ನನ್ನ ಕವಿತೆಯೆಂದರೆ
ಗೋರಿಯ ಮೇಲೆ ಚಿಗುರೊಡೆದು
ನಗುವ ತುಂಬೆಹೂವು.
ಅದರದ್ದು ಸುಖದ ಹಾಡಲ್ಲ
ಅಸಂಖ್ಯಾತ ದುಃಖಗಳ
ಕರುಳಕೋಣೆಯ ನಂಜಿಲ್ಲದ ಪದಗಳು…!
ಎನ್. ರವಿಕುಮಾರ್ ಅವರ ಕವನ ಸಂಕಲನದ ನಂಜಿಲ್ಲದ ಪದಗಳು ಹೀಗೆ ಆರಂಭಗೊಳ್ಳುತ್ತದೆ. ಜೀವಪರ, ಮಾನವೀಯ ಆಶಯಗಳೊಂದಿಗೆ ವರ್ತಮಾನದ ತಲ್ಲಣಗಳನ್ನು ಕವಿತೆಗಳ ಮೂಲಕ ಅಭಿವ್ಯಕ್ತಿಸುವ ಎನ್. ರವಿಕುಮಾರ್ ಅವರ ನಂಜಿಲ್ಲದ ಪದಗಳು ಕವಿತಾ ಸಂಕಲನ ಕಾಲದ ಕಥನದ ಕವಿತೆಗಳಾಗಿವೆ.
ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆಯ ಸಂಪಾದಕರೂ, ಹಿರಿಯ ಪತ್ರಕರ್ತರೂ ಆದ ಎನ್. ರವಿಕುಮಾರ್ ಅವರ ಕವಿತೆಗಳಿಗೆ ಈಗಾಗಲೆ ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿದ್ದು, ಅವರ ಚೊಚ್ಚಲ ಕವಿತಾ ಸಂಕಲನ ಹಸ್ತಪ್ರತಿ ನಂಜಿಲ್ಲದ ಪದಗಳು ಗೆ ರಾಜ್ಯಮಟ್ಟದ 2018 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ನಾಡಿನ ಅನೇಕ ಸಾಹಿತಿಗಳ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ಬೆಂಗಳೂರಿನ ಬಹುರೂಪಿಪ್ರಕಾಶನ ಈ ಕವಿತಾ ಸಂಕಲನವನ್ನು ಪ್ರಕಟಿಸಿದೆ.
ನಂಜಿಲ್ಲದ ಪದಗಳು ಕವಿತಾ ಸಂಕಲನವೂ ಜ.26 ರಂದು ಶನಿವಾರ ಸಂಜೆ 5 ಗಂಟೆಗೆ ನಗರದ ಕಮಲಾನೆಹರು ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.
ಶಿವಮೊಗ್ಗ ಟೆಲೆಕ್ಸ್ – ಬಹುರೂಪಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹಿರಿಯ ಪತ್ರಕರ್ತ, ಕವಿ ಎನ್. ರವಿಕುಮಾರ್ (ಟೆಲೆಕ್ಸ್) ಅವರ ಈ ಕವಿತಾ ಸಂಕಲನವನ್ನು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು, ವೈಚಾರಿಕ ಚಿಂತಕರೂ ಆದ ಡಾ. ಸಣ್ಣರಾಮ ಅವರು ಬಿಡುಗಡೆಗೊಳಿಸಲಿದ್ದಾರೆ. ಅವಧಿಯ ಸಂಪಾದಕರೂ, ಹಿರಿಯ ಪತ್ರಕರ್ತರೂ ಆದ ಜಿ.ಎನ್. ಮೋಹನ್ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ, ವಿಮರ್ಶಕಿ ಡಾ. ಸಬಿತಾ ಬನ್ನಾಡಿ ಅವರು ಸಂಕಲನ ಕುರಿತು ಮಾತನಾಡಲಿದ್ದಾರೆ.
Discussion about this post