ಧಾರಾವಾಹಿ ಎಂದ ಕೂಡಲೇ ಬಹುತೇಕ ಪುರುಷರಿಗೆ ವಾಕರಿಕೆಯೇ ಸರಿ. ರಾಜಕಾರಣಿಗಳ ಪ್ರಸ್ತಾವನೆ ಬಂದಾಗ ಹೇಗೆ ತಾತ್ಸಾರದ ಕೀಳು ಮನೋಭಾವ ಹುಟ್ಟಿದೆಯೋ, ಹಾಗೆಯೇ ಕನ್ನಡ ಧಾರಾವಾಹಿಗಳ ಮೇಲೆಯೂ ಹತಾಷೆ ಮನೆ ಮಾಡಿದೆ.
ಸೀರಿಯಲ್ ನಿರ್ದೇಶಕರಲ್ಲಿ ಎಸ್. ನಾರಾಯಣ್, ಟಿ.ಎನ್. ಸೀತಾರಾಮ್, ಎಸ್.ಎನ್. ಸೇತುರಾಮ್, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿಯಂತವರು ಧಾರಾವಾಹಿ ಮಾಡುತ್ತಿದ್ದ ಕಾಲಕ್ಕೂ ಪ್ರಸ್ತುತ ಸೀರಿಯಲ್ ಮೇಕಿಂಗ್ ಸ್ವರೂಪಕ್ಕೂ ಅಜಗಜಾಂತರ ದಿಕ್ಕು ತಪ್ಪಿದೆ.
ಕಳೆದ ಎರಡು ದಶಕಗಳ ಹಿಂದೆ ಪ್ರಮೋಷನಲ್ ಅಕ್ಟಿವಿಟೀಸ್ ಅಂದ್ರೆ ಜನರ ಬಾಯಿಂದ ಬಾಯಿಗೆ ತಲುಪಿಸುವ ಉತ್ಕೃಷ್ಠ ಕಥಾಹಂದರ ಮೂಲಧಾರವಾಗಿತ್ತು. ಇತ್ತೀಚಿನ ಧಾರಾವಾಹಿಗಳ ಬಗ್ಗೆ ನಗರಗಳ ರಸ್ತೆಯುದ್ದಕ್ಕೂ ಪ್ಲೆಕ್ಸ್, ಬ್ಯಾನರ್, ನ್ಯೂಸ್ ಚಾನಲ್’ಗಳಲ್ಲಿ ಬೊಬ್ಬೆ ಹಾಕಿದರೂ ಜನರ ಮನ ಮುಟ್ಟುತ್ತಿಲ್ಲ.
ಇಂತಹ ಒಂದು ಮನಃಸ್ಥಿತಿಯ ಕಳೆದ ವಾರ ರಾತ್ರಿ ಮನೆಗೆ ತಲುಪಿದಾಗ ಅಮ್ಮ ಹಾಕಿದ ಸೀರಿಯಲ್ ಚಾನಲ್ ಚೇಂಜ್ ಮಾಡಲಿಕ್ಕೆ ಒಂದು ವಿರಾಮ ಬರುವುದನ್ನು ಕಾಯುತ್ತಿದ್ದೆ. ಒಲ್ಲದ ಮನಸ್ಸಿನಿಂದಲೇ ಹಾಗೆ ಸುಮ್ಮನೇ ಝೀ ವಾಹಿನಿಯ ಜೊತೆಜೊತೆಯಲಿ ಧಾರಾವಾಹಿ ಕಡೆ ಕಣ್ಣು ಹಾಯಿಸಿದೆ.
