ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕನ್ನಡ ನಾಡು-ನುಡಿಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡದ ಬಗ್ಗೆ ಮಾತನಾಡುವುದಕ್ಕಿಂತ, ಕನ್ನಡವನ್ನು ಸದಾ ಆಚರಣೆಯಲ್ಲಿರುವಂತೆ ನೋಡಿಕೊಳ್ಳಬೇಕೆಂದು ಕೆಎಸ್’ಆರ್’ಟಿಸಿ ಸಂಸ್ಥೆಯ ಕನ್ನಡ ಪ್ರೇಮಿ ನಿರ್ವಾಹಕ ನಟರಾಜ್ ಕುಂದೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಗಾಂಧಿ ಬಜಾರ್ ನ ತುಳಜಾ ಭವಾನಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ 65 ನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೈಸೂರು ಪ್ರಾಂತ್ಯದಲ್ಲಿ ಹಂಚಿ ಹೋಗಿದ್ದ ಕರುನಾಡು 1956 ರಲ್ಲಿ ಏಕೀಕರಣವಾಗಿದ್ದು, ಆದರೆ, ನಾಡಿನ ಭಾಷೆ ಕನ್ನಡ ಮಾತ್ರ ಇಂದಿಗೂ ಸರ್ಕಾರಿ ಶಾಲೆಗಳಿಗೆ ಮಾತ್ರ ಸೀಮಿತವೆಂಬಂತಾಗಿದೆ. ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಹೆಚ್ಚು ಮನವರಿಕೆ ಮಾಡಿಕೊಡುವುದರ ಜೊತೆಗೆ, ಕನ್ನಡವನ್ನು ಇತರರಿಗೂ ಕಲಿಸಲು ಮತ್ತು ಕಲಿಯಲು ಪ್ರೋತ್ಸಾಹದಾಯಕ ವಾತಾವರಣ ಕಲ್ಪಿಸಬೇಕೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಬೆಳೆಸುವ ಜೊತೆಗೆ ಬಳಸಿದರೆ ಮಾತ್ರ ಕನ್ನಡ ಭಾಷೆ ಉಳಿಯಲಿದ್ದು, ಎಲ್ಲಾ ಭಾಷೆಯನ್ನು ಕಲಿತು, ಕನ್ನಡವಷ್ಟೇ ಪ್ರೀತಿಸಬೇಕೆಂದು ಈ ವೇಳೆ ಕರೆ ನೀಡಿದರು. ಈ ಮೂಲಕ, ಕರುನಾಡು, ಕನ್ನಡ ನಾಡು, ಕಲಿಗಳ ಬೀಡು ಶಾಶ್ವತವಾಗಿ ಉಳಿಯಲು ಪ್ರತಿಯೊಬ್ಬ ಕನ್ನಡಿಗರು ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.
ಅಲ್ಲದೇ, ರಾಜ್ಯೋತ್ಸವವನ್ನು ನ. 1 ಕ್ಕೆ ಮಾತ್ರ ಸೀಮಿತವಾಗಿಸದೇ, ನಂ. 1 ಕನ್ನಡ ಭಾಷೆಯನ್ನಾಗಿಸಲು, ಸರ್ಕಾರದ ಜೊತೆ, ಎಲ್ಲಾ ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ಕೈ ಜೋಡಿಸಬೇಕೆಂದು ಹೇಳಿದರು. ನಾನು ಮೈಸೂರು ಡಿಪೋನಲ್ಲಿರುವ ಸಂದರ್ಭದಲ್ಲಿ ಹಲವಾರು ಸಂಘ-ಸಂಸ್ಥೆಗಳು ನನ್ನನ್ನು ಗುರುತಿಸಿದ್ದವು. ಆದರೆ, ಶಿವಮೊಗ್ಗ ಬಂದ ಬಳಿಕ, ಇದೇ ಪ್ರಥಮ ಬಾರಿಗೆ ನನ್ನನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಭಾವಸಾರ ಯುವಕ ಸಂಘದವರು ಎಂದು ಧನ್ಯವಾದ ಅರ್ಪಿಸಿದರು.
ಇದೇ ವೇಳೆ ಭಾವಸಾರ ಕ್ಷತ್ರಿಯ ಮಹಜನ ಸಮಾಜದ ಅಧ್ಯಕ್ಷರಾದ ಓಂ ಪ್ರಕಾಶ್ ತೇಲ್ಕರ್ ಮಾತನಾಡಿ, ಕಳೆದ 25 ವರ್ಷಗಳಿಂದ ಭಾವಸಾರ ಯುವಕ ಸಂಘ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.
ಅಲ್ಲದೇ, ಮುಂದಿನ ದಿನಗಳಲ್ಲಿ ಇರುವ 32 ವಾರ್ಡುಗಳಲ್ಲಿ, ವಾರ್ಡ್’ಗೆ ಇಬ್ಬರಂತೆ, ಸಂಘಕ್ಕೆ ಸದಸ್ಯರನ್ನು ಸೇರ್ಪಡೆಗೊಳಿಸಿ ಎಂದು ಕಿವಿ ಮಾತು ಹೇಳಿದರು. ಈ ಮೂಲಕ, ಸಮಾಜದ ಬಲವರ್ದನೆಗೆ, ಮತ್ತು ಸಂಘಕ್ಕೆ ಶಕ್ತಿ ತುಂಬುವ ಕೆಲಸ ಮಾಡಿ, ನಿಮ್ಮ ಜೊತೆಗೆ ಸಮಾಜ ಸದಾ ಇರುತ್ತದೆ ಎಂದು ಅಭಯ ನೀಡಿದರು.
ಸಮಾರಂಭದಲ್ಲಿ, ಕೆಎಸ್’ಆರ್’ಟಿಸಿ ಸಂಸ್ಥೆಯ ಕನ್ನಡಪ್ರೇಮಿ ನಿರ್ವಾಹಕ ನಟರಾಜ್ ಕುಂದೂರು ಅವರಿಗೆ ’ಕನ್ನಡ ಜಂಗಮ’ ಎಂಬ ಬಿರುದು ನಾಮಾಂಕಿತ ಮಾಡುವ ಮೂಲಕ ಗೌರವಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕಳೆದ ಬಾರಿ ಎಸ್’ಎಸ್’ಎಲ್’ಸಿ ಪರಿಕ್ಷಾ ಫಲಿತಾಂಶದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ 42 ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ಭಾವಸಾರ ಮಹಜನ ಸಮಾಜದ ಅಧ್ಯಕ್ಷರಾದ ಓಂ ಪ್ರಕಾಶ್ ತೇಲ್ಕರ್ ಇವರು ಧ್ವಜರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ, ಶ್ರೀರಾಮ ಸೇವಾ ಭಾವಸಾರ ಕ್ಷತ್ರಿಯ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಎಸ್. ಗಿರೀಶ್, ಸಮಾಜದ ಹಿರಿಯರಾದ ಡಾ. ಪುರುಷೋತ್ತಮ್, ಶ್ರೀಧರ್ ಮೂರ್ತಿ ನವಲೆ, ಸಂಘದ ಉಪಾಧ್ಯಕ್ಷರಾದ ಮಂಜುನಾಥ್ ಬೇದ್ರೆ, ದತ್ತಾತ್ರೇಯ ಮಹೇಂದ್ರಕರ್, ಪ್ರಧಾನ ಕಾರ್ಯದರ್ಶಿ ಸಚಿನ್ ಬೇದ್ರೆ, ಸಂಘದ ನಿರ್ದೇಶಕರು, ಸೇರಿದಂತೆ, ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾವಸಾರ ಯುವಕ ಸಂಘದ ಅಧ್ಯಕ್ಷ ವಿನಯ್ ತಾಂದಳೆ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post