ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನರಸಿಂಹ ಜಯಂತಿಯು ವೈಶಾಖ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಮಹಾವಿಷ್ಣುವಿನ ಹತ್ತು ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು, 4 ಅರ್ಧ ಮನುಷ್ಯ ಅರ್ಧ ಸಿಂಹ ಇರುವ ರೂಪ.
ಪುರಾಣಗಳ ಪ್ರಕಾರ ನರಸಿಂಹ ಅವತಾರವನ್ನು ಬಲು ಮುಖ್ಯ ಮತ್ತು ವೈಶಿಷ್ಟ್ಯವಾಗಿ ಪರಿಗಣಿಸಲಾಗುತ್ತದೆ. ಭಕ್ತ ಪ್ರಹ್ಲಾದನ ಮೊರೆಯನ್ನು ಕೇಳಿ ಕಂಬ ಒಡೆದು ಪ್ರತ್ಯಕ್ಷನಾಗಿ ಭಗವಾನ್ ವಿಷ್ಣುವು ನರಸಿಂಹ ಅವತಾರವನ್ನು ತಳೆದು ಹಿರಣ್ಯಕಶ್ಯಪುವನ್ನು ಕೊಂದ ದಿನ.
ಯಾರು ದೇವರಲ್ಲಿ ಅನನ್ಯ ಭಕ್ತಿಯಿಂದ ನಂಬಿಕೆ ಇಟ್ಟು ನಡೆದು ಕೊಳ್ಳುತ್ತಾರೋ ಅಂತಹವರನ್ನು ದೇವರು ಕೈ ಬಿಡದೆ ಕಾಪಾಡುತ್ತಾನೆ.
ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ
ಪರಶುರಾಮ ಕ್ಷೇತ್ರ, ಪುರಾಣ ಪ್ರಸಿದ್ಧವಾದ ಕ್ಷೇತ್ರ, ಇಲ್ಲಿನ ಸಪ್ತ ಕ್ಷೇತ್ರಗಳು ಮೋಕ್ಷದಾಯಕಗಳೆಂದು ಜನಜನಿತವಾಗಿವೆ. ಈ ಏಳು ಕ್ಷೇತ್ರಗಳಲ್ಲಿ ಆರು ಅವಿಭಕ್ತ ಕ್ಷೇತ್ರಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇವೆ. ಅವುಗಳಲ್ಲೊಂದು, ಕುಮಾರಾದ್ರಿಯೆಂದು ಉಲ್ಲೇಖಿತವಾದ, ಸಹ್ಯಾದ್ರಿ ಶ್ರೇಣಿಯ ಉತ್ತುಂಗ ಶಿಖರಗಳಾದ ಶೇಷಪರ್ವತ, ಸಿದ್ದಪರ್ವತ, ಕುಮಾರ ಪರ್ವತಗಳ ತಪ್ಪಲಿನ ತಂಪಿನ ತಾಣದಲ್ಲಿ, ಧಾರಾ ನದಿಯ ತೆಕ್ಕೆಯಲ್ಲಿರುವ ಹಾಗೂ ಸಹಸ್ರಾರು ವರ್ಷಗಳಿಂದ ಸಿದ್ದಪುರುಷರ, ಅವತಾರ ಪುರುಷರ, ತಪೋಧನರ, ಯತಿಮುನಿಗಳ, ತಪೋಭೂಮಿ ಈ ಸುಬ್ರಹ್ಮಣ್ಯ ಕ್ಷೇತ್ರ.
ಕಾದಿಟ್ಟ ಕಾಡುಗಳ ದಟ್ಟ ಹಸುರಿನ, ದೈವಸಾನ್ನಿಧ್ಯವಾದ ಕ್ಷೇತ್ರ ಸುಬ್ರಹ್ಮಣ್ಯ. ಔಷಧೀಯ ಸತ್ವಗಳಿಂದ ಕೂಡಿದ ರೋಗನಿವಾರಕವಾದ ಕುಮಾರಧಾರಾ ನದಿ ಇಲ್ಲಿ ಹರಿಯುತ್ತದೆ.
