ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಫೆ.25ರಿಂದ ಆರಂಭಗೊಳ್ಳಲಿರುವ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯು ಶಾಂತಿ ಮತ್ತು ಸಂಭ್ರಮದಿಂದ ಯಶಸ್ವಿಗೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಹೇಳಿದರು.
ಇಂದು ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನ ಸಮಿತಿಯೊಂದಿಗೆ ಜಾತ್ರೆ ನಿಮಿತ್ತ ಬಂದೋಬಸ್ತ್ ಕುರಿತು ಸಮಾಲೋಚನೆ ನಡೆಸಿದ ಅವರು, ಜಾತ್ರೆ ಜನರ ಸಂಭ್ರಮ ಮತ್ತು ಸಂತೋಷವನ್ನು ಕೊಡುವ ಹಬ್ಬವಾಗಿದ್ದು, ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸುವ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಮತ್ತು ಜಾತ್ರೆಯಲ್ಲಿ ಸಂಭ್ರಮಿಸಲು ಅನುಕೂಲಕರವಾಗುವಂತೆ ಕೋಟೆ ಸರ್ಕಲ್ ಇನ್ಸ್’ಪೆಕ್ಟರ್ ಮಾದಪ್ಪ ಮತ್ತು ದೊಡ್ಡಪೇಟೆ ಸರ್ಕಲ್ ಇನ್ಸ್’ಪೆಕ್ಟರ್ ವಸಂತ್ ಕುಮಾರ್ ಅವರ ಉಸ್ತುವಾರಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಮಾಡಲಾಗುವುದು. ಜಾತ್ರೆಯ ನೆಪದಲ್ಲಿ ಸರಗಳ್ಳತನ, ಪಿಕ್ ಪಾಕೇಟ್ ಕೃತ್ಯಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಜಾತ್ರೆಯ ದಿನಗಳಲ್ಲಿ ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದು, ಮಾರಿಕಾಂಬ ದೇವಸ್ಥಾನ ಸಮಿತಿಯ ಜೊತೆ ನಿರಂತರ ಸಹಕಾರದೊಂದಿಗೆ ಜಾತ್ರೆಯನ್ನು ಯಶಸ್ವಿಗೊಳಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಮಾರಿಕಾಂಬ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ವಹಿಸಿದ್ದು, ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಅವರ ಜಾತ್ರೆಯ ಪೂರ್ವಸಿದ್ಧತೆಯ ಬಗ್ಗೆ ವಿವರ ನೀಡಿದರು.
ಇದೇ ಸಂದರ್ಭದಲ್ಲಿ ಮಾರಿಕಾಂಬ ದೇವಸ್ಥಾನ ಸಮಿತಿ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಮತ್ತು ಇತರೆ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ವಸಂತ್ ಕುಮಾರ್, ಮಾದಪ್ಪ, ಸಬ್ ಇನ್ಸ್‌ಪೆಕ್ಟರ್‌ಗಳಾದ ಶಿವಪ್ರಸಾದ್, ಟ್ರಾಫಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳು, ಸಮಿತಿಯ ಪದಾಧಿಕಾರಿಗಳಾದ ಡಿ.ಎಂ. ರಾಮಯ್ಯ, ಹನುಮಂತಪ್ಪ, ತಿಮ್ಮಪ್ಪ, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post