ನಾವು ಕನ್ನಡಿಗರು ಒಂದಾಗಿ ನಿಂತು ಈ ರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ಅಸ್ತಿತ್ವ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ರಕ್ಷಣೆಗೆ ಎದ್ದು ನಿಲ್ಲಲೇಬೇಕಾಗಿದೆ. ರಾಜ್ಯೋತ್ಸವವೆಂದರೆ ನಮಗೆ ಸಂಭ್ರಮ ಮಾತ್ರವಲ್ಲ, ನಮ್ಮನ್ನು ನಾವು ಹುಡುಕಿಕೊಳ್ಳುವ, ನಮ್ಮನ್ನು ನಾವು ಮುನ್ನಡೆಸಿಕೊಳ್ಳುವ ಸಂಕಲ್ಪದ ದಿನ. ಕನ್ನಡ ನಾಡು ಎದುರಿಸುತತಿರುವ ಎಲ್ಲ ಸಮಸ್ಸಯೆಗಳಿಗೂ ನಾವೀಗ ಮುಖಾಮುಖಿಯಾಗಿ ಹೋರಾಡಬೇಕಿದೆ. ಏಕೀಕರಣದ ಹೋರಾಟವನ್ನು ಕಟ್ಟಿ ಈ ನಾಡನ್ನು ಒಂದು ಮಾಡಿದ ಎಲ್ಲ ಹಿರಿಯರ ನಿರೀಕ್ಷೆಗಳಿಗೆ ತಕ್ಕಂತೆ ನಾವು ಹೊಸನಾಡನ್ನು ಕಟ್ಟಬೇಕಿದೆ.
ಕರ್ನಾಟಕದಲ್ಲಿ ಕನ್ನಡವೆಂದರೆ ಅಭಿಮಾನಿಸುವವರಿಗೆ ನಿತ್ಯವೂ ಹಬ್ಬವೆ!
ನವೆಂಬರ್ ತಿಂಗಳಲ್ಲಿ ಆಚರಿಸಲ್ಪಡುವ ‘‘ಕನ್ನಡ ರಾಜ್ಯೋತ್ಸವ’’ ಎಂದರೆ ಕನ್ನಡಿಗರ ಹರ್ಷಕ್ಕೆ ಪಾರವೇ ಇಲ್ಲ. ‘‘ಕನ್ನಡದ ರವಿ ಮೂಡಿ ಬಂದ ಮುನ್ನಡೆವ ಬೆಳಕನ್ನು ತಂದ ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ…’’ ಎಂಬ ಕವಿ ವಾಣಿಗೆ ಹೆಜ್ಜೆ ಹಾಕುತ್ತಾ, ‘‘ಅಂದವೋ ಅಂದವು ಕನ್ನಡ ನಾಡು ಚೆಂದವೋ ಚೆಂದವು ನಮ್ಮಯ ಬೀಡು’’ ಎಂಬ ಕವಿನುಡಿಯನ್ನು ಗುನುಗುತ್ತಾ, ‘‘ಜೇನಿನ ಹೊಳೆಯೊ ಹಾಲಿನ ಮಳೆಯೊ ಸುಧೆಯೋ ಕನ್ನಡ ಸವಿನುಡಿಯೋ’’ ಎಂಬ ಕವಿ ಸಾಲನ್ನು ಸವಿಯುತ್ತಾ, ‘‘ಅಪಾರ ಕೀರ್ತಿಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟಕವಿದು ನೃತ್ಯ ಶಿಲ್ಪ ಕಲೆಯನ ಬೀಡಿದು’’ ಎಂಬ ಕವಿಪದವನ್ನು ಆಸ್ವಾದಿಸುತ್ತಾ, ‘‘ಹಾಡು ಬಾ ಕೋಗಿಲೆ ನಲಿದಾಡು ಬಾರೆ ನವಿಲೆ ಸಿರಿಗನ್ನಡಾಂಬೆಯ ಜಯಧ್ವನಿ ಮೊಳಗಲಿ’’ ಎಂಬ ಕವಿನುಡಿಯ ಮಾಧುರ್ಯದಲಿ ಮೈಮರೆತು ಕನ್ನಡದ ಮಕ್ಕಳೆಲ್ಲ ಒಂದಾಗಿ ಹಿಗ್ಗಿನಿಂದ ಆಚರಿಸುವ ಕನ್ನಡ ಹಬ್ಬದ ಮಹಾ ಉತ್ಸವವಿದು.
ಏಕೀಕೃತ ಕನ್ನಡ ನಾಡು ಉದಯವಾದದ್ದು 1956ರ ನವೆಂಬರ್ ಒಂದರಂದು. ಕರ್ನಾಟಕ ಎಂದು ನಾಮಕರಣವಾದದ್ದು 1972ರ ನವೆಂಬರ್ ಒಂದರಂದೇ. ಇದರ ಸವಿನೆನಪಿಗೆ ಪ್ರತಿ ವರ್ಷ ನವೆಂಬರ್ ಒಂದರಿಂದ ಇಡೀ ತಿಂಗಳು ಪೂರ್ತಿ ಕನ್ನಡಿಗರು ಅಭಿಮಾನದಿಂದ ಆಚರಿಸಲ್ಪಡುವ ನಾಡಹಬ್ಬವೇ ಕನ್ನಡ ರಾಜ್ಯೋತ್ಸವ.
