ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು ರೈಲು ನಿಲ್ದಾಣದಲ್ಲಿ ಜಿಆರ್‌ಪಿ ಹಾಗೂ ಆರ್‌ಪಿಎಫ್ ವತಿಯಿಂದ ಶಂಕಿತ ವ್ಯಕ್ತಿಗಳ ಕುರಿತು ಜಂಟಿ ಪರಿಶೀಲನೆ ನಡೆಸಿದ ವೇಳೆ 34 ಮಂದಿಯನ್ನು ವಿಚಾರಣೆಗೆ ಒಳಪಡಿಸಿ ನಂತರ ಬಿಡುಗಡೆ ಮಾಡಲಾಗಿದೆ.
ರೈಲು ಸಂಖ್ಯೆ 22817 (ಹೌರಾ–ಮೈಸೂರು ಎಕ್ಸ್‌ಪ್ರೆಸ್) ಮೂಲಕ ಕೆಲವು ಶಂಕಿತರು ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ, ಜೂನ್ 21ರಂದು ಬೆಳಿಗ್ಗೆ ಸುಮಾರು 10.30ಕ್ಕೆ ಸರ್ಕಾರಿ ರೈಲ್ವೆ ಪೊಲೀಸರು (GRP) ಹಾಗೂ ರೈಲ್ವೆ ರಕ್ಷಣಾ ಪಡೆ (RPF) ಅಧಿಕಾರಿಗಳು ರೈಲಿನಲ್ಲಿ ಪ್ರಯಾಣಿಕರ ಗುರುತು ಪರಿಶೀಲನೆ ಮತ್ತು ವಿಚಾರಣೆಯನ್ನು ನಿಯಮಾನುಸಾರ ಕೈಗೊಂಡರು.
Also Read>> ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಪರಿಶೀಲನೆ ನಡೆಯುತ್ತಿರುವ ವೇಳೆ ಹಿಂದೂ ಜಾಗರಣ ವೇದಿಕೆ, ಮೈಸೂರು ಮಂಡಲದ ಕೆಲ ಕಾರ್ಯಕರ್ತರು ರೈಲ್ವೆ ಆವರಣಕ್ಕೆ ಪ್ರವೇಶಿಸಿ ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶ ಮಾಡಿದರು. ನಂತರ ಬಾಂಗ್ಲಾದೇಶ ಮೂಲದವರಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ 34 ಮಂದಿಯನ್ನು ಹೆಚ್ಚಿನ ಪರಿಶೀಲನೆಗಾಗಿ ಮೈಸೂರು ಜಿಆರ್‌ಪಿ ಪೊಲೀಸ್ ಠಾಣೆಗೆ ಕರೆತರಲಾಯಿತು.
ಪೊಲೀಸರು ನಡೆಸಿದ ಸಮಗ್ರ ಪರಿಶೀಲನೆಯಲ್ಲಿ ಯಾವುದೇ ಪ್ರತಿಕೂಲ ದಾಖಲೆಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಎಲ್ಲಾ 34 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಸಂಬಂಧ ಮೈಸೂರು ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಆರು ಮಂದಿಯ ವಿರುದ್ಧ ಅಪರಾಧ ಸಂಖ್ಯೆ 12/2026ರಡಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಜಿಆರ್‌ಪಿ ಪೊಲೀಸರು ಮುಂದುವರಿಸಿದ್ದಾರೆ.
Also Read>> ತೀರ್ಥಹಳ್ಳಿ | ಎರಡು ಕಾರುಗಳ ನಡುವೆ ಭೀಕರ ಡಿಕ್ಕಿ | ಹಲವರಿಗೆ ಗಾಯ
ರೈಲ್ವೆ ರಕ್ಷಣಾ ಪಡೆ (RPF) ಈ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಲ್ಲ ಎಂದು ತಿಳಿದುಬಂದಿದ್ದು, ತನಿಖೆಗೆ ಅಗತ್ಯವಿರುವ ಸಹಕಾರವನ್ನು ನೀಡುತ್ತಿದೆ.
ಅಧಿಕೃತ ಸಂಸ್ಥೆಗಳ ಪರಿಶೀಲನೆ ಹಾಗೂ ತನಿಖಾ ಕಾರ್ಯಗಳಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹಸ್ತಕ್ಷೇಪ ಮಾಡದೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Comments 1