ಖ್ಯಾತ ಉದ್ಯಮಿ ಆರ್ಯವರ್ಧನ್ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಹೋಗುವ ದಾರಿ ಮಧ್ಯೆ ಅಟೋದಲ್ಲಿ ಹೋಗಬೇಕಾಗುತ್ತದೆ. ಮುಖ್ಯ ಅತಿಥಿ ಹಾಗೂ ನಿರೂಪಕಿ ಒಟ್ಟಿಗೆ ಪ್ರಯಾಣ ಬೆಳೆಸಿದ್ದು ಕಾರ್ಯಕ್ರಮ ಆರಂಭಿಸಿದಾಗ ತಿಳಿಸುತ್ತದೆ ಕಾರ್ಯಕ್ರಮದ ನಿರೂಪಕಿಯಾದ ಅನುಗೆ. ಹೀಗೆ ಪರಿಚಯವಾದ ಆರ್ಯವರ್ಧನ್ ಹಾಗೂ ಅನು ನಡುವಿನ ಬಾಂಧವ್ಯ ಪಾರ್ಟಿ ಮೀಟ್‌ಗೆ ಕರೆಯುವಷ್ಟು, ತಮ್ಮ ಕಂಪೆನಿಯಲ್ಲೇ ಆಕೆಗೆ ಕೆಲಸ ನೀಡಿ, ಆ ವಿಚಾರವನ್ನು ಆಕೆಯ ಮನೆಗೆ ಸ್ವತಃ ತೆರಳಿ ತಿಳಿಸುವಷ್ಟು ಅನ್ಯೂನತೆ ಬೆಳೆಯುತ್ತದೆ.
ಐಷಾರಾಮಿ ಬದುಕಿನ ಪರಿಚಯವಿಲ್ಲದ ಅನು ಮತ್ತು ಕುಟುಂಬ ಆಧುನಿಕ ಔತಣಕೂಟಗಳ ಪರಿಕಲ್ಪನೆಯಿಲ್ಲದವರು ಭಾಗವಹಿಸಿದಾಗ ಮುಗ್ದತೆಯನ್ನು ಕೀಟಾಲೆ ಮಾಡಿ ಪಜೀತಿಗೆ ಸಿಲುಕಿಸುವ ಒಂದು ವರ್ಗದ ವಿಕೃತ ಮನಸ್ಸು ಅನಾವರಣಗೊಳ್ಳುವುದು ಪ್ರಸ್ತುತ ಸಮಾಜದ ಕೆಲವೊಂದು ಮನಸ್ಸುಗಳ ಪ್ರತಿಫಲನವಾಗಿದೆ.
ಅಂತೆಯೇ, ಕಾಲೇಜಿನ ಕಾರ್ಯಕ್ರಮಕ್ಕೆ ಆಗಮಿಸುವ ಇಡಿಯ ಸನ್ನಿವೇಶದಲ್ಲಿ ಓರ್ವ ಸೆಕ್ಯುರಿಟಿಯ ಕರ್ತವ್ಯಪರತೆ ಹಾಗೂ ಆ ಘಟನೆಯಿಂದ ನಾನು ಕಲಿಯುವುದು ಇನ್ನೂ ಇದೆ ಎಂದು ಆರ್ಯವರ್ಧನ್ ಹೇಳುವುದು ಸಮಾಜಕ್ಕೆ ಉತ್ತಮ ಸಂದೇಶವೊಂದನ್ನು ನೀಡುವುದು ಪ್ರಶಂಸನೀಯವಾಗಿದೆ.
ಇನ್ನು, ಬಡ ಹಾಗೂ ಮಧ್ಯಮ ವರ್ಗದವರ ಆರ್ಥಿಕ ಬರದಲ್ಲಿ ರೂಪುಗೊಳ್ಳುವ ಪಾರ್ಟಿಯ ಮಾರ್ಪಡುಗಳ ಸಿದ್ದತೆ. ಚಿಲ್ಲರೆ ಕಾಸಿನಲ್ಲಿ ಜನ ಜಂಗುಳಿಯೊಳಗೆ ಸಿಗುವ ಚಿಕ್ಕ ಚಿಕ್ಕ ಆನಂದಗಳನ್ನು ನಾಯಕಿ ಅನು ಅರ್ಥ ಮಾಡಿಸಿದ ವೈಖರಿಗೆ ಆರ್ಯವರ್ಧನ್ ಮನಸೋತು ಬಿಡುತ್ತಾನೆ. ಈ ಕಥಾ ಹಂದರದಲ್ಲಿ ಬರುವ ಉಳಿದ ಪಾತ್ರಗಳಲ್ಲಿ ಅನು ತಂದೆ ಸಿರಿಮನೆಯವರ ಪಾತ್ರ ಮನೋಜ್ಞವಾಗಿ ಮೂಡಿ ಬರುತ್ತಿದೆ. ಎರಡು ರೂಪಾಯಿಗೂ ಬೆಲೆ ಇದೆ ಎನ್ನುವ ಸಂಭಾಷಣೆ ನೋಡುಗರ ನೆನಪಿನಲ್ಲಿ ಸುಲಭವಾಗಿ ಉಳಿದು ಬಿಡುತ್ತದೆ.