ಕರ್ನಾಟಕ ಭೂ ಪ್ರದೇಶಕ್ಕೆ ಅದರದೇ ಆದ ಸಹಸ್ರಾರು ವರ್ಷಗಳ ಇತಿಹಾಸವಿದೆ. ಕರ್ನಾಟಕದ ಸಾರ್ವಭೌಮ ಭಾಷೆಯಾದ ಕನ್ನಡಕ್ಕೂ ಅಷ್ಟೇ. ಕರ್ನಾಟಕ ಭೂ ಪ್ರದೇಶದಲ್ಲಿ ಹಳೆಯ ಶಿಲಾಯುಗದ ಕಾಲದಿಂದಲೂ ಜನಜೀವನ ಇದ್ದು, 3000 ವರ್ಷಗಳ ಹಿಂದಿನ ಹರಪ್ಪಾ ನಾಗರಿಕತೆಯ ಜನರೊಡನೆಯೂ ಕರ್ನಾಟಕ ವಾಸಿಗಳಿಗೆ ಸಂಪರ್ಕವಿತ್ತು. ಕರ್ನಾಟಕದ ಹೆಸರು ವ್ಯಾಸ ಮಹಾಭಾರತದಲ್ಲೇ ಉಲ್ಲೇಖವಾಗಿದೆ, ಮೌರ್ಯರ ಕಾಲದಲ್ಲಿ ಕರ್ನಾಟಕವು ರಾಜಾಡಳಿತಕ್ಕೆ ಒಳಗಾಗಿತ್ತು. ಕ್ರಿ.ಪೂ.240 ರಲ್ಲಿ ಶಾತವಾಹನರ ಕಾಲದಲ್ಲಿ ಇಲ್ಲಿನ ಬುಡಕಟ್ಟು, ಜಾತಿ ವ್ಯವಸ್ಥೆಯು ವರ್ಣಾಶ್ರಮದ ಚೌಕಟ್ಟಿನೊಳಗೆ ಸೇರಿಕೊಂಡಿತ್ತು. ಗಂಗರು, ಕದಂಬರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಕಳಚೂರಿಗಳು, ಹೊಯ್ಸಳರು, ಕಂಚಿಯ ಪಲ್ಲವರು, ವಿಜಯನಗರ, ಬಹಮನಿ, ಮೈಸೂರು ಒಡೆಯರ್ ಮತ್ತು ಹೈದರ್-ಟಿಪ್ಪು ಸುಲ್ತಾನ್‌ರ ಆಳ್ವಿಕೆಗಳನ್ನು ಕರ್ನಾಟಕ ಕಂಡಿದೆ. 1799ರಲ್ಲಿ ಟಿಪ್ಪುಸುಲ್ತಾನನ ಮರಣಾನಂತರ ಕರ್ನಾಟಕವು ಸಂಪೂರ್ಣವಾಗಿ ಆಂಗ್ಲರ ಅಧಿಪತ್ಯಕ್ಕೆ ಒಳಗಾಯಿತು. ಆ ನಂತರದ ದಿನಗಳಲ್ಲಿ 1800ರಿಂದ 1857ರ ತನಕ ಕರ್ನಾಟಕದಲ್ಲಿ ಹಲಗಲಿ ಬೇಡರ ದಂಗೆಗಳು ಸೇರಿದಂತೆ ಹಲವಾರು ವಸಾಹತುಶಾಹಿ ವಿರೋಧಿ ದಂಗೆಗಳು ನಡೆದಿವೆ. ಈ ವಿರೋಚಿತ ದಂಗೆಗಳಿಗೆ ದೊಂಡಿಯವಾಘ, ಸಂಗೊಳ್ಳಿ ರಾಯಣ್ಣ, ನರಗುಂದದ ಭಾಸ್ಕರಭಾವೆ, ಸುರಪುರದ ವೆಂಕಟಪ್ಪನಾಯಕ, ಮುಂಡರಗಿ ಭೀಮರಾಯ, ಮೈಲಾರ ಮಾದೇವ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದವರು ಮುಂಚೂಣಿ ನಾಯಕರಾಗಿದ್ದು, ಆಂಗ್ಲರನ್ನು ನಡುಗಿಸಿದ್ದಾರೆ.
ಕರ್ನಾಟಕದ ಇತಿಹಾಸದೊಳಗೆ ಇಣುಕಿದರೆ ಇದರ ಚರಿತ್ರೆಯೇ ಒಂದು ರಸ ರೋಮಾಂಚನವೆನಿಸುತ್ತದೆ. ಕರ್ನಾಟಕವೆಂದರೆ ಕಪ್ಪು ಮಣ್ಣಿನ ನಾಡು, ಕಮ್ಮಿತ್ತು ನಾಡು, ಎಂದರೆ ಕಂಪನ್ನುಳ್ಳ (ಶ್ರೀಗಂಧದ) ನಾಡು ಎಂಬುದೇ ಕರ್ನಾಟಕ. ‘‘ಕರುನಾಡು’’ ಅಥವಾ ಎತ್ತರದ ಭೂಮಿ ಇರುವ ನಾಡು ‘‘ಕರ್ನಾಟಕ’’ ಆಗಿದೆ ಎನ್ನುವವರೂ ಉಂಟು.
ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಈ ನಾಡು, ನುಡಿ, ಕನ್ನಡದ ಸ್ಥಿತಿಗತಿ ವಿಷಯ ಚರ್ಚೆಗೆ ಬಂದಾಗ ಹಲವರು ಈ ನಾಡಿನ ಏಕೀಕರಣದಿಂದಲೇ ಮಾತನ್ನು ಆರಂಭಿಸುತ್ತಾರೆ. ಈ ನಾಡಿನ ಕನ್ನಡಿಗರಲ್ಲಿ ಮಾತಿಗೇನೂ ಕೊರತೆ ಇಲ್ಲ. ಕನ್ನಡ ನಾಡನ್ನು, ಭಾಷೆಯನ್ನು ಕಟ್ಟಿ ಬೆಳೆಸುವಲ್ಲಿ ನುಡಿಗಿಂತ ನಡೆ ಇಂದು ಬಹಳ ಅವಶ್ಯಕವಿದೆ. ಇಲ್ಲಿ ಕೇವಲ ಕನ್ನಡ ನಾಡಿನ ಭೂಪ್ರದೇಶವನ್ನು ಕನ್ನಡ ಭಾಷೆಯ ಆಧಾರದ ಮೇಲೆ ಒಗ್ಗೂಡಿಸುವುದಲ್ಲ. ಒಂದು ನಾಡೆಂದರೆ ಅದು ಕೇವಲ ಭೌತಿಕ ಭೂಪ್ರದೇಶವಲ್ಲ. ಅಲ್ಲಿ ಒಂದಿಷ್ಟು ಮನಸ್ಸುಗಳಿವೆ, ಒಂದಿಷ್ಟು ಬದುಕುಗಳಿವೆ. ಇವುಗಳಿಂದೊಡಗೂಡಿದ ಒಂದು ಪರಂಪರೆಯೇ ಇದೆ. ಅದು ಭಾಷೆಯಿಂದ, ಭಾವ್ಯಕ್ಯತೆಯಿಂದ, ಸಂಸ್ಕೃತಿಯಿಂದ, ಪರಂಪರೆಯಿಂದ ಎಲ್ಲಾ ಕನ್ನಡದ ಮನಸ್ಸುಗಳನ್ನು ಸಮಗ್ರವಾಗಿ ಒಗ್ಗೂಡಿಸುವಿಕೆಯಾಗಿದೆ. ಗಟ್ಟಿಯಾಗಿಡಿದುಟ್ಟುಕೊಂಡಿದೆ. ಇಂತಹ ಒಂದು ಒಗ್ಗೂಡುವಿಕೆಗೆ ಏಕೀಕರಣದ ರೂವಾರಿಗಳು ಅವಿರತ ಪ್ರಯತ್ನಪಟ್ಟು ಈ ನಾಡನ್ನು ಸುಂದರವಾಗಿ ರೂಪಿಸಿದ್ದಾರೆ. ಅವರೆಲ್ಲರ ಒಟ್ಟು ಪರಿಶ್ರಮ ಫಲವೆಲ್ಲವೂ ಸತ್ಪಾತ್ರಕ್ಕೆ ಸಲ್ಲಬೇಕಲ್ಲವೇ? ಆದರೆ ಇಂದು ಆಂಗ್ಲ ಭಾಷೆಯ ಪ್ರಭಾವ ಮತ್ತು ಆರ್ಭಟಗಳ ಮಧ್ಯೆ ಕನ್ನಡ ನಲುಗುತ್ತಲಿದೆ. ಕನ್ನಡಮ್ಮ ಚಿಂತಿತಳಾಗಿದ್ದಾಳೆ, ಗದ್ಗದಿತಳಾಗಿದ್ದಾಳೆ. ತನ್ನ ಮತ್ತು ತನ್ನ ಮಕ್ಕಳ ಈ ಬಗೆಯ ಶೋಚನೀಯತೆಗೆ ಅಕ್ಷರಶಃ ಕಣ್ಣೀರಾಗಿದ್ದಾಳೆ.
ನಾಡು ನುಡಿ ಉಳಿಸಿಕೊಳ್ಳೋಣ
ಕನ್ನಡ ನಾಡು ಉದಯಿಸಿದಾಗಲೇ ಕಾವ್ಯಾನಂದರು ‘‘ಹೊತ್ತಿತೋ ಹೊತ್ತಿತೋ ಕನ್ನಡ ದೀಪ, ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ’’ ಎಂದು ಕನ್ನಡದ ದೀಪವನ್ನು ಹೊತ್ತಿಸುವ ಮೂಲಕ ಶತಶತಮಾನಗಳ ಶಾಪವಳಿಯಿತೆಂದು ಮನದುಂಬಿ, ಭಾವದುಂಬಿ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಗೇ ಪ್ರಜ್ವಲಿಸುತ್ತಿರುವ ಕನ್ನಡದ ದೀಪವನ್ನು ಆರದಂತೆ ನೋಡಿಕೊಳ್ಳುವ ಜಾಗೃತತನವನ್ನು ಉಳಿಸಿಕೊಳ್ಳುವುದು ನಮ್ಮ ಇಂದಿನ ಸವಾಲು. ಒಂದರ್ಥದಲ್ಲಿ ಕನ್ನಡವನ್ನು ಆಂಗ್ಲ ಭಾಷೆ ಆಪೋಷನ ತೆಗೆದುಕೊಂಡುಬಿಟ್ಟಿದೆ. ಒಂದೊಮ್ಮೆ ನನಗನಿಸುತ್ತದೆ ಶಿಶುನಾಳ ಷರೀಪರು ‘‘ಕೋಡಗನ ಕೋಳಿ ನುಂಗಿತ್ತ’’ ಎಂದಂತೆ ಒಂದು ಕೋಳಿ ತನಗಿಂತ ದೊಡ್ಡದಾದ ಕೋಡಗನನ್ನೇ ನುಂಗಿಬಿಡುವಂಥ ಸ್ಥಿತಿ, ವಾಸ್ತವದಲ್ಲಿ ಇದು ಸಾಧ್ಯನಾ? ಎಂಬ ಬೆರಗು ನಮ್ಮನ್ನಾವರಿಸುತ್ತೆ. ಆ ಒಂದು ಬೆರಗಿನೊಂದಿಗೆ ಅವಲೋಕಿಸಿದಾಗ, ಈ ಉಪಮೆ ನಿಜವೆನಿಸುತ್ತದೆ. ಕೇವಲ ಐದು ನೂರು ವರ್ಷದ ಇತಿಹಾಸವಿರುವ ಆಂಗ್ಲ ಭಾಷೆಯು ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಭವ್ಯ ಪರಂಪರೆಯ ಕನ್ನಡ ಭಾಷೆಯನ್ನು ನುಂಗಿ ತೇಗುತ್ತಿದೆಯೆಂದರೆ ಆಂಗ್ಲ ಭಾಷೆಯೆಂಬ ಶರೀಪರ ಕೋಳಿಯು ಕನ್ನಡ ಭಾಷೆಯೆಂಬ ದೊಡ್ಡ ಕೋಡಗನನ್ನೇ ನುಂಗಿಬಿಟ್ಟಿರುವಂತೆ ತೋರುವುದಿಲ್ಲವೇ? ನೋಡಿ, ಆಂಗ್ಲ ಭಾಷೆಯ ಪ್ರಭಾವ ಹೇಗಿದೆ! ನಿಜಕ್ಕೂ ದಿಗ್ಭ್‌್ರಮೆಯಾಗುತ್ತದೆ. ಇದಕ್ಕೆಲ್ಲಾ ಕಾರಣ, ಈ ನಾಡ ನೇತಾರರ ಮತ್ತು ಕನ್ನಡಿಗರ ಇಚ್ಛಾಶಕ್ತಿಯ ಕೊರತೆಯೊಂದಿಗೆ ಕನ್ನಡಿಗರ ಸಹನೆಯೆಂಬ ಉದಾರತೆ ಆಗಿರಬಹುದು. ಈ ಉದಾರತೆಯೇ ಆಂಗ್ಲ ಮತ್ತು ಇತರ ಭಾಷೆಗಳಿಗೆ ಆಹಾರವಾಗಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ಸಹನೆ ನಮ್ಮ ದೌರ್ಭಲ್ಯವಲ್ಲವೆಂದು ತೋರಿಸಬೇಕಾದ ಅನಿವಾರ್ಯತೆಯಿದೆ. ಏಕೆಂದರೆ ಇಂಥ ಸಹನೆಯಿಂದ ನುಡಿಯಾಧಾರಿತ ನಾಡು ಕಟ್ಟುವ ಕನ್ನಡಿಗರ ಪ್ರಯತ್ನವೆಲ್ಲವೂ ನಿಶ್ಪಲವಾಗಬಾರದಲ್ಲವೇ?
ನಿಜಾಮರ ಕಾಲದ ಹೈದ್ರಾಬಾದ್ ಕರ್ನಾಟಕ ಭಾಗದ ಭಾಲ್ಕಿ ಮುಂತಾದ ಸ್ಥಳಗಳಲ್ಲಿ ಕೆಲವು ಮಠ, ಶಿಕ್ಷಣ ಸಂಸ್ಥೆಗಳವರು ನಡೆಸುತ್ತಿದ್ದ ಶಾಲೆಗಳ ಮುಂದೆ ಉರ್ದು ಮಾಧ್ಯಮದಲ್ಲಿ ಶಿಕ್ಷಣವೆಂದು ಫಲಕಗಳನ್ನು ಹಾಕಿ, ಒಳಗಡೆ ಕನ್ನಡ ಮಾಧ್ಯಮದಲ್ಲಿ ಪಾಠ ಮಾಡಲಾಗುತ್ತಿದ್ದರಂತೆ. ಆದರೆ ಕನ್ನಡಿಗರ ಅಧಿಕೃತ ಕರ್ನಾಟಕ ರಾಜ್ಯದಲ್ಲಿಂದು ಹಲವು ಶಾಲೆಗಳ ಹೊರಗಡೆ ಕನ್ನಡ ಮಾಧ್ಯಮದ ಫಲಕಗಳನ್ನು ಹಾಕಿ ಒಳಗಡೆ ಆಂಗ್ಲ ಮಾಧ್ಯಮದಲ್ಲಿ ಪಾಠ ನಡೆಸುತ್ತಿದ್ದಾರೆ. ಪ್ರತಿಯೊಬ್ಬ ಕನ್ನಡಿಗ ಮತ್ತು ವ್ಯವಸ್ಥೆ ಇಂಥ ಅವ್ಯವಸ್ಥೆಗೆ ನಾಚಬೇಕು. ಇತ್ತೀಚಿಗೆ ಕರ್ನಾಟಕದಲ್ಲಿಯೇ ಕನ್ನಡ ಶಾಲೆಗಳನ್ನು ಮುಚ್ಚುವ ಸರ್ಕಾರದ ನೀತಿಯನ್ನು ಪತ್ರಿಕೆಗಳಲ್ಲಿ ಓದಿ ಖೇದವಾಯಿತು. ಹಿಂದೆ ನಮ್ಮ ಬಾಲ್ಯದ ದಿನಗಳಲ್ಲಿ ಸರ್ಕಾರಿ ಶಾಲೆಗಳು ಹೇಗಿದ್ದವು!? ಅಲ್ಲಿ ಕೇವಲ ಅಕಾಡೆಮಿಕ್ ಶಿಕ್ಷಣವಲ್ಲದೇ ಒಂದು ಬದುಕನ್ನು, ಸಂಸ್ಕತಿಯನ್ನು ರೂಪಿಸುವಂಥ ವ್ಯವಸ್ಥೆ ಇರುವ ವಿದ್ಯಾದೇವಾಲಯಗಳಾಗಿದ್ದವು. ಆದರಿಂದು ಏನಾಗಿವೆ?