ಆಚಾರ್ಯ ಮಧ್ವರು ಕರಾರ್ಚಿತ-ನಗುಮೊಗದ ಶ್ರೀ ನರಸಿಂಹನ ಸನ್ನಿಧಿಯಲ್ಲಿ ಇಂದು ನರಸಿಂಹ ಜಯಂತಿ ಆಚರಣೆ ಸುಸಂದರ್ಭದಲ್ಲಿ ಶ್ರೀ ಸ್ವಾಮಿಯಲ್ಲಿ ದೇಶಕ್ಕೆ ಹಾಗೂ ರಾಜ್ಯಕ್ಕೆ ಬಂದೆರೆಗಿರುವ ಕೊರೋನಾ ಎಂಬ ವೈರಸ್ ಅನ್ನು ನಾಶ ಮಾಡಿ ರಕ್ಷಣೆ ನೀಡು ಭಗವಂತ ಎಂದು ಪ್ರಾರ್ಥನೆ ಮಾಡೋಣ! ಸುಬ್ರಹ್ಮಣ್ಯ ಸ್ವಾಮಿಯ, ಲೋಕಹಿತಕ್ಕಾಗಿ ದೇವಸೈನ್ಯಕ್ಕೆ ಮುಖಂಡನಾಗಿ ಶೂರಪದ್ಮ, ತಾರಕಾದಿ ರಾಕ್ಷಸರನ್ನು ಸಂಹರಿಸಿದನು. ಧಾರಾ ನದಿಯಲ್ಲಿ ತನ್ನ ಆಯುಧವನ್ನು ತೊಳೆದಂದಿನಿಂದ ಆ ನದಿಯು ಕುಮಾರಧಾರಾ ಎಂದು ಪ್ರಸಿದ್ದವಾಯಿತೆಂಬ ಪ್ರತೀತಿಯಿದೆ.
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ, ಕುಮಾರಪರ್ವತದಲ್ಲಿ ನೆಲೆಸಿದ್ದ ವಾಸುಕಿ ಹಾಗೂ ಮಹಾ ಶೇಷರೊಡನೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೆಲಸಿ, ಸರ್ಪಗಳೊಡೆಯನಾಗಿ ಪೂಜಿಸಲ್ಪಟ್ಟು, ಚತುರ್ಯುಗಗಳಲ್ಲಿ ಬರುವ ಭಕ್ತಾದಿಗಳಿಗೆ ಸರ್ವಾಭೀಷ್ಟಗಳನ್ನು ಕರುಣಿಸುತ್ತಾನೆ. ದ್ವೈತ ಮತ ಸ್ಥಾಪನಾಚಾರ್ಯರಾದ ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀ ಸುಬ್ರಹ್ಮಣ್ಯ ಮಠ ಇಲ್ಲಿದೆ.
ಯತಿಪರಂಪರೆ
750 ವರ್ಷಗಳ ಯತಿಪರಂಪರೆಯ ಭವ್ಯ ಇತಿಹಾಸವುಳ್ಳ ಈ ಮಠದಲ್ಲಿ, ಆಚಾರ್ಯ ಮಧ್ವರಿಂದ ಸ್ಥಾಪಿಸಲ್ಪಟ್ಟ ಪ್ರತೀಕಗಳು ಇಂದಿಗೂ ಶ್ರೀಮಠದ ಯತಿಗಳಿಂದ ಅರ್ಚಿಸಲ್ಪಡುತ್ತಿವೆ. ಜಗತ್ತಿನ ಪರಮಾಶ್ಚರ್ಯಗಳಲ್ಲೊಂದು ‘ಶ್ರೀ ಸಂಪುಟ’ ಅತ್ಯಂತ ಕುತುಹಲಕಾರಿ ಕರಂಡಕ. ತ್ರಿಕಾಲಜ್ಞಾನಿಗಳಾದ ವಾದಿರಾಜರು ತಮ್ಮ ತೀರ್ಥಪ್ರಬಂಧದಲ್ಲಿ ಈ ಸಂಪುಟವನ್ನು ವಿಶೇಷವಾಗಿ ವರ್ಣಿಸುತ್ತಾರೆ.
