ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಳೆದ ಕೆಲವು ತಿಂಗಳುಗಳಿಂದ ಜನರಲ್ಲಿ ಭೀತಿ ಹುಟ್ಟಿಸಲು ಪ್ರಯತ್ನಿಸಿ ಸ್ವಲ್ಪ ಮಟ್ಟಿಗೆ ಯಶಸ್ಸು ಪಡೆದ ವಿಷಯವೇ ಸಿಎಎ. ಪತ್ರಿಕೆ, ಟಿವಿ ಅಥವಾ ಸಾಮಾಜಿಕ ಜಾಲತಾಣಗಳನ್ನೇ ನೋಡಿ ಅವರದೇ ವ್ಯಾಖ್ಯಾನಗಳು, ಅದೆಂತಹದೋ ಸಲಹೆಗಳು. ಅವರು ಮಾತನಾಡುವ ರೀತಿ, ಬರೆದಿರುವ ಸಾಲುಗಳೇ ಹೇಳುತ್ತಿದ್ದವು ಒಂದೋ ಅವರು ಸ್ವಲ್ಪ ಮಾತ್ರವೂ ಓದಿಲ್ಲ ಅಥವಾ ಬೇಕೆಂದೇ ತಪ್ಪು ಕಲ್ಪನೆ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಿರಬಹುದು. ನೇರವಾಗಿ ವಿಷಯಕ್ಕೆ ಬರೋಣ.
ಮುಖ್ಯಾಂಶಗಳು
1. ಕಾಯಿದೆ ಮತ್ತು ತಿದ್ದುಪಡಿಗಳು
2. ಮೂರೇ ದೇಶಗಳು
3. ಈಶಾನ್ಯ ರಾಜ್ಯಗಳಲ್ಲಿ ವಿರೋಧ
4. ನಿಜವಾಗಿಯೂ ಮುಸ್ಲಿಂ ವಿರೋಧಿಯೇ?
ಅವಿಭಜಿತ ಭಾರತದಲ್ಲಿ ವಾಸಿಸುತ್ತಿದ್ದ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಪಾರ್ಸಿ, ಬೌದ್ಧ ಮತ್ತು ಸಿಖ್ ಧರ್ಮದ ಮೂಲ ಭಾರತೀಯರು ಆಯಾ ದೇಶಗಳನ್ನು ತ್ಯಜಿಸಿ ಮತ್ತೆ ಭಾರತಕ್ಕೆ ಮರಳಲು ಇಚ್ಛಿಸಿದಾಗ ಅವರಿಗಾಗಿ 1955ರಲ್ಲಿ ಮೊದಲ ಬಾರಿಗೆ ಈ ಕಾಯಿದೆಯನ್ನು ಆಗಿನ ಸರ್ಕಾರ ಜಾರಿಗೆ ತಂದಿತು.
ಅದರಂತೆ ಸ್ವಾತಂತ್ರ್ಯ ನಂತರ ವಲಸೆ ಬಂದ ಮೂಲ ನಿವಾಸಿಗಳು ಕೆಲ ನಿರ್ದಿಷ್ಟ ದಾಖಲೆಗಳ ಜೊತೆ ಹನ್ನೊಂದು ವರ್ಷ ಭಾರತದಲ್ಲಿ ವಾಸ ಮಾಡಿದ ನಂತರ ಭಾರತೀಯ ಪೌರತ್ವ ಪಡೆಯಬಹುದಿತ್ತು. ಗಮನಿಸಿ ಈ ಕಾಯಿದೆಗೆ ಇದಾಗಲೇ 1986, 1992, 2003, 2005 ಮತ್ತು 2015 ರಲ್ಲಿ ತಿದ್ದುಪಡಿ ಮಾಡಲಾಗಿತ್ತು.