‘‘ಕತ್ತಲೆಯನ್ನು ದೂಷಿಸುವ ಬದಲು ಒಂದು ಹಣತೆಯನ್ನು ಬೆಳಗಿಸು’’ ಎಂಬ ಮಾತೊಂದಿದೆ, ಅವ್ಯವಸ್ಥೆಯನ್ನು, ದುರವಸ್ಥೆಯನ್ನು ದೂಷಿಸುವ ನಾವು ಅದರ ಸರಿಪಡಿಸುವಿಕೆಯತ್ತ ಏಕೆ ಚಿಂತಿಸಬಾರದು? ಯಾರದೋ, ಯಾವುದೋ ಪ್ರಭಾವದಲ್ಲಿ ನಮ್ಮ ಭಾಷೆ ಮುಸುಕಾಗಿದ್ದರೆ, ಕತ್ತಲೆಯನ್ನು ಕಳೆಯಲು ಹಣತೆಯನ್ನು ಬೆಳಗಿಸುವ ಮಾದರಿಯಲ್ಲಿ ಮುಸುಕಿದ ಆ ಮುಸುಕಿನ ತೆರೆಯನ್ನು ಸರಿಸಲು ನಾವೇಕೆ ಪ್ರಯತ್ನಿಸಬಾರದು? ಏಕೆಂದರೆ ಕನ್ನಡ ಮಾತೃಭಾಷೆಯೆಂದ ಮೇಲೆ ಕನ್ನಡವನ್ನು ಪ್ರೀತಿಸಬೇಕಾಗಿದ್ದು, ಮಮತೆ ತೋರಿಸಬೇಕಾಗಿದ್ದು ಅವಳ ಮಕ್ಕಳಾದ ನಮ್ಮೆಲ್ಲರ ಆದ್ಯ ಕರ್ತವ್ಯವಲ್ಲವೇ? ಕನ್ನಡದ ಅಮ್ಮ ನಮ್ಮ ಬಾಯಿಗಿಡುವ ತುತ್ತು ಬೇಕು, ಅವಳು ಕುಡಿಸುವ ನೀರು ಬೇಕು, ಹಾಯಾಗಿರಲು ಆ ಅಮ್ಮನ ಮಡಿಲು ಬೇಕು ಆದರೆ ಅಮ್ಮನನ್ನು ಗೌರವಿಸಲು ನಮಗೆ ಮನಸ್ಸಿಲ್ಲ. ಕನ್ನಡದ ಅಮ್ಮನನ್ನು ಪ್ರೀತಿಸಲು, ಗೌರವಿಸಲು ಒಪ್ಪಿಕೊಳ್ಳಲು ಸುತ್ತೋಲೆಗಳೇಕೆ ಬೇಕು? ಕನ್ನಡ ಕಾವಲು ಸಮಿತಿಯಾಗಲಿ, ರಕ್ಷಣಾ ವೇದಿಕೆಯಾಗಲಿ ಏಕೆ ಬೇಕು? ಕನ್ನಡವನ್ನು ಬಳಸುವುದು ಮತ್ತು ಬೆಳೆಸುವುದು ನಮ್ಮ ಇಚ್ಛಾಶಕ್ತಿಯನ್ನು ಅವಲಂಭಿಸಿದೆ. ಜೊತೆಗೆ ಆಂಗ್ಲ ಭಾಷೆಯನ್ನು ಒಬ್ಬ ಮಿತ್ರ, ಬಂಧುವಿನಂತೆ ಪರಿಗಣಿಸುವ ಸಹೃದಯತೆ ಸಹ ಇಂದೆಮಗೆ ಇರಬೇಕಾಗಿದೆ. ಆಗ ನಮ್ಮನ್ನು ಸಾಕಿ ಸಲುಹಿದ ಕನ್ನಡಮ್ಮನ ಶ್ರಮ ಸತ್ಪಾತ್ರಕ್ಕೆ ಸಲ್ಲಿದಂತಾಗುತ್ತದೆ.
ಆತ್ಮಾವಲೋಕನಕ್ಕೆ ಸೂಕ್ತ ಸಮಯ
ವಿಶೇಷವಾಗಿ ಗಡಿಭಾಗದ ನಮ್ಮ ಯುವಕರು ಆಂದ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಹುಡುಗಿಯರನ್ನು ಮದುವೆಯಾಗಿರುವ ಸಂದರ್ಭದಲ್ಲಿ ಆ ಯುವಕನ ಕೈಹಿಡಿದ ಆ ಹುಡುಗಿಯ ತಾಯಿ ಅಂದರೆ ತೆಲುಗಿನ, ಮರಾಠಿಯ ಅತ್ತೆಯೇ ಇಂದು ಇವರಿಗೆ ತಾಯಿಯಾಗಿಬಿಟ್ಟಿದ್ದಾಳೆ. ಕನ್ನಡದ ಹುಡುಗನ ನಿಜವಾದ ಅಮ್ಮ ‘‘ಕನ್ನಡದ ಅವ್ವ’’ ಇಂದು ಅನಾಥಾಲಯ ಸೇರಿದ್ದಾಳೆ. ಇದು ಒಂದು ಕೌಟುಂಬಿಕ ದೃಷ್ಟಿಯಿಂದ ಆಗಿರುವ ಪಲ್ಲಟ ಮಾತ್ರವಲ್ಲ ಭಾಷೆಯ ದೃಷ್ಟಿಯಿಂದಲೂ ಅವಲೋಕಿಸಿದರೆ ಇಂದು ನಮ್ಮ ಭಾಷೆಗೆ ಆಗಿರುವ ಅನಾಥ ಸ್ಥಿತಿಯನ್ನು ಈ ಕನ್ನಡದ ಅನಾಥ ಅಮ್ಮಂದಿರು ಪ್ರತಿನಿಧಿಸುತ್ತಾರೆ. ನಮ್ಮ ಕನ್ನಡದ ಅಮ್ಮ ಈ ನಾಡಿನಲ್ಲಿ ನಿತ್ಯ ಪೂಜೆಗೆ ಭಾಜನಳಾಗಬೇಕು, ನಿತ್ಯ ಉತ್ಸವ ಅವಳಿಗಿರಬೇಕು. ಅದಕ್ಕೆ ‘‘ನಿತ್ಯೋತ್ಸವ ನಿನಗೆ ನಿತ್ಯೋತ್ಸವ’’ ಎಂದು ನಿತ್ಯೋತ್ಸವದ ಕವಿ ನಿಸ್ಸಾರರು ಸಂಭ್ರಮಿಸಿದ್ದಾರೆ. ಈ ನಿತ್ಯೋತ್ಸವ ಕೇವಲ ಹಾಡಿನಲ್ಲಿಯೇ ಉಳಿಯದೇ ನಿತ್ಯದ ವಾಸ್ತವ ಉತ್ಸವವಾಗಬೇಕು.