ಯತ್ರ ಸಂಪುಟಮಸ್ಫೋಟಂ ಕೃಷ್ಣಸ್ಯ ಸ್ಫೋರಯತ್ಯಹೋ
ಅಗ್ರಾಹ್ಯತ್ವಮದೃಶ್ಯತ್ವಂ ಕಿಂಪುನಸ್ತತ್ರ ಪಂಡಿತಾಃ
ಅಭೇದ್ಯಮತಿಯತ್ನೇನಾಪ್ಯಸ್ಖಲತ್ಕೃಷ್ಣ ವಿಗ್ರಹಂ
ತತ್ಪೂಜಾಭಾಜನಂ ಭಾತಿ ಮಾಧ್ವಂ ಹೃದಿವ ಸಂಪುಟಂ॥
ಶ್ರೀ ಸಂಪುಟವು ತೆರೆಯಲಸಾಧ್ಯವಾದುದು, ನಿರಂತರ ಭಗವಂತನ ಸಾನ್ನಿಧ್ಯವಿರುವಂತಹುದು. ಪ್ರಯತ್ನ ಪಟ್ಟರೂ ಭೇದಿಸಲು ಅಸಾಧ್ಯವಾದುದು. ಅದ್ದರಿಂದ ಆಚಾರ್ಯ ಮಧ್ವರ ಹೃದಯ ಸಂಪುಟದಂತಿದೆ. ನಿತ್ಯ ಪೂಜಿಸಲ್ಪಟ್ಟಿದೆ. ಈ ಸಂಪುಟದ ಮೂಲದ್ರವ್ಯ ಯಾವುದೆಂದೇ ಹೇಳಲಾಗುವುದಿಲ್ಲ. ‘ಎಣ್ಣೆ ಕಂಚಿನ’ ’ಬೊಗಸೆ ಗಾತ್ರದ’ ತುಂಬಾ ಹೊಳಪಿರುವಂತಹುದು. ನೆತ್ತಿಯಲ್ಲೊಂದು ಚೂಚುಕ. ಆದರೆ ತೆರೆಯಲಾಗುವುದಿಲ್ಲ.
ಶಿಷ್ಯ ಪರಂಪರೆಯ ತಿಳುವಳಿಕೆಯಂತೆ ಆಚಾರ್ಯ ಮಧ್ವರು ಈ ಸಂಪುಟದಲ್ಲಿ ಐದು ವ್ಯಾಸಮುಷ್ಟಿಕೆಗಳು (ಬದರಿಕಾಶ್ರಮದಲ್ಲಿ, ಶ್ರೀ ಮಧ್ವಾಚಾರ್ಯರಿಗೆ ಸ್ವತಃ ಶ್ರೀ ವ್ಯಾಸರು 8 ವ್ಯಾಸಮುಷ್ಟಿಗಳನ್ನು ಕೊಟ್ಟಿದ್ದರು).
ಹನ್ನೆರಡು ಕ್ಷೇತ್ರ (144) ಲಕ್ಷ್ಮೀನಾರಾಯಣ ಶಾಲಗ್ರಾಮಗಳು ಮತ್ತು ಒಂದು ಲಕ್ಷ್ಮೀನರಸಿಂಹ ಶಾಲಗ್ರಾಮ ಇವುಗಳನ್ನು ಇಟ್ಟು ಅಭೇದ್ಯವಾಗಿಸಿದರು. ಆಚಾರ್ಯ ಮಧ್ವರು ಕರಾರ್ಚಿತವಾದ ವಿಷ್ಣುಪ್ರತೀಕವಾದ ಸುಂದರವಾದ ನಗುಮೊಗದ ಶ್ರೀ ನರಸಿಂಹನ ವಿಗ್ರಹವನ್ನು ಸ್ವೀಕರಿಸಿದ ಆಚಾರ್ಯರು, ಶ್ರೀ ವೇದವ್ಯಾಸ, ಸಂಪುಟ, ನರಸಿಂಹ, ರುಕ್ಮಿಣೀ ಸತ್ಯಭಾಮಾ ಸಮೇತ ಶ್ರೀ ಪಾಂಡುರಂಗವಿಠಲ ದೇವರ ಪ್ರತೀಕಗಳನ್ನು ಹಾಗೂ ಒಂದು ವ್ಯಾಸಮುಷ್ಟಿಕೆಯನ್ನು, ಶ್ರೀ ಮಠದ ಅರ್ಚಾಮೂರ್ತಿಗಳನ್ನಾಗಿ ಮಾಡಿದರು.
750 ವರ್ಷದ ಭವ್ಯ ಪರಂಪರೆಯ ಶ್ರೀ ಮಠದ ಅರ್ಚಾಮೂರ್ತಿಗಳಾದ ಶ್ರೀ ವ್ಯಾಸ, ವಿಠಲ, ಸಂಪುಟ, ನರಸಿಂಹ ದೇವರಾದಿಯಾಗಿ ಪರಂಪರಾಗತವಾದ ಇತರ ಅರ್ಚಾಮೂರ್ತಿಗಳೂ ಸಹ ಸಂತಾನ ಸೌಭಾಗ್ಯಾದಿ ಇಷ್ಟಾರ್ಥಪ್ರದಾಯಕಗಳಾಗಿವೆ.