ಇನ್ನು ಯಾಕೆ ಇದೇ ಮೂರು ದೇಶಗಳು ಎನ್ನುವುದು ಅರಿಯುವ ಸಮಯ. ಭಾರತೀಯ ಸಂವಿಧಾನದ ಆರ್ಟಿಕಲ್ 8 ಪ್ರಕಾರ ಮೂಲನಿವಾಸಿಗಳ ನಿರ್ಧರಿಸಲು 1935 ರ ಅಖಂಡ ಭಾರತವನ್ನು ಪರಿಗಣಿಸಲು ತಿಳಿಸುತ್ತದೆ. ವಿಭಜನೆಯ ನಂತರ ಧರ್ಮಾಧರಿತ ಮುಸ್ಲಿಂ ರಾಷ್ಟ್ರಗಳು ನಿರ್ಮಾಣವಾದಾಗ ಅಲ್ಲಿದ್ದ ಅನ್ಯ ಧರ್ಮಗಳ ನಾಗರೀಕರಿಗೆ ಸಮಾನ ರೀತಿಯಲ್ಲಿ ಸರ್ಕಾರಿ ಸೌಲಭ್ಯ ಮತ್ತು ಮೂಲಭೂತ ಹಕ್ಕುಗಳನ್ನು ನೀಡುವ ಭರವಸೆ ನೀಡಲಾಗಿತ್ತು. ಆದರೆ ಅದು ಜಾರಿಗೆ ಬಾರದೇ ನಿರಂತರ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಮತ್ತು ಅಲ್ಲಿನ ಸರಕಾರಗಳ ಬೆಂಬಲಗಳೊಂದಿಗೆ ಮತಾಂತರವು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಉದಾಹರಣೆಗೆ 1951 ರಲ್ಲಿ ಪಾಕಿಸ್ಥಾನದಲ್ಲಿ ಜನಸಂಖ್ಯೆಯ ಶೇ. 22ರಷ್ಟಿದ್ದ ಹಿಂದೂಗಳು ಇಂದು ಸುಮಾರು ಶೇ.4ಕ್ಕೆ ತಲುಪಿದೆ ಎಂದರೆ ಅಲ್ಲಿ ಇನ್ನೆಂತಹ ವಾತಾವರಣ ಇದ್ದೀತು?
ಈಶಾನ್ಯ ರಾಜ್ಯಗಳಲ್ಲಿ ವಿರೋಧ ನಡೆಯುತ್ತಿರುವ ವಿಷಯ. ನಿಮಗಾಗಿ ಒಂದು ಸಣ್ಣ ಮಾಹಿತಿ ಅಸ್ಸಾಂ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆ ಬಂಗಾಳಿ. ವಿಶೇಷ ಏನೆಂದರೆ ಆ ಪರಿಯಲ್ಲಿ ಬಂಗಾಳಿಗಳು ಮತ್ತು ಅಕ್ರಮ ವಲಸಿಗರು ಅತಿಕ್ರಮಿಸಿದ್ದಾರೆ. (ಭಾರತದಲ್ಲಿ ಎರಡು ಕೋಟಿಗೂ ಹೆಚ್ಚು ಬಾಂಗ್ಲಾ ವಲಸಿಗರು ಇದ್ದಾರೆ.) ಈಶಾನ್ಯ ರಾಜ್ಯಗಳ ಸಮಸ್ಯೆ ಎಂದರೆ ಸಿಎಎ ಅಡಿ ಮತ್ತಷ್ಟು ವಲಸಿಗರನ್ನು ತಂದು ಹಾಕಿಕೊಳ್ಳುತ್ತಾರೆ. ಅದರಿಂದ ತಮ್ಮ ರಾಜ್ಯದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಅಸಾಧ್ಯ ಎಂಬುದು. ಅಸ್ಸಾಂನಂತಹ ರಾಜ್ಯದಲ್ಲಿ ಮೂಲ ನಿವಾಸಿಗಳು ಮತ್ತು ವಲಸಿಗರ ನಡುವೆ ಕಲಹ ನಡೆಯುತ್ತಲೇ ಇದೆ. ಇರುವ ವಲಸಿಗರ ಹೊರಗೆ ಅಟ್ಟಲು ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು, ಟಿಎಂಸಿ ಮತ್ತು ಮಾನವಹಕ್ಕು ಆಯೋಗ ಸೇರಿದಂತೆ ಹಲವು ಪಟ್ಟಭದ್ರ ಹಿತಾಸಕ್ತಿಗಳು ತಡೆ ಒಡ್ಡುತ್ತಿವೆ. ಅದಕ್ಕಾಗಿ ಈಶಾನ್ಯ ರಾಜ್ಯಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ನಿಂತವು. ಪ್ರಸ್ತುತ ಸಮಸ್ಯೆ ಬಗೆಹರಿದಿದೆ.