ಕವಿ ಹುಯಿಲಗೋಳ್ ನಾರಾಯಣರು ‘‘ಉದಯವಾಗಲಿ ನಮ್ಮ ಚೆಲುವು ಕನ್ನಡ ನಾಡು’’ ಎಂದಿದ್ದಾರೆ, ಅವರು ‘‘ಉದಯವಾಯಿತು ನಮ್ಮ ಚೆಲವ ಕನ್ನಡ ನಾಡು’’ ಎನ್ನಲಿಲ್ಲ. ಏಕೆಂದರೆ ಈ ನಾಡು ಉದಯವಾಗುತ್ತಿರುವುದು ಮತ್ತು ಅಭಿವೃದ್ಧಿ ಹೊಂದುತ್ತಿರುವುದು ಒಂದು ನಿರಂತರ ಪ್ರಕ್ರಿಯೆಯಾದ ಕಾರಣ ಅವರು ಉದಯವಾಯಿತು ಎನ್ನದೇ ‘‘ಉದಯವಾಗಲಿ’’ ಎಂದಿರುತ್ತಾರೆ. ಕನ್ನಡ ನಾಡು ಪ್ರತಿನಿತ್ಯ ಬೆಳಗಬೇಕು. ಪ್ರಕಾಶಿಸಬೇಕು. ಆ ಮೂಲಕ ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಬೆಳೆಯಬೇಕು. ಇತರ ಭಾಷೆಗಳ ಕುರಿತು ನಮ್ಮ ಮೃದು ಧೋರಣೆಯನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳುವುದು ಕಂಡು ಬಂದರೆ ನಾವು ಪ್ರತಿಭಟಿಸೋಣ. ಏಕೆಂದರೆ ಮತ್ತೇ ಹೇಳುತ್ತೇನೆ ‘‘ಸಹನೆ ಕನ್ನಡಿಗರ ದೌರ್ಭಲ್ಯವಲ್ಲ’’. ಕನ್ನಡಿಗರೆಲ್ಲರ ಅಭಿಮಾನ, ಪರಿಶ್ರಮವೆಲ್ಲವೂ ನಾಡಿನ ಹಿತಕ್ಕಾಗಿ ಸತ್ಪ್ರಾತ್ರಕ್ಕಾಗಿಯೇ ಮೀಸಲಿರಬೇಕು.
ಕವಿರಾಜ ಮಾರ್ಗದ ಶ್ರೀ ವಿಜಯ ‘‘ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ಇತ್ತು’’ ಎನ್ನುತ್ತಾರೆ. ಆದರೆ ಇಂದೇನಾಗಿದೆ? ಕನ್ನಡಮ್ಮ ಹರಿದು ಹಂಚಿ ಹೋಗುತ್ತಿದ್ದಾಳೆ. ಹೀಗೆಯೇ ಮುಂದುವರೆದರೆ ಕನ್ನಡ ಭಾಷೆ ಮತ್ತು ಕನ್ನಡ ನಾಡು ಮುಂದಿನ ಪೀಳಿಗೆಯವರ ಕಾಲಕ್ಕೆ ಸಂಪೂರ್ಣ ಮರೆಯಾಗಿ ಹೋಗಿಬಿಡುತ್ತದೆ. ಇಂಥ ಬಿಕ್ಕಟ್ಟುಗಳ ಬಗ್ಗೆ ನಾವಿಂದು ಚಿಂತಿಸಬೇಕಾಗಿದೆ. ಯೋಜನೆಗಳನ್ನು ರೂಪಿಸಬೇಕಾಗಿದೆ. ಅತ್ಯಧಿಕ (ಎಂಟು) ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ನಮ್ಮ ಕನ್ನಡ ಭಾಷೆಯ ಭವ್ಯ ಪರಂಪರೆಯ ಕುರಿತು ನಮಗೆ ಹೆಮ್ಮೆ ಇರಬೇಕು. ಕನ್ನಡಕ್ಕಿರುವ ಬಿಕ್ಕಟ್ಟುಗಳ ಬಗ್ಗೆ ಚಿಂತಿಸಬೇಕು. ಕನ್ನಡಕ್ಕಿರುವ ಶಕ್ತಿಯ ಕುರಿತು ನಮಗೆ ಅರಿವೇ ಇಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಈ ದಿಶೆಯಲ್ಲಿ ನಮ್ಮ ಸಂಕುಚಿತತೆಯನ್ನು ಬದಿಗಿಟ್ಟು ಸಮಗ್ರವಾಗಿ ಎಲ್ಲಾ ಕನ್ನಡಿಗರು ಕನ್ನಡದ ತೇರನೆಳೆಯಲು ಕೈ ಜೋಡಿಸಬೇಕಾಗಿದೆ. ತೇರನೆಳೆಯುವಾಗ ಕೆಲವೇ ಕೈಗಳು ತಮ್ಮ ಶಕ್ತಿಯನ್ನು ವಿನಿಯೋಗಿಸುತ್ತವೆ. ಹಲವು ಕೈಗಳು ತೋರಿಕೆಯ ಕೈಗಳಾಗಿರುತ್ತವೆಯಾದರೂ ಈ ತೋರಿಕೆಯೂ ಸಹ ಕನ್ನಡಮ್ಮನ ಸಂಭ್ರಮಕ್ಕೆ ನೆರವಾಗುತ್ತದೆ. ಕನ್ನಡದ ತೇರಿನ ಸಾಗುವಿಕೆಗೆ ನಾವುಗಳೆಲ್ಲ ಕೈಯಾಗುವುದು ಮುಖ್ಯ.