ಒಬ್ಬನಿಗೆ ಎರಡು ಹೆಂಡ್ತಿ ಅಥವಾ ಒಂದು ಅಕ್ರಮ, ಒಂದು ಸಕ್ರಮದಲ್ಲಿ ಗಂಡು ಇಡೀ ಧಾರಾವಾಹಿ ಮುಗಿಯುವ ತನಕ ಮಾಡುವ ಸರ್ಕಸ್, ಬರಿಯ ಹೆಣ್ಣು ‘ಹೀರೋ(!)’-ಹೀರೋಯಿನ್, ವಿಲನ್ ಆಗಿರುವ ಕೊನೆಯಿಲ್ಲದ ಸೀರಿಯಲ್’ಗಳು, ಒಬ್ಬ ಮಂಥರೆಯ ರೀತಿಯವಳು, ಅತ್ತೆ ಸೊಸೆಯ ಹುನ್ನಾರ ಇವೇ ಇತ್ಯಾದಿ ಸೋಗುಗಳನ್ನು ನೋಡಿ ನೋಡಿ ಬೇಸತ್ತ ವೀಕ್ಷಕರಿಗೆ ಈ ಧಾರಾವಾಹಿ ಒಂದಷ್ಟು ಹೊಸ ಭರವಸೆಯನ್ನು ಮೂಡಿಸಿದೆ.
ನಾಯಕ ಪಾತ್ರದ ಖ್ಯಾತ ನಟ ಅನಿರುದ್ಧ ಜತ್ಕರ್ ಸಹ ಪ್ರಬುದ್ಧ ನಟ ಹಾಗೂ ರಂಗಭೂಮಿ ಹಿನ್ನೆಲೆಯ ಕಲಾವಿದನ ಅಂತಃಸತ್ವ ಏನು ಎಂಬುದನ್ನು ಧಾರಾವಾಹಿಯಲ್ಲಿ ತೋರಿಸಿದ್ದಾರೆ. ಹಾಗೆಯೇ, ಪಾತ್ರಕ್ಕೆ ತಕ್ಕ ಶಕ್ತಿಯನ್ನು ತುಂಬುತ್ತಿರುವ ಅವರು ಮುಂದೆಯೂ ಸಹ ಪಾತ್ರವನ್ನು ಜೀವಂತಿಸುತ್ತಾರೆ ಎಂಬ ನಂಬಿಕೆ ಈಗಾಗಲೇ ಪ್ರೇಕ್ಷಕ ವರ್ಗದಲ್ಲಿ ಮೂಡಿದೆ.
ನಾಯಕಿ ಪಾತ್ರದ ಮೇಘಾ ಶೆಟ್ಟಿಯವರು ಪಾತ್ರಕ್ಕೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಬೇಕಿದೆ ಎಂದೆನಿಸುತ್ತದೆ.
ಕನ್ನಡ ಕಿರುತರೆಯ ಇತಿಹಾಸದಲ್ಲೇ ಟಿಆರ್‌ಪಿ ಹೊಂದಿ ಮೊದಲ ವಾರವೇ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡಿರುವುದರಿಂದ ನಿರ್ದೇಶಕರ ಜವಾಬ್ದಾರಿ ಹೆಚ್ಚಿದೆ.
ಮುಂದಿನ ದಿನಗಳಲ್ಲಿ ಹತ್ತರಲ್ಲಿ ಹನ್ನೊಂದು ಎಂದು ಆಗದೇ ಹೊಸ ಅಲೆ ಸೃಷ್ಟಿಯಾಗಲಿ.
Discussion about this post