ಗಲಭೆಕೋರರು ಈ ಪರಿ ಹಾನಿ ಮಾಡಲು ಸಾಧ್ಯವಾಗಿದ್ದು ಕೇವಲ ಮಾಹಿತಿ ಕೊರತೆಯಿಂದ. ಭಾರತೀಯ ಮೂಲ ಮುಸ್ಲಿಂರಲ್ಲಿ ಅವರು ಅನಗತ್ಯ ಭಯ ಹುಟ್ಟಿಸಲು ಯಶಸ್ವಿಯಾದರು. ಸಿಎಎ ಯಾವ ರೀತಿಯಲ್ಲೂ ಈಗಿನ ಯಾವ ಭಾರತೀಯ ನಾಗರಿಕನ ಕುರಿತು ಇಲ್ಲದಿದ್ದರೂ ತಪ್ಪು ಕಲ್ಪನೆ ಮೂಡಿಸಿದರು. ಎಂತಹ ಸುಳ್ಳಿನ ಕಾರ್ಮೋಡವೇ ಆಗಿರಲಿ ಸತ್ಯದ ಪ್ರಕಾಶಮಾನ ಸೂರ್ಯನ ಎಲ್ಲಿಯವರೆಗೆ ತಡೆದೀತು? ಭಾರತ ಅರಿತಿದೆ. ಇನ್ನು ಜಗತ್ತಿನ ಯಾವ ಮೂಲೆಯಲ್ಲಿ ತಡಕಿದರೂ ಈ ನೊಂದ ಪ್ರಜೆಗಳಿಗೆ ನೆರವಾಗಲು ಯಾರೂ ಬರಲಿಲ್ಲ, ಬರುವುದೂ ಇಲ್ಲ. ಮುಸ್ಲಿಂ ಧರ್ಮದ ಆಧಾರದಲ್ಲಿ ಭಾಗವಾದ ಕಾರಣ ವಲಸಿಗ ಮುಸ್ಲಿಂ ಪ್ರಜೆಗಳಿಗೆ ಹಳೆಯ ಹನ್ನೊಂದು ವರ್ಷಗಳ ಷರತ್ತನ್ನು ಮುಂದುವರೆಸಲಾಗಿದೆ.
ವಿಷಯ ತುಂಬಾ ಸರಳ. ಮುಸಲ್ಮಾನ ದೇಶಗಳಲ್ಲಿ ವಾಸಿಸುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಕಾಯುವುದು ಕೇಂದ್ರದ ಗುರಿ. ಇಂತಹ ರಾಷ್ಟ್ರಗಳಲ್ಲಿ ಮುಸ್ಲಿಂರು ಕಡೆಗಣನೆ ಅಥವಾ ಅಸಹಿಷ್ಣುತೆಗೆ ಒಳಗಾಗುವುದಿಲ್ಲ. ಅಲ್ಲದೆ ಅವರನ್ನು ಬರಲೇಬೇಡಿ ಎಂದೇನೂ ಹೇಳಿಲ್ಲ. ನೀವು ಹನ್ನೊಂದು ವರ್ಷ ಕಾಯಿರಿ, ಇವರನ್ನು ಸ್ವಲ್ಪ ಮೊದಲೇ ಕರೆದುಕೊಳ್ಳುವುದೇ ತಿದ್ದುಪಡಿ. ತಿಳಿಸಿ ಹೇಳಬೇಕಾದ ಹಲವರು ಹಾಗೆಯೇ ಸುಮ್ಮನಾದದ್ದು ಮಾತ್ರ ವಿಪರ್ಯಾಸ…!
Get in Touch With Us info@kalpa.news Whatsapp: 9481252093
Discussion about this post