ಬರಗಾಲದ ಒಂದು ದಿನ ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಮಗುವೊಂದು ‘‘ರೇನ್ ರೇನ್ ಗೋ ಅವೇ’’ ಎಂದು ಹೇಳುತ್ತಿದ್ದರೆ ಇಂಥಹ ಬರಗಾಲದಲ್ಲಿ ಮಳೆ ನೀ ಸುರಿಯಬೇಡ ಹೋಗು ಹೋಗು ಎಂದು ಹೇಳುವುದೇ? ಇದರಿಂದ ಎಂಥವರ ಮನಸ್ಸಿಗಾದರೂ ನೋವಾಗುತ್ತದೆ. ಆದರೆ ಅದೇ ಕನ್ನಡದ ಮಗು ಮಳೆ ಸುರಿಯುವಾಗ ಆನಂದವಾಗಿ ಮಳೆಯ ಹನಿಗಳ ಜೊತೆಗೆ ನರ್ತನ ಮಾಡುತ್ತಾ, ಆಟವಾಡುತ್ತಲೇ ‘‘ಹುಯ್ಯೋ ಹುಯ್ಯೋ ಮಳೆರಾಯ’’, ‘‘ಮಳೆ ಬಂತು ಮಳೆ ಕೊಡೆ ಹಿಡಿದು ನಡೆ’’ ಎನ್ನುತ್ತದೆಯಲ್ಲ ಇದು ಕನ್ನಡ ಭಾಷೆಯ ಶಕ್ತಿ. ಕನ್ನಡ ಮಗುವಿನ ಸಕಾರಾತ್ಮಕ, ಗುಣಾತ್ಮಕ ಚಿಂತನೆಯ ಕ್ರಮ.
ಹೀಗೆ ಯೋಚಿಸುತ್ತಿದ್ದರೆ ಥಟ್ಟನೇ ನೆನಪಿಗೆ ಬರೋದು ಕನ್ನಡ ಜನಪದದ ಕವಿಯೊಬ್ಬ ರಚಿಸಿರುವ ‘‘ಗೋವಿನ ಹಾಡು’’. ಇದು ಎಂಥ ಉದಾತ್ತತೆಯನ್ನು ಹೊಂದಿದೆ. ಸತ್ಯಕ್ಕೆ ಸಾವಿಲ್ಲ ಎಂಬುವದನ್ನು ಇದು ಬಿಂಬಿಸುತ್ತದೆ. ಬಹುಶಃ ಬೇರಾವ ಭಾಷೆಯಲ್ಲಿಯೂ ಇಂತಹ ಹಾಡು ರಚನೆಯಾಗಿಲ್ಲವೆಂದು ನಾನಂದುಕೊಂಡಿರುವೆ. ಹಾಗೆ ನಾವು ನಮ್ಮತನದೊಂದಿಗೆ ಇನ್ನೊಬ್ಬರ ಬದುಕಿನ ಬಗೆಗೂ ಚಿಂತಿಸೋಣ. ಇಂದು ಕನ್ನಡವನ್ನು ಕನ್ನಡಿಗರಿಂದಲೇ ಕಾಪಾಡಿಕೊಳ್ಳಬೇಕಾಗಿರುವುದರಿಂದ ನಾವು ಆಂಗ್ಲ ಮತ್ತಿತರ ಭಾಷೆ ಮತ್ತು ಭಾಷಿಕರ ಬಗ್ಗೆ ಜಾಗರೂಕರಾಗಿರಬೇಕಾಗಿದೆ.
ಜಿ.ಪಿ.ರಾಜರತ್ನಂರವರು ಹೇಳುವಂತೆ, ‘‘ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ ಬಾಯ್ ಒಲೆಸಾಕಿದ್ರೂನೆ, ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸ್ನ ನೀ ಕಾಣೆ’’ ಎಂತಹ ಆತಂಕಕಾರಿ ಸ್ಥಿತಿಯಲ್ಲಿಯೂ ನಮ್ಮ ಕನ್ನಡತನವನ್ನು ನಾವು ಬಿಡಬಾರದು. ಕುವೆಂಪು ಅವರಂತೂ ಕನ್ನಡದ ಜೊತೆ ಅವಿನಾಭಾವತೆಯನ್ನು ಕಾಣುತ್ತಾರೆ ‘‘ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು’’ ಕನ್ನಡದ ಕೆಲಸವೆಂದರೆ ಅದು ಕೆಲಸವೆಂದು ಭಾವಿಸದೇ ನಮ್ಮ ಸಂಭ್ರಮವೆಂದುಕೊಳ್ಳಬೇಕೆನ್ನುತ್ತಾರೆ. ಜೊತೆಗೆ ಕನ್ನಡ ಕನ್ನಡಿಗರಿಗಾಗಿ, ಕನ್ನಡಿಗ ಕನ್ನಡಕ್ಕಾಗಿ, ಕನ್ನಡ ಮತ್ತು ಕನ್ನಡಿಗರು ಕರ್ನಾಟಕಕ್ಕಾಗಿ ಸಂಪರ್ಕ ಸೇತುವೆಯಾಗಬೇಕು. ಆಗ ಮಾತ್ರ ಚಂಪಾರವರ ಕಳಕಳಿ ‘‘ಕನ್ನಡ ಕನ್ನಡ ಬನ್ನಿ ನನ್ನ ಸಂಗಡ’’ ಎಂಬಂತೆ ಕನ್ನಡಕ್ಕೆ ಕನ್ನಡ ನಾಡಿಗೆ ಯಾವುದೇ ಸಂದರ್ಭದಲ್ಲಿ ಸಂಕಟ, ಬಿಕ್ಕಟ್ಟು ಎದುರಾದಾಗ ನಾವೆಲ್ಲಾ ಒಂದಾಗಬಹುದು, ಒಬ್ಬರ ಸಂಗಡ ಒಬ್ಬರು ಕೈಜೋಡಿಸಬೇಕಾಗುತ್ತದೆ.