ಗೊ ಶಾಲೆ ಪ್ರಾರಂಭ
ಶ್ರೀಶ್ರೀ ವಿದ್ಯಾ ಪ್ರಸನ್ನ ತೀರ್ಥರು ಹಲವಾರು ಹಸುಗಳ ಜೀವಗಳನ್ನು ರಕ್ಷಿಸಲು ಮತ್ತು ಉಳಿಸಲು ಯೋಜನೆಯನ್ನು ಪ್ರಾರಂಭಿಸಿದ್ದಾರೆ.
ಶೃಗುಲು ಕುಕ್ಕೇ ಸುಬ್ರಹ್ಮಣ್ಯ ಮತ್ತು ಕೆಂಚಮ್ಮನಾ ಹೊಸಕೋಟೆ, ಹಾಸನ ಜಿಲ್ಲೆಯಲ್ಲಿ ಗೊ ಶಾಲೆ ಪ್ರಾರಂಭಿಸಿದ್ದಾರೆ. ನೂರಾರು ಹಸುಗಳನ್ನು ಯೋಜನೆಯಲ್ಲಿ ಉಳಿಸಲಾಗಿದೆ.
ಶ್ರೀಶ್ರೀಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅನುಗ್ರಹ
ಶ್ರೀ ಸಂಪುಟ ನರಸಿಂಹ ಸ್ವಾಮಿ ಕುಕ್ಕೆ ಸುಬ್ರಮಣ್ಯ ಮಠದಲ್ಲಿ ನಡೆಯುವ ಶ್ರೀನರಸಿಂಹ ದೇವರ ಜಯಂತಿಯನ್ನು ಈ ಬಾರಿ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಎಂದು ಶ್ರೀಶ್ರೀಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮೂಲಕ ವಿಶೇಷ ಅನುಗ್ರಹ ಸಂದೇಶ ನೀಡಿರುವ ಶ್ರೀಗಳು, ರಾಜ್ಯ ಸರ್ಕಾರ ರಾಜ್ಯದಾದ್ಯಂತ ಲೌಕ್ ಡೌನ್’ಗೆ ಆದೇಶಿಸಿದ್ದು, ಸಾರ್ವಜನಿಕರಿಗೆ ಮನೆಯಿಂದ ಹೊರ ಬರದಂತೆ ಸೂಚಿಸಲಾಗಿದೆ. ಅದರಂತೆಯೇ ಎಲ್ಲ ಭಕ್ತ ಸಮೂಹ ಮನೆಯಲ್ಲಿಯೇ ನರಸಿಂಹ ದೇವರ ಆರಾಧನೆಗಳನ್ನು ಮಾಡಬೇಕು ಹಾಗೂ ಶ್ರೀ ಮಠದಲ್ಲಿ ಸಾಂಕೇತಿಕ ಶ್ರೀನರಸಿಂಹ ದೇವರ ಜಯಂತಿ ಆಚರಿಸಲಾಗುತ್ತಿದೆ ಎಂದರು.
ಕೊರೋನಾ ಎಂಬ ಪೆಡಂಭೂತ ವಿಶ್ವದೆಲ್ಲೆಡೆ ವೇಗವಾಗಿ ಹರಡುತ್ತಿದ್ದು ಅದರ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರದ ನಿಯಮಗಳನ್ನು ಪಾಲಿಸೋಣ ಎನ್ನುತ್ತಾರೆ ಶ್ರೀಗಳು.
ಆಚಾರ್ಯ ಮಧ್ವರು ಕರಾರ್ಚಿತ-ನಗುಮೊಗದ ಶ್ರೀ ನರಸಿಂಹನ ಸನ್ನಿಧಿಯಲ್ಲಿ ಇಂದು ನರಸಿಂಹ ಜಯಂತಿ ಆಚರಣೆ ಸುಸಂದರ್ಭದಲ್ಲಿ ಶ್ರೀ ಸ್ವಾಮಿಯಲ್ಲಿ ದೇಶ ಬಂದೆರಗಿರುವ ಕೊರೋನಾ ಎಂಬ ವೈರಸ್ ಅನ್ನು ನಾಶ ಮಾಡಿ ರಕ್ಷಣೆ ನೀಡು ಭಗವಂತ ಎಂದು ಪ್ರಾರ್ಥನೆ ಮಾಡೋಣ!
ಲೇಖನಕ್ಕೆ ಪೂರಕ ಮಾಹಿತಿ ನೀಡಿ, ಫೋಟೋಗಳನ್ನು ನೀಡಿದ ಸುಹಾಸ್ ಉಪಾಧ್ಯ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು.
Get in Touch With Us info@kalpa.news Whatsapp: 9481252093
Discussion about this post