ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವುದೇ ಪೂರ್ವ ನೋಟೀಸ್ ನೀಡದೆ ಕಾನೂನುಬಾಹಿರವಾಗಿ ಜೆಸಿಬಿ ಯಂತ್ರವನ್ನು ಜಪ್ತಿ ಮಾಡಿ ಸೇವಾ ನ್ಯೂನ್ಯತೆ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಎಚ್.ಡಿ.ಬಿ ಫೈನಾನ್ಸ್ ಸರ್ವೀಸಸ್ ಸಂಸ್ಥೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿ ಆದೇಶಿಸಿದೆ.
ಸೊರಬ ತಾಲೂಕಿನ ಬೆನ್ನೂರು ಗ್ರಾಮದ ಮಂಜಪ್ಪ ಕೆ. ಅವರು ಎಚ್.ಡಿ.ಬಿ ಫೈನಾನ್ಸ್ ಸರ್ವೀಸಸ್ ಸಂಸ್ಥೆಯಿಂದ ರೂ.31,67,455 ಸಾಲ ಪಡೆದು ಜೆಸಿಬಿ ಯಂತ್ರ ಖರೀದಿಸಿದ್ದರು. ಸಾಲದ ಮರುಪಾವತಿಗಾಗಿ ಪ್ರತಿ ತಿಂಗಳು ರೂ.71,500 ಕಂತು ಪಾವತಿಸುವ ಒಪ್ಪಂದವಾಗಿತ್ತು. ದೂರುದಾರರು ನಿಯಮಿತವಾಗಿ ಕಂತುಗಳನ್ನು ಪಾವತಿಸುತ್ತಿದ್ದರು.
ಆದರೆ, ಅಧಿಕ ಮಳೆ ಹಾಗೂ ಜೆಸಿಬಿ ಯಂತ್ರದ ದುರಸ್ತಿ ಕಾರ್ಯದ ಕಾರಣದಿಂದ ಮೂರು ತಿಂಗಳ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಇದನ್ನೇ ಆಧಾರವಾಗಿಸಿಕೊಂಡ ಫೈನಾನ್ಸ್ ಸಂಸ್ಥೆಯವರು ಯಾವುದೇ ಮುನ್ನೋಟೀಸ್ ಅಥವಾ ಕಾನೂನು ಪ್ರಕ್ರಿಯೆ ಅನುಸರಿಸದೆ 2025ರ ಆಗಸ್ಟ್ 6ರಂದು ಜೆಸಿಬಿ ಯಂತ್ರವನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದರು.
Also read>> ಏಷ್ಯನ್ ಗೇಮ್ಸ್‌ನಲ್ಲಿ ಪಾಡೆಲ್ ಪದಾರ್ಪಣೆ :ಭಾರತದತ್ತ ವಿಶ್ವದರ್ಜೆಯ ಆಟಗಾರರ ಮುಖ
ನಂತರ ಮಂಜಪ್ಪ ಅವರು ರೂ.1 ಲಕ್ಷ ಹಣ ಪಾವತಿಸಿ ಯಂತ್ರವನ್ನು ಹಿಂತಿರುಗಿಸುವಂತೆ ಮನವಿ ಮಾಡಿದ್ದರೂ, ಫೈನಾನ್ಸ್ ಸಂಸ್ಥೆಯವರು ಸಂಪೂರ್ಣ ಸಾಲದ ಮೊತ್ತವನ್ನು ಪಾವತಿಸುವಂತೆ ಒತ್ತಾಯಿಸಿದ್ದರು. ಇದರಿಂದ ನೊಂದ ಅವರು ವಕೀಲರ ಮೂಲಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆರ್‌ಬಿಐ ನಿಯಮ ಉಲ್ಲಂಘನೆ: ಆಯೋಗದ ಅಭಿಪ್ರಾಯ
ದೂರುದಾರ ಹಾಗೂ ಎದುರುದಾರರ ವಾದ-ಪ್ರತಿವಾದಗಳನ್ನು ಆಲಿಸಿದ ಜಿಲ್ಲಾ ಗ್ರಾಹಕರ ಆಯೋಗವು, ಫೈನಾನ್ಸ್ ಸಂಸ್ಥೆಯು ಆರ್ಬಿಐ ಮಾರ್ಗಸೂಚಿಗಳು ಹಾಗೂ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಸೇವಾ ನ್ಯೂನ್ಯತೆ ಎಸಗಿದೆ ಎಂದು ತೀರ್ಮಾನಿಸಿತು.
ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ.
45 ದಿನಗಳಲ್ಲಿ ಜೆಸಿಬಿ ಹಿಂತಿರುಗಿಸಲು ಆದೇಶ
ಆಯೋಗವು ಫೈನಾನ್ಸ್ ಸಂಸ್ಥೆಗೆ ಆದೇಶದ ದಿನಾಂಕದಿಂದ 45 ದಿನಗಳೊಳಗೆ ದೂರುದಾರರಿಗೆ ಜೆಸಿಬಿ ಯಂತ್ರವನ್ನು ಹಿಂತಿರುಗಿಸುವಂತೆ ಸೂಚಿಸಿದೆ.
ಒಂದು ವೇಳೆ 45 ದಿನಗಳ ಬಳಿಕವೂ ಜೆಸಿಬಿ ಹಿಂತಿರುಗಿಸದಿದ್ದರೆ, ಯಂತ್ರ ನೀಡುವವರೆಗೆ ಪ್ರತಿ ವಿಳಂಬದ ದಿನಕ್ಕೆ ರೂ.2,000ರಂತೆ ಪರಿಹಾರ ಮೊತ್ತವನ್ನು ದೂರುದಾರರಿಗೆ ಪಾವತಿಸಬೇಕು ಎಂದು ಆದೇಶಿಸಲಾಗಿದೆ.
ಇದಲ್ಲದೆ, ದೂರುದಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರವಾಗಿ ರೂ.10,000 ಹಾಗೂ ದೂರು ವೆಚ್ಚವನ್ನು 45 ದಿನಗಳೊಳಗೆ ಪಾವತಿಸುವಂತೆ ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದಲ್ಲಿ ವಾರ್ಷಿಕ ಶೇ.12ರ ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