ಕೊನೆಯಲ್ಲಿ ಮತ್ತೇ ಮತ್ತೇ ನೆನಪಾಗುವ ಕೆಲ ಸಾಲುಗಳು, ಗೋಪಾಲಕೃಷ್ಣ ಅಡಿಗರ ‘‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’’ ಎಂಬಂತೆ, ಕನ್ನಡವು ಒಂದು ಭಾಷೆಯಾಗಿ ನಮಗೆ ಬದುಕನ್ನು ಕೊಟ್ಟಿದೆ ಆದರೆ ಬದುಕಿನ ಭಾಷೆಯನ್ನು ಬಿಟ್ಟು ನಾವು ಬೇರೆಡೆ ವಾಲಿರುವುದು, ವಾಲುತ್ತಿರುವುದು ಎಂತಹ ನಿಯತ್ತು? ಇದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ‘‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ, ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವವರನು ಕೂಡಿಸಿ ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರು ಸುರಿಸು, ಒಟ್ಟಿಗೆ ಬಾಳಲಿ ತೆರೆದಲೆ ಹರಸು’’ ಎಂದ ಕುವೆಂಪು ಆಶಯದಂತೆ ಕನ್ನಡಿಗರ ಜಾಗೃತ ಮನಸ್ಸ್ಸುಗಳನ್ನು ಒಗ್ಗೂಡಿಸಿ ಕನ್ನಡದ ತೇರನ್ನು ಎಳೆಯಬೇಕಾಗಿದೆ. ನನ್ನ ಭಾಷೆ, ನನ್ನ ಜನ, ನನ್ನ ದೇಶ ಎನ್ನದ ಮನುಷ್ಯ ಮನುಷ್ಯನೇ ಅಲ್ಲ ಎಂಬುದು ನೊಂದ ಕನ್ನಡಿಗನ ಮನದಳಲು. ಕನ್ನಡವನ್ನು ಕಟ್ಟುವುದೆಂದರೆ, ಪ್ರೀತಿಸುವುದೆಂದರೆ ಕನ್ನಡಿಗರ ಮನಸ್ಸುಗಳನ್ನು ಕಟ್ಟಿದಂತೆ, ಕನ್ನಡ ನಾಡನ್ನು ಕಟ್ಟಿದಂತೆ, ಈ ದೇಶವನ್ನು ಕಟ್ಟಿದಂತೆ ಅಂಥ ಇಚ್ಛಾಶಕ್ತಿ ನಮ್ಮದಾಗಬೇಕು. ಇದೆಲ್ಲವನ್ನವಲೋಕಿಸಿದಾಗ ಕೊನೆಗೆ ನೆನಪಾಗುವುದು ಜಿ.ಎಸ್.ಶಿವರುದ್ರಪ್ಪರವರ ಮಾತು ‘‘ಪ್ರೀತಿ ಇಲ್ಲದ ಮೇಲೆ ಹೂ ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ ಮಳೆ ಸುರಿಯೀತು ಹೇಗೆ…’’?
ಎಲ್ಲ ಒಗ್ಗೂಡುವಿಕೆಗೂ, ಒಳಗೊಳ್ಳುವಿಕೆಗೂ, ಪ್ರಗತಿಗೂ ಪ್ರೀತಿಯೊಂದೇ ಆಧಾರ. ಅಂತಹ ಪ್ರೀತಿಯನ್ನು ಕನ್ನಡದ ಮೇಲೆ, ಕನ್ನಡ ನಾಡಿನ ಮೇಲೆ ಬೆಳೆಸಿಕೊಳ್ಳೋಣ, ಆ ಮೂಲಕ ನುಡಿಯನ್ನು ಕಟ್ಟಿ ಬೆಳೆಸೋಣ ನಾಡನ್ನು ಬೆಳಗಿಸೋಣ. ಹಾಗಾದಾಗಲೇ ಆಂಗ್ಲವಷ್ಟೇ ಅಲ್ಲ ಪರಭಾಷೆ ಮತ್ತು ಪರಭಾಷಿಕರಿಂದ ಕನ್ನಡದ ಮೇಲಿನ ಬಿಕ್ಕಟ್ಟಿನ ನಿವಾರಣೆಗೆ ಸರಿಯಾದ ಮಾರ್ಗ ಸಿಗುತ್ತದೆ. ಈ ಎಲ್ಲವೂಗಳು ಕೇವಲ ನುಡಿಯಾಗದೇ ನುಡಿಯೊಳಗಣ ನಡೆಯಾಗಬೇಕಾಗುತ್ತದೆ.
Discussion about this post