ಉಡುಪಿ: ನನಗೆ ಮಗಳಿರುವುದು ಸಾಬೀತು ಮಾಡಿದರೆ ನಾನು ಮರುಕ್ಷಣವೇ ಪೀಠತ್ಯಾಗ ಮಾಡುತ್ತೇನೆ: ಹೀಗೆಂದು ಬಹಿರಂಗವಾಗಿ ಸವಾಲು ಹಾಕಿರುವುದು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರು.
ಹೌದು… ಶೀರೂರು ಶ್ರೀ ಅನುಮಾನಾಸ್ಪದ ಸಾವಿನ ಹಿಂದೆ ಉಡುಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳು ಸಾವಿಗೂ ಕೆಲವು ದಿನಗಳ ಮುನ್ನ ಆಡಿದ್ದ ಮಾತುಗಳ ಆಡಿಯೋ ಇತ್ತೀಚೆಗೆ ಮಾದ್ಯಮಗಳಿಗೆ ಬಿಡುಗಡೆಯಾಗಿತ್ತು. ಆ ಆಡಿಯೋದಲ್ಲಿ ಶಿರೂರು ಶ್ರೀಗಳು ಪೇಜಾವರ ಸ್ವಾಮಿಜಿಗಳ ಬಗ್ಗೆಯೂ ಮಾತನಾಡಿದ್ದರು.
ಅದರಲ್ಲಿ ಪೇಜಾವರ ಶ್ರೀಗಳಿಗೆ ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ಡಾ. ಉಷಾ ಅಂತ. ಅವರು ಚೆನ್ನೈನಲ್ಲಿ ವೈದ್ಯರಾಗಿದ್ದು, ಶ್ರೀಗಳು ತಮಿಳುನಾಡಿನಲ್ಲಿ ಮಹಿಳೆಯೊಬ್ಬರ ಜತೆ ಸಂಬಂಧ ಹೊಂದಿದ್ದು ಅವರ ಇತ್ತೀಚೆಗಷ್ಟೇ ತೀರಿಕೊಂಡಿದ್ದರು ಎಂದಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಇಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಚೆನೈನಿಂದ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ತಾರುಣ್ಯದಲ್ಲಿ ಮಹಿಳೆಯರ ಜತೆ ನನಗೆ ಸಹವಾಸವಿತ್ತು ಎನ್ನುವುದು ಶುದ್ಧ ಸುಳ್ಳು. ತಮಿಳುನಾಡಿನಲ್ಲಿ ನನಗೆ ಮಗಳಿದ್ದಾಳೆ ಅನ್ನೋದು ಕಟ್ಟುಕಥೆ. ಇದೇ ಅಭಿಪ್ರಾಯ ಹೇಳಿ ಕೆಲವರು ನನಗೆ ಪತ್ರ ಬರೆದಿದ್ದರು. ಪತ್ರದಲ್ಲಿ ನನಗೆ ಗಂಡು ಮಗು ಇದೆ ಎಂದು ಬರೆಯಲಾಗಿತ್ತು. ಇದೆಲ್ಲವೂ ಕೇವಲ ಕಲ್ಪನೆ, ಯಾರೊಬ್ಬರೂ ನಂಬುವುದಿಲ್ಲ. ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪರೀಕ್ಷೆ, ವಿಚಾರಣೆ ಎದುರಿಸಲು ನಾನು ಸಿದ್ಧ. ನನ್ನ ಮೇಲಿನ ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವೇ ಇಲ್ಲ. ಒಂದು ವೇಳೆ ಸಾಬೀತಾದರೆ ಪೀಠ ತ್ಯಾಗ ಮಾಡುವೆ ಎಂದು ಪೇಜಾವರ ಶ್ರೀಗಳು ಹೇಳಿಕೆಯಲ್ಲಿ ಸವಾಲು ಹಾಕಿದ್ದಾರೆ.
Discussion about this post