬ್ಬವನ್ನು ನಮ್ಮ ಪೂರ್ವಜರು ಸುಖಸುಮ್ಮನೆ ಆರಂಭಿಸಿದ್ದೇನಲ್ಲ ಬೆಳಕು ನಮ್ಮನ್ನು ಬೆಳಗುತ್ತಾ, ಜೀವನದ ಪ್ರತಿ ಕ್ಷಣವನ್ನು ಉತ್ಸವವನ್ನಾಗಿಸುತ್ತದೆ. ಆಶಾವಾದ ಎಂಬ ಬೃಹತ್ ಎನರ್ಜಿಯನ್ನು ಸದಾ ಕಾಪಾಡುತ್ತದೆ ಇಷ್ಟೆಲ್ಲ ಉಪಕಾರ ಮಾಡುವ ಬೆಳಕಿಗೆ ಒಂದು ಸಣ್ಣ ಕೃತಜ್ಞತೆಯನ್ನು ಸಲ್ಲಿಸದಿದ್ದರೆ ಹೇಗೆ? ಹೀಗೆ ಬೆಳಕಿಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ನಮ್ಮ ಆಶಾವಾದವನ್ನು ಇನ್ನಷ್ಟು ಗಟ್ಟಿಗೊಳಿಸದಿದ್ದರೆ ಹೇಗೆ?
ಇದಕ್ಕಾಗಿಯೇ ಉಪಕಾರ ಸ್ಮರಣೆಯ ದ್ಯೋತಕ ದೀಪಾವಳಿ. ಈ ಪರ್ವ ನೀಡುವ ಸಂದೇಶವೂ ಅಷ್ಟೇ ಸುಸ್ಪಷ್ಟ. ರಾಮ ರಾವಣನ ವಧೆ ಮಾಡಿ ತಾಯ್ನಾಡಿಗೆ ಮರಳಿದ್ದು, ನರಕಾಸುರನ ವಧೆಯಾಗಿದ್ದು, ತನ್ಮೂಲಕ ಶಿಷ್ಟತನ ಗೆಲವು ಸಾಧಿಸಿದ್ದು ಈ ಬೆಳಕಿನ ಪರ್ವದಂದೇ. ಎಲ್ಲರ ಕರೆಗೆ ಓ ಎನ್ನಲು ದೇವರಿಗೆ ಕಷ್ಟ. ಹಾಗಾಗಿ ಆತ ಬೆಳಕನ್ನು ಸೃಷ್ಟಿಸಿದ್ದಾನೆ. ಬೆಳಕಲ್ಲೇ ದೇವರಿದ್ದಾನೆ.
ಯಾವುದೇ ಆರಂಭಕ್ಕೆ ಬೆಳಕೊಂಡು ಶುಭ ಮುನ್ನುಡಿ. ನಾವು ಬೆಳಕನ್ನು ನೇರವಾಗಿ ನೋಡಲಾರೆವು. ಆದರೆ ಬೆಳಕಿನಿಂದ ಎಲ್ಲಾ ವಸ್ತುಗಳನ್ನು ನೋಡಬಲ್ಲೆವು. ಸೂರ್ಯನ ಉಜ್ವಲ ಬೆಳಕು, ಚಂದ್ರನ ತಂಪು ಬೆಳಕು. ಮಿಂಚಿನ ಝಳಕಿನ ಬೆಳಕು, ತಾರೆಗಳ ಮಿಣುಕು ಬೆಳಕು ಹಣತೆಯ ಮಿಣಿ ಮಿಣಿ ಬೆಳಕು ಹೀಗೆ ಬೆಳಕಿನ ರೂಪ ನೂರು ತರಹ.
ಮುಂಬಡ್ತಿ ತಾನು ಕರಗುತ್ತ ಇತರರಿಗೆ ಬೆಳಕು ನೀಡುತ್ತದೆ. ತನ್ನ ಬುಡ ಕತ್ತಲಿನಿಂದ ಕವಿದಿದ್ದರೂ ದೀಪ ಇತರರಿಗೆ ಬೆಳಕು ನೀಡುತ್ತದೆ ಇದು ತ್ಯಾಗದ ಸಂಕೇತ. ದೀಪವನ್ನು ಎಲ್ಲೇ ಇಡಿ, ಅದರ ಜ್ವಾಲೆ ಮೇಲ್ಮುಖವಾಗಿರುತ್ತದೆ. ಅದು ಅಭಿವೃದ್ಧಿಯ ಸಂಕೇತ. ಬೆಳಕಿಗೆ ಸ್ವಾರ್ಥವಿಲ್ಲ. ಒಂದು ದೀಪದಿಂದ ಸಾವಿರ ದೀಪ ಬೆಳಗಬಹುದು. ಅದು ಜ್ಞಾನವನ್ನು ಹರಡುವ ಪ್ರತೀಕ.
ಜಗತ್ತಿನಲ್ಲಿ ಮಾನವ ಕುಲ ಇರುವಷ್ಟು ದಿನ ದೀಪ ಬೆಳಗುತ್ತಲೆ ಇರುತ್ತದೆ. ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು.
Discussion about this post